ADVERTISEMENT

ರಾಜ್ಯದಲ್ಲೂ ಉತ್ತರ ಪ್ರದೇಶ ಮಾದರಿ ತಂತ್ರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 10:55 IST
Last Updated 8 ಜುಲೈ 2017, 10:55 IST
ಗೊಡ್ಲುಮುದ್ದೇನಹಳ್ಳಿ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ವಿಸ್ತಾರಕರ ಸಭೆಯಲ್ಲಿ ಮುಖಂಡರು ಹಾಜರಿದ್ದರು
ಗೊಡ್ಲುಮುದ್ದೇನಹಳ್ಳಿ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ವಿಸ್ತಾರಕರ ಸಭೆಯಲ್ಲಿ ಮುಖಂಡರು ಹಾಜರಿದ್ದರು   

ವಿಜಯಪುರ: ಉತ್ತರ ಪ್ರದೇಶದ ಚುನಾವಣೆಯಲ್ಲಿ ಪಕ್ಷ ಅನುಸರಿಸಿದ ಬೂತ್‌ ಮಟ್ಟದ ವಿಶೇಷ ರಣತಂತ್ರವನ್ನೇ ರಾಜ್ಯದಲ್ಲೂ ಪಾಲಿಸಲಾಗುವುದು ಎಂದು  ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಾಜಣ್ಣ ಹೇಳಿದರು. ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಬೂತ್‌ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಪಕ್ಷವನ್ನು ಗಟ್ಟಿಗೊಳಿಸಲು 15 ದಿನಗಳ ವಿಸ್ತಾರಕ್‌ ಕಾರ್ಯಕ್ರಮವನ್ನು ಜುಲೈ 1ರಿಂದ ಹಮ್ಮಿಕೊಳ್ಳಲಾಗಿದೆ. 15 ದಿನಗಳ ಕಾಲ ನಿಗದಿ ಮಾಡಿದ ಬೂತ್‌ಗಳಲ್ಲೇ ಉಳಿಯಬೇಕು. ಕೇಂದ್ರ ಸರ್ಕಾರದ ಯೋಜನೆಗಳು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.

ಎಲ್ಲ ವರ್ಗದ ಜನರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳೀಯ ನಾಯಕತ್ವ ರೂಪಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ವಿಸ್ತಾರಕರು ಪರಿಶಿಷ್ಟ ಜಾತಿ ಮತ್ತು ವರ್ಗದ ಜನತೆ, ರೈತರು, ಯುವಕರು, ಮಹಿಳಾ ಸ್ವ–ಸಹಾಯ ಗುಂಪುಗಳು, ಸೇವಾ ಸಂಸ್ಥೆಗಳು, ಹಿರಿಯ ನಾಗರಿಕರನ್ನು ಭೇಟಿ ಮಾಡಬೇಕು ಎಂದು ಅವರು ಹೇಳಿದರು.

ADVERTISEMENT

ಬಿಜೆಪಿ ಮುಖಂಡ ಡಿ.ಆರ್.ನಾರಾಯಣಸ್ವಾಮಿ ಮಾತನಾಡಿ, 2018ರ  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶವಿದೆ. ಅದಕ್ಕಾಗಿ ವಿಸ್ತಾರಕರ ಮೂಲಕ ಬಿಜೆಪಿ ಪಕ್ಷದ ಸಾಧನೆಗಳನ್ನು ಮನವರಿಕೆ ಮಾಡಿಕೊಡಲಾಗುವುದು. ಪಕ್ಷದ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ರಾಷ್ಟ್ರಮಟ್ಟದ ಎಲ್ಲಾ ನಾಯಕರು ವಿಸ್ತಾರಕರಾಗಿ ಕೆಲಸ ಮಾಡಲಿದ್ದೇವೆ ಎಂದರು.

ಬಿಜೆಪಿ ಎಸ್‌ಸಿ ಘಟಕದ ರಾಜ್ಯ ಉಪಾಧ್ಯಕ್ಷ ಜಿ.ಚಂದ್ರಣ್ಣ, ಪ್ರತಿದಿನ 25 ಮನೆಗಳಿಗೆ ಭೇಟಿ ನೀಡಿ ಅಲ್ಪಸಂಖ್ಯಾತ ಸಮುದಾಯದ ನಿವಾಸಗಳಲ್ಲಿ ಕುಟುಂಬಸ್ಥರ ಜತೆ ಚರ್ಚೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು, ವೈದ್ಯರು, ವಕೀಲರು ಮತ್ತು ಕಾರ್ಮಿಕರ ಗುಂಪುಗಳನ್ನು ರಚಿಸಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ತಿಳಿಸಲಾಗುವುದು ಎಂದರು.

ಈ ಮೂಲಕ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಬಿಜೆಪಿ ಮತ್ತು ಅಲ್ಪಸಂಖ್ಯಾತ ಸಮುದಾಯದ ನಡುವೆ ನಿರ್ಮಿಸಿರುವ ಗೋಡೆಯನ್ನು ನಾಶ ಮಾಡುವುದಾಗಿ ಹೇಳಿದರು.
ಬಿಜೆಪಿ ಮುಖಂಡರಾದ ದೇ.ಸೂ.ನಾಗರಾಜ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎನ್.ರಾಜಗೋಪಾಲ್, ಬೊಮ್ಮವಾರ ಸುನೀಲ್, ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ, ಸುಭ್ರಮಣಿ, ರಾಮಕೃಷ್ಣಹೆಗಡೆ, ರಾಮು ಭಗವಾನ್ ಹಾಜರಿದ್ದರು.

* * 

ಪ್ರತಿ ಮನೆಗೂ ಭೇಟಿ ನೀಡಿ, ಬಿಜೆಪಿ  ಬೆಂಬಲಿಸಲು ಮನವೊಲಿಸಬೇಕು. ಬೂತ್‌ ಮಟ್ಟದಲ್ಲಿ ಪಕ್ಷ ಗಟ್ಟಿಯಾದರೆ, ಶೇ 50ರಿಂದ 60ರಷ್ಟು ಮತ ಪಡೆಯಲು ಸಾಧ್ಯ
ಬಿ.ರಾಜಣ್ಣ ,
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.