ADVERTISEMENT

ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಪಾದಯಾತ್ರೆ

ಪೊಲೀಸರ ಜತೆ ವಾಗ್ವಾದ: 300ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 7:04 IST
Last Updated 22 ಡಿಸೆಂಬರ್ 2014, 7:04 IST

ದೇವನಹಳ್ಳಿ:  ಬಯಲುಸೀಮೆಗೆ ಶಾಶ್ವತ ನೀರಾವರಿ ಕಲ್ಪಿಸುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ಯುವಮೋರ್ಚಾ ಆಯೋಜಿಸಿ­ರುವ ಪಾದಯಾತ್ರೆ ಪ್ರತಿಭಟನೆ ಸ್ವರೂಪ ಪಡೆದು ಗೊಂದಲ ಉಂಟಾದ ಘಟನೆ ಭಾನುವಾರ ಪಟ್ಟಣದಲ್ಲಿ ನಡೆಯಿತು. ಪಾದಯಾತ್ರೆ ಮಾರ್ಗಕ್ಕೆ ಸಂಬಂಧಿಸಿದಂತೆ ಪೊಲೀಸರ ಜತೆ ಬಿಜೆಪಿ ಕಾರ್ಯಕರ್ತರು ಬಿರುಸಿನ ವಾಗ್ವಾದ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಮುನ್ನೂ­ರಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಡಿ.20 ರಂದು ಚಿಕ್ಕಬಳ್ಳಾ­ಪುರದಿಂದ ಕಾಲ್ನಡಿಗೆಯಲ್ಲಿ ಬಂದಿದ್ದ ಕಾರ್ಯಕರ್ತರು, ಶನಿವಾರ ರಾತ್ರಿ ಖಾಸಗಿ ರೆಸಾರ್ಟ್ ಮತ್ತು ವಸತಿ ಗೃಹಗಳಲ್ಲಿ ವಾಸ್ತವ್ಯ ಹೂಡಿದ್ದರು. ಬೆಳಿಗ್ಗೆ 9 ಗಂಟೆಗೆ ಪಾದಯಾತ್ರೆ ಕಾರ್ಯ­ಕ್ರಮದ ನಿಗದಿಯಂತೆ ಹೊಸ ಬಸ್ ನಿಲ್ದಾಣದಲ್ಲಿ ಸಮಾವೇಶ­ಗೊಂಡು ಮುಖಂಡರು ಭಾಷಣ ಮಾಡಿ ಹೊರಡುವ ವೇಳೆ ಕಾಲ್ನಡಿಗೆಯಲ್ಲಿ ರಸ್ತೆಗೆ ನುಗ್ಗಲೆತ್ನಿಸಿದಾಗ ಪೊಲೀಸರ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಗದ್ದಲ ಉಂಟಾಯಿತು. ಗಂಭೀರತೆ ಅರಿತ ಪೊಲೀಸರು ಕಾನೂನು ಉಲ್ಲಂಘನೆ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಕಾರ್ಯಕರ್ತರು  ಪಟ್ಟು ಬಿಡಲಿಲ್ಲ. 

ಬಂಧನಕ್ಕೆ ಕಾರಣವೇನು?: ಶಾಶ್ವತ ನೀರಾವರಿ ಹೋರಾಟದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಚಿಕ್ಕ­ಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಬೆಂಗಳೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನವಿ ಸಲ್ಲಿಸಿ ಪಾದಯಾತ್ರೆಗೆ ಅನುಮತಿ ಕೋರಿ ಭದ್ರತೆ ಒದಗಿಸುವಂತೆ ಅನುಮತಿ ಪಡೆ­ದಿತ್ತು.

ಅದೇ ರೀತಿ ರಾಷ್ಟ್ರೀಯ ಹೆದ್ದಾರಿ–7ರ ಮಾರ್ಗದಲ್ಲಿನ ಜಾಥಾಕ್ಕೂ ಅನು­ಮತಿಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡಿರಲಿಲ್ಲ ಅಲ್ಲದೆ ನಿರಾ­ಕರಿಸಿಯೂ ಇರಲಿಲ್ಲ. ಪ್ರಾಧಿಕಾರದ ಅನು­ಮತಿ ಪತ್ರ ಬಿಜೆಪಿ ಕಾರ್ಯಕರ್ತರು ಪಡೆದಿರಲಿಲ್ಲ. ಹೀಗಾಗಿ ಬೆಂಗಳೂರು ನಗರದ ಮೇಖ್ರಿ ವೃತ್ತದಿಂದ ಮುನಿರೆಡ್ಡಿ ಪಾಳ್ಯ, ಕಂಟೋನ್‌­ಮೆಂಟ್‌, ಇಂಡಿಯನ್ ಎಕ್ಸ್‌­ಪ್ರೆಸ್, ವಿಧಾನಸೌಧ ಮಾರ್ಗವಾಗಿ ಫ್ರೀಡಂ ಪಾರ್ಕ್‌ಗೆ ಭಾನುವಾರವೇ ತೆರಳಬೇಕು. ಇದರಿಂದ ಸಂಚಾರ ಸುಗಮ ವ್ಯವಸ್ಥೆಗೆ ಅನುಕೂಲವಾಗಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿತ್ತು.

