ADVERTISEMENT

ರೈತನ ಖಾತೆಯಿಂದ 2.34 ಲಕ್ಷ ವಂಚನೆ

ಆನ್‌ಲೈನ್‌ ವ್ಯವಹಾರದ ಶಂಕೆ; ದೂರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 10:15 IST
Last Updated 12 ಜನವರಿ 2017, 10:15 IST
ರೈತನ ಖಾತೆಯಿಂದ 2.34 ಲಕ್ಷ ವಂಚನೆ
ರೈತನ ಖಾತೆಯಿಂದ 2.34 ಲಕ್ಷ ವಂಚನೆ   
ಮಾಗಡಿ: ತಾಲ್ಲೂಕಿನ ಉಕ್ಕಡ ಗುಡ್ಡಹಳ್ಳಿಯ ರೈತ ತಿಬ್ಬಯ್ಯ ಅವರ ಮಗ ಶಿವಣ್ಣರ ವೀರೇಗೌಡನದೊಡ್ಡಿಯ ಬ್ಯಾಂಕ್ ಒಂದರ ಖಾತೆಯಲ್ಲಿದ್ದ ₹2.34 ಲಕ್ಷ ಮೊತ್ತವನ್ನು ಆನ್‌ಲೈನ್‌ ಬ್ಯಾಂಕಿಂಗ್‌ ಮೂಲಕ  ಯಾರೋ ವರ್ಗಾವಣೆ ಮಾಡಿ ವಂಚಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
 
‘ಖಾತೆಯ ಮೊತ್ತವನ್ನು ಮುಂಬೈನಲ್ಲಿ ವರ್ಗಾಯಿಸಿ ವಂಚಿಸಲಾಗಿದೆ’ ಎಂದು ಮಾಹಿತಿ ಲಭಿಸಿದೆ ಎಂದು ಶಿವಣ್ಣ ತಿಳಿಸಿದ್ದಾರೆ. ‘ಆನ್‌ಲೈನ್‌ ಮೂಲಕ ಹಣ ಅಪಹರಿಸಲಾಗಿದೆ ಎಂದು ಬ್ಯಾಂಕಿನ ಮ್ಯಾನೇಜರ್‌ ಹಾಗೂ ಪೊಲೀಸರಿಗೆ ದೂರು ನೀಡಿರುವೆ’ ಎಂದು ಅವರು ತಿಳಿಸಿದ್ದಾರೆ.
 
‘2008ರಲ್ಲಿ ಒಂದೂವರೆ ಲಕ್ಷ ತುಂಬಿಸಿದ ನಂತರ ನಾಲ್ಕೈದು ಬಾರಿ ಬ್ಯಾಂಕ್‌ ವ್ಯವಹಾರ ನಡೆಸಿದ್ದೇನೆ. ಅನಾಮಿಕನೊಬ್ಬ ನನ್ನ ಖಾತೆಗೆ ಒಮ್ಮೆ 17 ಸಾವಿರ ಮತ್ತು  ₹18 ಸಾವಿರ ಜಮೆ ಮಾಡಿದ್ದಾನೆ. ಜಮೆಯಾಗಿರುವುದನ್ನು ನಾನು ನೋಡಿರಲಿಲ್ಲ. ಬಳಿಕ ಹಣ ಅಪಹರಿಸಿದಾಗಲೂ ನಾನು ಗಮನಿಸಿಲ್ಲ’ ಎಂದಿದ್ದಾರೆ.
 
ಜನವರಿ 9ರಂದು ಮಾಗಡಿ ಬ್ಯಾಂಕ್ ಶಾಖೆಯಲ್ಲಿ ಪಾಸ್‌ ಪುಸ್ತಕದ ಎಂಟ್ರಿ ಮಾಡಿಸಿದಾಗ ಖಾತೆಯಲ್ಲಿ ಹಣ ಇಲ್ಲ ಎಂಬ ಮಾಹಿತಿ ದೊರೆಯಿತು ಎಂದು ಅವರು ಪ್ರಜಾವಾಣಿಗೆ ತಿಳಿಸಿದ್ದಾರೆ.
 
ಈ ಕುರಿತು  ಮರುದಿನ ಮೂಲ ಶಾಖೆಗೆ ಬಂದು ವಿಚಾರಿಸಿದಾಗ ಬ್ಯಾಂಕಿನ ಸಿಬ್ಬಂದಿ  ಮುಂಬೈಯಲ್ಲಿ ಆನ್‌ಲೈನ್‌ ಮೂಲಕ ಹಣ ಡ್ರಾ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದ್ದಾರೆ.
 
‘ಹೊರ ರಾಜ್ಯದಲ್ಲಿ ಎಟಿಎಂ ಬಳಸಿಲ್ಲ. ಬೇರೆಯಾವುದೇ ಪ್ರದೇಶದಲ್ಲಿ ಎಟಿಎಂ ಮೂಲಕ ನಾನು ವ್ಯವಹಾರ ಮಾಡಿಲ್ಲ’ ಎಂದು ಅವರು ವಿವರಿಸಿದ್ದಾರೆ. ‘ಯಾರಿಗೂ ಪಾಸ್‌ವರ್ಡ್‌ ಕೊಟ್ಟಿಲ್ಲ. ಪತ್ನಿಗೂ  ಎಟಿಎಂ ಕಾರ್ಡ್‌ನ ಗುಪ್ತಸಂಖ್ಯೆ ತಿಳಿದಿಲ್ಲ. ಹಣ ಪಡೆದರೆ ಅಥವಾ ಜಮಾ ಮಾಡಿದರೆ ನನಗೆ ಮೆಸೇಜ್ ಬರುವ ವ್ಯವಸ್ಥೆಯಿಲ್ಲ’ ಎಂದು ಶಿವಣ್ಣ ವಿವರಿಸಿದ್ದಾರೆ.
 
ಕಂಪ್ಯೂಟರ್‌ ಬಳಕೆ ಗೊತ್ತಿಲ್ಲ.  ನನ್ನಲ್ಲಿ ಮೊಬೈಲ್‌ ಇಲ್ಲ. ಬ್ಯಾಂಕಿನ ವಿವರಗಳನ್ನು ಯಾರೂ ಕೇಳಿಲ್ಲ. ಖಾತೆಯಿಂದ ಹಣ ಅಪಹರಿಸಿದವರನ್ನು ಪೊಲೀಸರು ಮತ್ತು ಬ್ಯಾಂಕ್‌ನವರು ಪತ್ತೆಹಚ್ಚಿ ಹಣ ವಾಪಸ್‌  ಕೊಡಿಸುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
 
***
ಕೃಷಿಯಲ್ಲಿ ಬಂದ ಅಲ್ಪಸ್ವಲ್ಪ ಹಣ ಸೇರಿಸಿ ₹ 1.5 ಲಕ್ಷವನ್ನು 2008ರಲ್ಲಿ ಖಾತೆ ಪ್ರಾರಂಭಿಸಿ  ಜಮೆ ಮಾಡಿದ್ದೆ.  2016ರ ನವೆಂಬರ್ 11ರಂದು 1 ಲಕ್ಷ ಜಮೆ ಮಾಡಿದ್ದೆ
-ಶಿವಣ್ಣ, ಬ್ಯಾಂಕ್‌ ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.