ADVERTISEMENT

ಶಿಕ್ಷಣ,ಉದ್ಯೋಗ ಮೀಸಲಾತಿಗೆ ಆಗ್ರಹ:29ಕ್ಕೆ ರಾಜ್ಯ ಸಮಾವೇಶ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 7:00 IST
Last Updated 19 ಜನವರಿ 2017, 7:00 IST
ಶಿಕ್ಷಣ,ಉದ್ಯೋಗ ಮೀಸಲಾತಿಗೆ ಆಗ್ರಹ:29ಕ್ಕೆ ರಾಜ್ಯ ಸಮಾವೇಶ
ಶಿಕ್ಷಣ,ಉದ್ಯೋಗ ಮೀಸಲಾತಿಗೆ ಆಗ್ರಹ:29ಕ್ಕೆ ರಾಜ್ಯ ಸಮಾವೇಶ   

ಆನೇಕಲ್‌: ‘ಭಿನ್ನಾಭಿಪ್ರಾಯಗಳನ್ನು ಮರೆತು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದಲು ರೆಡ್ಡಿ ಸಮುದಾಯ ಸಂಘಟಿತ ಪ್ರಯತ್ನ ಮಾಡಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನುಡಿದರು.

ತಾಲ್ಲೂಕಿನ ಮರಸೂರು ಗೇಟ್ ಬಳಿಯ ವೈಕೆಆರ್ ಕಲ್ಯಾಣ ಮಂಟಪದಲ್ಲಿ ರಾಜ್ಯ ಮಟ್ಟದ ರೆಡ್ಡಿ ಸಮಾವೇಶದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಇದೇ  29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ರೆಡ್ಡಿ ಸಮಾವೇಶದಲ್ಲಿ 20ಕ್ಕೂ ಹೆಚ್ಚು ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಿ ಅವುಗಳ ಈಡೇರಿಕೆಗೆ ಒತ್ತಾಯ ಮಾಡಲಾಗುವುದು. ಈ ಸಂದರ್ಭದಲ್ಲಿ ಸಮಾಜದ ಹೆಚ್ಚು ಜನರು ಪಾಲ್ಗೊಳ್ಳುವ ಮೂಲಕ ಸಂಘಟನೆಗೆ ಬಲ ತುಂಬಬೇಕು ಎಂದರು.

ಆನೇಕಲ್ ತಾಲ್ಲೂಕು ಬೆಂಗಳೂರಿಗೆ ಸಮೀಪದಲ್ಲಿದ್ದು ತಾಲ್ಲೂಕಿನ ಪ್ರತಿ ಗ್ರಾಮದಿಂದ ಸಮಾಜದ ಕಾರ್ಯಕರ್ತರು ಮುಖಂಡರು ಭಾಗವಹಿಸುವ ನಿಟ್ಟಿನಲ್ಲಿ ಪ್ರಚಾರ ಕೈಗೊಳ್ಳಬೇಕು ಎಂದರು.

ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಮಾತನಾಡಿ ರೆಡ್ಡಿ ಸಮುದಾಯದ ಅಭಿವೃದ್ದಿ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಹಲವು ವರ್ಷಗಳ ನಂತರ ನಡೆಯುತ್ತಿರುವ ಸಂಘಟನೆಯ ಕಾರ್ಯದಲ್ಲಿ ಎಲ್ಲರೂ ಭಾಗಿಗಳಾಗಬೇಕು. ತಮ್ಮ ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದೆ ಪ್ರಬಲವಾಗಿ ಮಂಡಿಸಲು ಪಕ್ಷ ಬೇಧವಿಲ್ಲದೇ ಒಗ್ಗೂಡಬೇಕು ಎಂದರು.

‘ಬಮೂಲ್’ ಅಧ್ಯಕ್ಷ ಆರ್.ಕೆ.ರಮೇಶ್ ಮಾತನಾಡಿ ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ರೆಡ್ಡಿ ಸಮುದಾಯದ ಜನಸಂಖ್ಯೆಯಿದೆ. ಹಲವಾರು ಮಂದಿ ಸೌಲಭ್ಯಗಳಿಲ್ಲದೇ ವಂಚಿತರಾಗಿದ್ದಾರೆ. ಶಿಕ್ಷಣ, ಉದ್ಯೋಗ ಮತ್ತಿತರ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಕಲ್ಪಿಸಿಕೊಡಲು ಸಂಘಟಿತ ಪ್ರಯತ್ನ ಮಾಡಲು ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು. 

ಕೋನಪ್ಪನ ಅಗ್ರಹಾರ ವೇಮನ ಪೀಠದ ನಾರಾಯಣರೆಡ್ಡಿ ಸ್ವಾಮೀಜಿ, ರೆಡ್ಡಿ ಜನಸಂಘದ ಅಧ್ಯಕ್ಷ ವಿಜಯರಾಮರೆಡ್ಡಿ, ಕಾರ್ಯದರ್ಶಿ ಮುನಿನಾಗಪ್ಪ, ಶಂಕರರೆಡ್ಡಿ, ನಿರ್ದೇಶಕರಾದ ಶೇಖರ್, ನಾಗರಾಜ ರೆಡ್ಡಿ, ಎನ್‌. ಸೋಮಶೇಖರ್‌ರೆಡ್ಡಿ, ರಾಷ್ಟ್ರೀಯ ತೋಟಗಾರಿಕಾ ಮಂಡಳಿ ನಿರ್ದೇಶಕ ಎಂ.ಬಾಬು, ಬಮೂಲ್ ನಿರ್ದೇಶಕ ಬಿ.ಜಿ.ಆಂಜಿನಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪುರುಷೋತ್ತಮ್‌, ಕೇಶವರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.