ADVERTISEMENT

ರೇಷ್ಮೆ ಬೆಳೆಗಳಲ್ಲಿ ನಷ್ಟ : ಆತಂಕ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 9:34 IST
Last Updated 5 ಸೆಪ್ಟೆಂಬರ್ 2017, 9:34 IST

ವಿಜಯಪುರ: ತೀವ್ರ ಮಳೆಯ ಕೊರತೆ ಹಾಗೂ ಹಿಪ್ಪುನೇರಳೆ ಸೊಪ್ಪಿನಲ್ಲಿನ ನೀರಿನ ಅಂಶದ ಕೊರತೆಯಿಂದಾಗಿ ರೈತರು ರೇಷ್ಮೆ ಬೆಳೆಗಳಲ್ಲಿ ನಷ್ಟ ಅನುಭವಿಸುವಂತಾಗಿದೆ ಎಂದು ರೇಷ್ಮೆ ರೈತರು ಆತಂಕ ತೋಡಿಕೊಂಡಿದ್ದಾರೆ.

ರೈತರಾದ ನಾರಾಯಣಸ್ವಾಮಿ, ಸೋಮಶೇಖರ್, ಆಂಜಿನಪ್ಪ, ಅಶೋಕ್ ಕುಮಾರ್, ಗೋಪಸಂದ್ರ ನಾಗರಾಜ್ ಈ ಸಂಬಂಧ ಕಹಿ ಘಟನೆಗಳನ್ನು ನೆನಪು ಮಾಡಿದ್ದಾರೆ.
ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಮಾತನಾಡಿದ ರೈತರು, ‘ಬಹಳಷ್ಟು ರೈತರು, ರೇಷ್ಮೆ ಉದ್ಯಮದಿಂದ ಹಿಂದೆ ಸರಿಯುತ್ತಿದ್ದಾರೆ. ಮೊದಲಿದ್ದಷ್ಟು ಲಾಭದಾಯಕವಾಗಿ ಉದ್ಯಮ ಇಲ್ಲ, ಹಿಂದಿನಿಂದ ನಮ್ಮ ತಂದೆ, ತಾತನವರು ಈ ಕಸುಬು ಮಾಡಿಕೊಂಡು ಬಂದಿದ್ದಾರೆ’ ಎಂದರು.

‘ನಮಗೆ ಈ ಉದ್ಯಮ ಬಿಟ್ಟರೆ, ಬೇರೆ ಕಸುಬು ಗೊತ್ತಿಲ್ಲ, ಅದಕ್ಕಾಗಿ ನಾವು ರೇಷ್ಮೆ ಬೆಳೆ ಬೆಳೆಯುತ್ತಿದ್ದೇವೆ. ಹಿಪ್ಪುನೇರಳೆ ಬೆಳೆಯೊದಕ್ಕೆ ಬೋರ್ ಗಳಲ್ಲಿ ನೀರಿಲ್ಲ, ಬೇರೆ ಕಡೆಯಲ್ಲಿ ಕೊಂಡು ಮೇಯಿಸೋಣವೆಂದರೆ ಒಂದು ಮೂಟೆಗೆ ₹ 700 ಕೊಡಬೇಕು. 100 ಮೊಟ್ಟೆಗೆ ₹ 3500 ಕೊಡಬೇಕು. ಹಿಪ್ಪುನೇರಳೆ ಸೊಪ್ಪು ಕೊಂಡು ಮೇಯಿಸಿದರೂ ಬೆಳೆ ಚೆನ್ನಾಗಿ ಆಗುತ್ತೆ ಎನ್ನುವ ನಂಬಿಕೆಯಿಲ್ಲ, 100 ಮೊಟ್ಟೆಗೆ 50 ಕೆ.ಜಿ.ಗೂಡು ಬೆಳೆಯುವುದು ಕಷ್ಟವಾಗಿದೆ’ ಎನ್ನುತ್ತಾರೆ.

