ADVERTISEMENT

ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಕಲಿಕೆ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 10:55 IST
Last Updated 28 ನವೆಂಬರ್ 2014, 10:55 IST

ದೊಡ್ಡಬಳ್ಳಾಪುರ: ಜಾಗತೀಕರಣದ ಸಂದರ್ಭದಲ್ಲಿ ಗ್ರಾಮೀಣ ವಿದ್ಯಾರ್ಥಿ­ಗಳು ಸಹ ಕನ್ನಡ ಭಾಷೆಯೊಂದಿಗೆ ಆಂಗ್ಲಭಾಷೆಯನ್ನು ಕಲಿಯುವ ಮೂಲಕ ಉತ್ತಮ ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಹೇಳಿದರು.

ಜ್ಞಾನಗಂಗಾ ವಿದ್ಯಾಸಂಸ್ಥೆ ಮತ್ತು ಸಹ್ಯಾದ್ರಿ ವಿದ್ಯಾ ಟ್ರಸ್ಟ್ ನೇತೃತ್ವದಲ್ಲಿ ನಡೆದ ಜ್ಞಾನಗಂಗಾ ಮತ್ತು ಸಹ್ಯಾದ್ರಿ ಪ್ರಾಥಮಿಕ, ಪ್ರೌಢ ಶಾಲೆಗಳ ವಾರ್ಷಿ­ಕೋತ್ಸವ ಮತ್ತು ಪ್ರತಿಭಾ ಪುರ­ಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ವಾರ್ಷಿ­ಕೋತ್ಸವಗಳು ಶೈಕ್ಷಣಿಕ ಹಬ್ಬ­ವಿದ್ದಂತೆ ಈ ನಿಟ್ಟಿನಲ್ಲಿ ಮಕ್ಕಳಲ್ಲಿನ ಪ್ರತಿ­ಭೆಗಳ ಅನಾವರಣಕ್ಕೆ ವೇದಿಕೆ­ಯಾಗಿದೆ. ಈ ಹಂತದಲ್ಲಿ ವಾರ್ಷಿ­ಕೋತ್ಸವಗಳು ಸಾಂಸ್ಕೃತಿಕ ಹಬ್ಬಗಳಾಗಬೇಕಿದೆ. ಶಾಲಾ ವಾರ್ಷಿಕೋತ್ಸವಗಳು ಪಠ್ಯಗಳನ್ನು ಹೊರತುಪಡಿಸಿ ಮಕ್ಕಳಿನ ಸುಪ್ತ ಪ್ರತಿಭೆಗಳನ್ನು ಹೊರಹಾಕುವಲ್ಲಿ ಸಹ­ಕಾರಿ­ಯಾಗುತ್ತವೆ.

ಓದಿನ ಜೊತೆಗೆ ಸಾಮಾಜಿಕ ಒಡನಾಟ ಬೆಳಸಿಕೊಳ್ಳಲು ಆತ್ಮಸ್ಥೈರ್ಯವನ್ನು ತುಂಬುವಲ್ಲಿ ಇಂತಹ ವೇದಿಕೆಗಳು ಮಕ್ಕಳಿಗೆ ಅವಶ್ಯಕ­ವಾಗಿವೆ. ಇಂತಹ ವೇದಿಕೆ ಕಾರ್ಯ­ಕ್ರಮಗಳಿಗೆ ಕೆಲವೇ ಆಯ್ದ ಮಕ್ಕಳು ಪಾಲ್ಗೊಂಡರೆ ಕಾರ್ಯಕ್ರಮ ಸಂಪೂರ್ಣ ಸಾರ್ಥಕತೆ ಪಡೆಯುವಲ್ಲಿ ವಿಫಲವಾಗುತ್ತವೆ. ಜ್ಞಾನಗಂಗಾ ವಿದ್ಯಾ­ಸಂಸ್ಥೆ ಕಾರ್ಯ­ದರ್ಶಿ ಆರ್.­ವಿಜಯ­­ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಲಿ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುನ್ನತ ದರ್ಜೆ ಪಡೆದ ವಿದ್ಯಾರ್ಥಿಗಳಾದ ಕೆ.ಎಂ. ಚಂದ್ರಶೇಖರ್, ಆರ್.ಚೇತನ್ ಸಿ.ಕೆ. ಬಾಸ್ಕರ್, ಎಚ್.ಎ.ಚಂದನ, ಎಸ್. ಹೇಮಂತಕುಮಾರ್, ಎಂ.ಡಿ.ನವ್ಯ, ಎಚ್.ಸಿ.ನವ್ಯಶ್ರೀ, ವಿ.ರುಚಿತ, ಸಿ.ಜಿ. ಸದ್ಗುಣ, ಪಿ.ಸಹನ, ಎಸ್.ಹೇಮಂತ್, ಸುಜಯ್.ಕೆ ಗೌಡ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಶಾಲಾ ಮಕ್ಕಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ­ಕೊಟ್ಟರು. ಕಾರ್ಯಕ್ರಮದಲ್ಲಿ ನೂರಾರು ಪೊಷಕರು ಕಾರ್ಯಕ್ರಮ­ದಲ್ಲಿ ಪಾಲ್ಗೊಂಡಿದ್ದರು.

ಕ.ಸಾ.ಪ. ಅಧ್ಯಕ್ಷ ಡಿ. ಶ್ರೀಕಾಂತ ಅನಿ­ಕೇತನ ಟ್ರಸ್ಟ್‌ನ ಎನ್.ಎಂ. ನಟರಾಜ್, ಜ್ಞಾನಗಂಗಾ ವಿದ್ಯಾಸಂಸ್ಥೆ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಮಂಜು­ನಾಥ್,ಖಜಾಂಚಿ ರಾಜೇಶ್, ನಿರ್ದೇಶಕ­ರಾದ ಪುಟ್ಟರಾಜು, ಗದಗಯ್ಯ, ಪ್ರಭು,ಸತೀಶ್,ಮಹೇಶ್, ಕೃಷ್ಣ­ಮೂರ್ತಿ , ಸುರೇಶ್, ಜ್ಞಾನಗಂಗಾ ಪ್ರೌಢ ಶಾಲೆ ಮುಖ್ಯೋಪಾದ್ಯಾಯ ಕೆ.ಎನ್. ಹನುಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.