ಆದರೆ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮೇಖ್ರಿ ವೃತ್ತ, ಸದಾ­ಶಿವನಗರ, ಅಶೋಕ ಹೋಟೆಲ್ ರಸ್ತೆ ಮಾರ್ಗವಾಗಿಯೇ ಫ್ರೀಡಂ­ಪಾರ್ಕ್‌ಗೆ ತೆರಳುತ್ತೇವೆ ಎಂದು ಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾದರು. ಸೋಮವಾರ ಇಲಾಖೆವಾರು ಅಧಿ­ಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಸಂಚಾರ ವ್ಯವಸ್ಥೆಗೆ ತೊಂದರೆಯಾಗಲಿದೆ ಎಂದು ಎಷ್ಟೇ ಮನವರಿಕೆ ಮಾಡಿದರೂ ಪಟ್ಟು ಸಡಿಲಿಸಲಿಲ್ಲ. ಹೀಗಾಗಿ ಕಾರ್ಯ­ಕರ್ತರನ್ನು ಬಂಧಿಸುವುದು ಅನಿವಾರ್ಯ­ವಾಯಿತು ಎಂಬುದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

ಎಲ್ಲೆಲ್ಲಿ ಬಂಧನ?:  ದೇವನಹಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ಮೂರು ಬಸ್‌ ಮತ್ತು ಒಂದು ಪೊಲೀಸ್ ವಾಹನದಲ್ಲಿ ಕಾರ್ಯಕರ್ತರನ್ನು ಬಂಧಿಸಲಾಯಿತು. ನಂತರ ವಿವಿಧ ಮಾರ್ಗಗಳ ಮೂಲಕ ದೇವನಹಳ್ಳಿ ಬೈಪಾಸ್ ಮೂಲಕ ಬೆಂಗ­ಳೂರಿಗೆ ತೆರಳಲು ಯತ್ನಿಸಿದಾಗ ಪೊಲೀ­ಸರು ತಡೆದರು. ಇದನ್ನು ವಿರೋ­ಧಿಸಿ 3 ಗಂಟೆಗಳ ಕಾಲ ಪ್ರತಿಭಟನೆ ನಡೆ­ಸಿದ ಕಾರ್ಯಕರ್ತರನ್ನು ಕಾಯ್ದಿರಿ­ಸಿದ ನಾಲ್ಕು ಬಸ್‌ಗಳಲ್ಲಿ ಬಂಧಿಸಿದರು. ಅರ್ಧ ಗಂಟೆಯ ನಂತರ ರಾಷ್ಟ್ರೀಯ ಹೆದ್ದಾರಿ 7ರ ಚಿಕ್ಕಸಣ್ಣೆಗೇಟ್ ಬಳಿ ಕಾಲ್ನಡಿಗೆ­ಯಲ್ಲಿ ತೆರಳುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ತಡೆ­ದಾಗ ರಸ್ತೆ ಮೇಲೆ ಮಲಗಿ ಪ್ರತಿಭಟಿ­ಸಿ­ದರು. ಅವರನ್ನು ಸಹ ಪೊಲೀಸರು ಬಂಧಿಸಿದರು. ರಸ್ತೆಯು­ದ್ದಕ್ಕೂ ಅಲ್ಲಲ್ಲಿ ಸಾಗುತ್ತಿದ್ದ ಕಾರ್ಯ­ಕರ್ತ­ರನ್ನು ಸಹ ಹುಡುಕಿ ಬಂಧಿಸಲಾಯಿತು.

ಬಂಧಿತ ಪ್ರಮುಖರು: ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್.­ಈಶ್ವರಪ್ಪ, ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಮುನಿರಾಜು­ಗೌಡ, ಮಾಜಿ ಶಾಸಕ ಚಂದ್ರಣ್ಣ, ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ರಾಜಣ್ಣ, ಬಿಜೆಪಿ ರಾಷ್ಟ್ರೀಯ ಪರಿಷತ್‌ ಅಧ್ಯಕ್ಷ ಎ.ಸಿ.ಗುರುಸ್ವಾಮಿ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ನಾಗರಾಜ್‌ಗೌಡ, ಕಾರ್ಯದರ್ಶಿ ಎಚ್.ಎಂ. ರವಿ­ಕುಮಾರ್, ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಗೌರವ್‌ಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಬಂಧನಕ್ಕೊಳಗಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.