ADVERTISEMENT

‘ರೇಷ್ಮೆ ಬಿತ್ತನೆ ಮೊಟ್ಟೆಯನ್ನು ಎರಡು ಜ್ವರವೆಬ್ಬಿಸಿ ಕೊಡುತ್ತಾರೆ, ನಮ್ಮಲ್ಲಿ ಮೂರು ಜ್ವರವೆದ್ದು ಸೊಪ್ಪು ತಿನ್ನುವಷ್ಟರಲ್ಲಿ ಪುಡಿಬರುತ್ತಿವೆ. ಹುಳುಗಳಿಗೆ ಸಪ್ಪೆರೋಗ ಬರುತ್ತಿದೆ. ವಾತಾವರಣ ಚೆನ್ನಾಗಿದ್ದು, ಹುಳು ಸಾಕಾಣಿಕೆ ಮನೆಗಳಲ್ಲಿ ಉತ್ತಮವಾಗಿ ಉಷ್ಣಾಂಶ ಕಾಪಾಡಿಕೊಂಡು ಬಂದು ಹಣ್ಣಾಗಿಸಿದರೂ ಚಂದ್ರಿಕೆಗಳಲ್ಲಿ ಹಾಕಿದರೆ ಗೂಡು ಕಟ್ಟುವುದೇ ಇಲ್ಲ. ಇದರಿಂದ ಬೇಸತ್ತು ಬಹಳಷ್ಟು ರೈತರು ಉದ್ಯಮದಿಂದ ದೂರ ಸರಿದು ನಗರ ಪ್ರದೇಶಗಳ ಕಡೆಗೆ ವಲಸೆ ಹೋಗುತ್ತಿದ್ದಾರೆ’ ಎಂದರು.

‘ಇಲ್ಲಿನ ಮಾರುಕಟ್ಟೆಗೆ ಬರುತ್ತಿದ್ದ ರೇಷ್ಮೆಗೂಡಿನ ಪ್ರಮಾಣ 400 ಲಾಟು ಗಳಿಂದ ಕೇವಲ 138 ಲಾಟುಗಳಿಗೆ ಇಳಿಮುಖವಾಗಿದೆ, ಬಹುತೇಕ ಜಾಲರಿಗಳು ಬಣಗುಡುತ್ತಿವೆ. ಲಾಟುಗಳು ಕಡಿಮೆಯಾಗುತ್ತಿರುವುದರಿಂದ ರೇಷ್ಮೆ ಉದ್ಯಮವನ್ನೆ ನಂಬಿಕೊಂಡು ಜೀವನ ಮಾಡುತ್ತಿರುವ ರೀಲರುಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ರೀಲರುಗಳನ್ನು ನಂಬಿಕೊಂಡು ಜೀವನ ಮಾಡುತ್ತಿರುವ ಬಹಳಷ್ಟು ಮಂದಿ ನೂಲು ಬಿಚ್ಚಾಣಿಕೆ ಘಟಕಗಳಲ್ಲಿನ ಕಾರ್ಮಿಕರ ಪರಿಸ್ಥಿತಿಯು ಸಂಕಷ್ಟಕ್ಕೆ ಒಳಗಾಗುವಂತಾಗಿದೆ’ ಎನ್ನುತ್ತಾರೆ.

ಒಂದು ತಿಂಗಳ ಕಾಲ ಆಷಾಢದಲ್ಲಿ ಗಾಳಿಯಿಂದಾಗಿ ಹಿಪ್ಪುನೇರಳೆಯ ಎಲೆಗಳಲ್ಲಿ ನೀರಿನ ಅಂಶದ ಕೊರತೆ ಕಾಡುತ್ತಿತ್ತು, ಈಚೆಗೆ ಮೋಡಮುಸುಕಿದ ವಾತಾವರಣದಿಂದ ಬೆಳೆಗಳು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ, ರೈತರು ಹಿಪ್ಪುನೇರಳೆ ತೋಟಗಳಿಗೆ ಹಸಿರೆಲೆಗಳ ಗೊಬ್ಬರ, ಕೊಟ್ಟಿಗೆ ಗೊಬ್ಬರಗಳನ್ನು ಹಾಕುವ ಮೂಲಕ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು. ಆಗ ಮಾತ್ರ ಸ್ವಲ್ಪ ಮಟ್ಟಿಗೆ ಎಲೆಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗಬಹುದು ಎಂದು ಈ ಎಲ್ಲ ರೈತರು ಹೇಳುತ್ತಾರೆ.

ಹಿಪ್ಪುನೇರಳೆ ಮಾರಾಟ ಮಾಡುವ ರೈತರು ಯೂರಿಯಾವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವುದರಿಂದಲೂ ಹುಳುಗಳ ಮೇಲೆ ಪರಿಣಾಮ ಬೀರುತ್ತದೆ. ನೀರು ಕಡಿಮೆ ಇರುವ ರೈತರು ಗುಳಿಪದ್ಧತಿಗೆ ಹೋಗುವುದು ಒಳ್ಳೆಯದು ಎಂದು ಉಪನಿರ್ದೇಶಕ ಎಂ.ಎಸ್. ಬೈರಾರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.