ADVERTISEMENT

‘ರೈತರ ಹಾಲಿನ ದರ ಮಾತ್ರ ಇಳಿಸಿಲ್ಲ’

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 9:07 IST
Last Updated 27 ಜುಲೈ 2017, 9:07 IST

ದೊಡ್ಡಬಳ್ಳಾಪುರ: ‘ಬೆಂಗಳೂರು ಹಾಲು ಒಕ್ಕೂಟದಲ್ಲಿ ದಿನಕ್ಕೆ 17 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಇದಕ್ಕೆ ಪೂರಕವಾಗಿ ಹಾಲಿನ ಮಾರಾಟ ಕಡಿಮೆಯಿದೆ. ಒಕ್ಕೂಟ ನಷ್ಟ ಅನುಭವಿಸುತ್ತಿದ್ದರೂ ರೈತರಿಗೆ ಹಾಲಿನ ದರ ಕಡಿಮೆ ಮಾಡಿಲ್ಲ’ ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಎಚ್. ಅಪ್ಪಯ್ಯಣ್ಣ ಹೇಳಿದರು.

ದೊಡ್ಡಬಳ್ಳಾಪುರದ ಹಾಲು ಒಕ್ಕೂಟ ಶಿಬಿರದ ಕಚೇರಿಯಲ್ಲಿ ಹಾಲು ಉತ್ಪಾದಕರ ವೈದ್ಯಕೀಯ ವೆಚ್ಚದ ಪರಿಹಾರದ ಚೆಕ್‌ಗಳನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.

ರೈತರು ರಾಸುಗಳನ್ನು ಸಾಕುವಾಗ ಕೌ ಮ್ಯಾಟ್‌ಗಳು, ಮೇವು ಕಟಾವು ಯಂತ್ರ ಮೊದಲಾಗಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೈನುಗಾರಿಕೆ ಮಾಡಬೇಕಿದೆ ಎಂದರು.
ಒಕ್ಕೂಟದಿಂದ  ಹಲವಾರು ಯೋಜನೆಗಳಿಗೆ ಸಹಾಯಧನದ ಪ್ರಯೋಜನ ಪಡೆಯಬಹುದಾಗಿದೆ. ಕೊಟ್ಟಿಗೆ ಶುಭ್ರವಾಗಿ ಇಟ್ಟುಕೊಳ್ಳದಿದ್ದರೆ, ಹಸುಗಳಿಗೆ ಕಾಲುಬಾಯಿ, ಕೆಚ್ಚಲುಬಾವು ಮೊದಲಾದ ರೋಗಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತವೆ ಎಂದರು.

ADVERTISEMENT

ಒಂದು ಮ್ಯಾಟ್‌ನ ಮಾರುಕಟ್ಟೆ ಬೆಲೆ ₹1,975ಗಳಾಗಿದ್ದು, ಇದನ್ನು ₹ 1,225ಗಳಿಗೆ ಹಾಲು ಒಕ್ಕೂಟದಿಂದ ನೀಡಲಾಗುತ್ತಿದೆ. ತಾಲ್ಲೂಕಿಗೆ 5 ಸಾವಿರ ಮ್ಯಾಟ್‌ಗಳನ್ನು ವಿತರಿಸಲು ಬೇಡಿಕೆ ಸಲ್ಲಿಸಲಾಗಿದೆ ಎಂದರು. ಅರ್ಹ ಫಲನುಭವಿಗಳಿಗೆ  ವಿತರಿಸಲಾಗುವುದು. ಆದರೆ ಇದನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು ಎಂದರು.

ಮುಂದಿನ ವರ್ಷಗಳಲ್ಲಿ ಹಾಲು ಉತ್ಪಾದನೆ 20 ಲಕ್ಷ ಲೀಟರ್ ಮುಟ್ಟಲಿದೆ. ಕನಕಪುರ ಸಮೀಪ ₹ 500 ಕೋಟಿ ಅಂದಾಜು ವೆಚ್ಚದಲ್ಲಿ ಅತ್ಯಾಧುನಿಕ ಹಾಲು ಸಂಸ್ಕರಣೆ ಹಾಗೂ ಉಪ ಉತ್ಪನ್ನಗಳ ತಯಾರಿಕಾ ಘಟಕ ನಿರ್ಮಿಸಲಾಗಿದೆ.  ಇದು ಸಾಕಾರಗೊಂಡರೆ ರೈತರ ಹಾಲಿಗೆ ಉತ್ತಮ ಬೆಲೆ ಬರಲಿದೆ.

ತಾಲ್ಲೂಕಿನಲ್ಲಿ ಪಶು ಆಹಾರ ಘಟಕ ಸ್ಥಾಪನೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಇದೇ ವೇಳೆ ವೈದ್ಯಕೀಯ ವೆಚ್ಚದ ಪರಿಹಾರದ ಫಲಾನುಭವಿಗಳಿಗೆ ₹15,000 ಹಾಗೂ ವಿಶೇಷ ಪರಿಹಾರದ ₹10,000ಗಳ ಚೆಕ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಮ್ಯಾಟ್‌ಗಳನ್ನು ವಿತರಿಸಲಾಯಿತು.

ಶಿಬಿರದ ಉಪವ್ಯವಸ್ಥಾಪಕ ಡಾ.ಎಂ. ಶ್ರೀನಿವಾಸ್, ಡಾ. ಎಲ್.ಬಿ. ನಾಗರಾಜು, ಎಪಿಎಂಸಿ ನಿರ್ದೇಶಕ ಕೆ.ಸಿ. ಲಕ್ಷ್ಮೀನಾರಾಯಣ್, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಪುಟ್ಟಬಸವರಾಜು, ಜೆಡಿಎಸ್ ಮುಖಂಡರಾದ ಒಬದೇನಹಳ್ಳಿ ಮುನಿಯಪ್ಪ ಕುಂಟನಹಳ್ಳಿ ಮಂಜುನಾಥ್ ಇದ್ದರು.

* * 

ಕೌ ಮ್ಯಾಟ್‌ಗಳನ್ನು ಹಾಕಿದರೆ ಕೊಟ್ಟಿಗೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಮ್ಯಾಟ್ ಹಾಕಿದರೆ ರಾಸುಗಳು ಜಾರುವುದಿಲ್ಲ, ಗಾಯಗಳು ಆಗುವುದಿಲ್ಲ
ಎಚ್.ಅಪ್ಪಯ್ಯಣ್ಣ, ಬಮೂಲ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.