ADVERTISEMENT

‘ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆ ಧಿಕ್ಕರಿಸದಿರಿ’

ಕಾವೇರಿ ನೀರು ಹಂಚಿಕೆ ವಿಷಯಲ್ಲಿ ಪ್ರಧಾನಿಯವರಿಂದಲೂ ರಾಜ್ಯಕ್ಕೆ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 10:38 IST
Last Updated 26 ಸೆಪ್ಟೆಂಬರ್ 2016, 10:38 IST

ದೊಡ್ಡಬಳ್ಳಾಪುರ: ನಾವೆಲ್ಲರು ಭಾರತೀಯರು ಎನ್ನುವ ಹೆಮ್ಮೆ ನಮಗಿರಬೇಕು. ಒಕ್ಕೂಟ ವ್ಯವಸ್ಥೆಯನ್ನು ಧಿಕ್ಕರಿಸಿ, ಪ್ರತ್ಯೇಕ ರಾಷ್ಟ್ರವಾಗಬೇಕು ಎನ್ನುವ ನಮ್ಮ ಬೇಡಿಕೆ ಸರಿಯಲ್ಲ ಎಂದು ಕರುನಾಡ ಸೇನೆ ರಾಜ್ಯಾಧ್ಯಕ್ಷ ಅಗ್ನಿ ಶ್ರೀಧರ್ ಹೇಳಿದರು.

ನಗರದ ಒಕ್ಕಲಿಗರ ಭವನದಲ್ಲಿ ಭಾನುವಾರ ನಡೆದ ಕರುನಾಡ ಸೇನೆ ದೊಡ್ಡಬಳ್ಳಾಪುರ ತಾಲ್ಲೂಕು ಘಟಕ ಉದ್ಘಾಟಿಸಿ ಮಾತನಾಡಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಲಯದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇಲ್ಲಿ ಪ್ರಧಾನ ಮಂತ್ರಿಗಳಿಂದಲೂ ನಮಗೆ ನ್ಯಾಯ ದೊರೆತಿಲ್ಲ.  ಅಂದ ಮಾತ್ರಕ್ಕೆ ಭವ್ಯ ಪರಂಪರೆ ಇತಿಹಾಸವನ್ನು ಹೊಂದಿರುವ ಒಕ್ಕೂಟ ವ್ಯವಸ್ಥೆಯಿಂದಲೇ ಹೊರಬರುತ್ತೇವೆ ಎನ್ನುವ ಹೇಳಿಕೆಗಳು ಸರಿಯಲ್ಲ ಎಂದು ಅವರು ಚಾಟಿ ಬೀಸಿದರು.

ಭುವನೇಶ್ವರಿ ಮೆರವಣಿಗೆ: ಕರುನಾಡ ಸೇನೆ ತಾಲ್ಲೂಕು ಘಟಕ ಉದ್ಘಾಟನೆ ಅಂಗವಾಗಿ ಭಾನುವಾರ ಬೆಳಗ್ಗೆ  11 ಗಂಟೆಗೆ ಇಲ್ಲಿನ ಹಳೇ ಬಸ್‌ ನಿಲ್ದಾಣದ ಡಾ.ಬಿಆರ್. ಆಬೇಂಡ್ಕರ್ ಪುತ್ಥಳಿಗೆ ಮತ್ತು ಬಾಬು ಜಗಜೀವನ್‌ರಾಂ ಪುತ್ಥಳಿಗೆ ಮಾಲಾರ್ಪಣೆ ಮಾಡಿ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಜನಪದ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಕರುನಾಡ ಸೇನೆ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ತರಿದಾಳ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಕಾರ್ಯಾಧ್ಯಕ್ಷ ಕೆ.ಸುನಿಲ್‌ಕುಮಾರ್, ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಅದ್ದೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಸ್.ರೋಹಿತ್, ರಾಜ್ಯ ಯುವ ಘಟಕದ ಅಧ್ಯಕ್ಷ ರೋಷನ್, ಪಿವಿಸಿ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ, ಬೆಂ.ಗ್ರಾ ಜಿಲ್ಲಾ ಕಾರ್ಯದರ್ಶಿ ಎಂ.ಮುನಿಕೃಷ್ಣಪ್ಪ, ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಉಪಾಧ್ಯಕ್ಷ ಬಿ.ವಿ.ಲೋಕೇಶ್, ಕಾರ್ಯಾಧ್ಯಕ್ಷ ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ಅನಿಲ್ ಅದ್ದೆ, ಕಾನೂನು ಸಲಹೆಗಾರ ರೇಣುಕಾಮೂರ್ತಿ, ನಗರಾಧ್ಯಕ್ಷ ರಾಮಣ್ಣ, ಉಪಾಧ್ಯಕ್ಷ ವಿ. ನಾಗರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.