ADVERTISEMENT

ರಾತ್ರಿ ವೇಳೆ ಈ ಮೈದಾನ ಅನೈತಿಕ ತಾಣ !

ಕಾಂಪೌಂಡ್ ಇಲ್ಲದ ಕಿರಿಯ ಕಾಲೇಜು, ವಿದ್ಯುತ್ ದೀಪ ಸಹ ಇಲ್ಲ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 8:57 IST
Last Updated 6 ಫೆಬ್ರುವರಿ 2017, 8:57 IST

ವಿಜಯಪುರ:  ಪಟ್ಟಣದ ಕಿರಿಯ ಕಾಲೇಜು ಮೈದಾನಕ್ಕೆ ಕಾಂಪೌಂಡ್ ವ್ಯವಸ್ಥೆಯಿಲ್ಲದೆ ಇರುವ ಕಾರಣ ರಾತ್ರಿಯ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಸ್ಥಳೀಯ ನಾಗರಿಕರಾದ ವೆಂಕಟೇಶ್, ನಾರಾಯಣಸ್ವಾಮಿ, ರಮೇಶ್ ಬಾಬು ಮುಂತಾದವರು ಆರೋಪಿಸಿದ್ದಾರೆ.

ಪಟ್ಟಣದ ದೇವನಹಳ್ಳಿ ರಸ್ತೆಯಲ್ಲಿರುವ ಕಿರಿಯ  ಕಾಲೇಜಿನ ಪಕ್ಕದಲ್ಲಿರುವ ಕ್ರೀಡಾ ಮೈದಾನದಲ್ಲಿ ಕಲ್ಲಿನಿಂದ ಹಾಸುಗಳು ಹಾಗೂ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆಯಾದರೂ ಮೈದಾನದಲ್ಲಿ ವಿದ್ಯುತ್ ದೀಪದ ವ್ಯವಸ್ಥೆಯಾಗಲಿ, ನೀರಿನ ವ್ಯವಸ್ಥೆಯಾಗಲಿ ಇಲ್ಲ.

ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಪ್ರೌಢಶಾಲಾ ವಿಭಾಗದ ಮಕ್ಕಳು ದೈಹಿಕ ಶಿಕ್ಷಣದ ಅವಧಿಯಲ್ಲಿ ಮೈದಾನದಲ್ಲಿ  ಆಟಗಳನ್ನು ಆಡುತ್ತಾರೆ. ಈ ವೇಳೆ ಕೆಲವು ಮಂದಿ ಪುಂಡರು ದ್ವಿಚಕ್ರ ವಾಹನಗಳ ಮೂಲಕ ಮೈದಾನಕ್ಕೆ ನುಗ್ಗಿ ಹೆಣ್ಣುಮಕ್ಕಳನ್ನು ಚುಡಾಯಿಸುತ್ತಾರೆ. ಕೆಲವೊಮ್ಮೆ ಶಿಕ್ಷಕರಿಗೂ ಧಮಕಿ ಹಾಕಿದ್ದಾರೆ. ಇದರಿಂದ ಮಕ್ಕಳ ದೈಹಿಕ ಶಿಕ್ಷಣ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ.

ಪ್ರತಿ ವರ್ಷ ನಡೆಯುವ ರಾಷ್ಟ್ರೀಯ ಹಬ್ಬಗಳ ಆಚರಣೆ, ಹೋಬಳಿ ಮಟ್ಟದ ಕ್ರೀಡಾಕೂಟಗಳು, ಶಾಲಾ ಹಂತಗಳಲ್ಲಿನ ಕ್ರೀಡಾಕೂಟಗಳು, ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಕಾಲೇಜಿನ ಮೈದಾನವನ್ನು ಬಳಕೆ ಮಾಡಲಾಗುತ್ತದೆ.

ಮೈದಾನದ ಸಮೀಪವಿರುವ ಮನೆಗಳಲ್ಲಿನ ನೀರನ್ನು ಮ್ಯಾನ್ ಹೋಲ್ ಗಳಿಗೆ ಹರಿಸುತ್ತಾರೆ. ಕೆಲವೊಮ್ಮೆ ಮ್ಯಾನ್ ಹೋಲ್ ಗಳು ತುಂಬಿಹೋದರೆ ಕೊಳಚೆ  ನೀರೆಲ್ಲವೂ ಮೈದಾನದೊಳಗೆ ಬರುತ್ತದೆ. ಇದರಿಂದ ಸುತ್ತಮುತ್ತಲಿನ ಮನೆಗಳಲ್ಲಿ ವಾಸ ಮಾಡುವ ನಾಗರಿಕರು ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ.

ಪದವಿ ಪೂರ್ವ ಕಾಲೇಜನ್ನು  ನವೀಕರಣಗೊಳಿಸಿದ ನಂತರ ನಡೆದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ್ದ ಶಾಸಕರು ಮೈದಾನದ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಿ, ವಿದ್ಯುತ್ ದೀಪಗಳ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಅದರಂತೆ ಈ ಮೈದಾನದ ಕಡೆಗೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿನ ಎಲ್ಲ ಶಾಲಾ ಮಕ್ಕಳು ಕ್ರೀಡೆಗಳನ್ನು ಆಡಲು ಇಲ್ಲಿಗೆ ಬರುತ್ತಾರೆ. ಅವರಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ ಇಲ್ಲಿನ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಸಕರು ಪಟ್ಟಣದ ಅಭಿವೃದ್ಧಿಗೆ ₹ 7.5 ಕೋಟಿ ಯೋಜನೆ  ರೂಪಿಸುತ್ತಿದ್ದಾರೆ ಎಂದರು.

ಮೈದಾನದ ಕಾಂಪೌಂಡ್ ನಿರ್ಮಾಣ ಹಾಗೂ ಕ್ರೀಡಾ ಮೈದಾನದ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು ಎಂದು  ಸುರೇಶ್, ವಿ.ಪಿ.ಚಂದ್ರು, ಮುನಿಕೃಷ್ಣಪ್ಪ, ಮುನೀಂದ್ರ, ಲೊಕೇಶ್, ದೇವರಾಜ್, ಕೆಂಪೇಗೌಡ, ವೆಂಕಟೇಶ್, ಮನೋಹರ್, ಮಂಜುನಾಥ್, ಮುನಿಕೃಷ್ಣಪ್ಪ ಮುಂತಾದವರು ಒತ್ತಾಯಿಸಿದ್ದಾರೆ.

*
ಗ್ರಾಮಾಂತರ ಪ್ರದೇಶಗಳು ಸೇರಿದಂತೆ ಪಟ್ಟಣಗಳಲ್ಲಿ ಕ್ರೀಡಾ ಮೈದಾನಗಳ ಅಭಿವೃದ್ಧಿಗೆ ಪೂರಕವಾಗಿ ಕ್ರೀಡಾ ಇಲಾಖೆ ಗಮನಹರಿಸಬೇಕು.
–ಎಸ್. ಮಂಜುನಾಥ್,
ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT