ADVERTISEMENT

‘ಸಮಸ್ಯೆ ನಿವಾರಣೆಗೆ ಹೋರಾಟ ಅನಿವಾರ್ಯ’

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 8:54 IST
Last Updated 21 ಜುಲೈ 2017, 8:54 IST

ವಿಜಯಪುರ: ‘ರೈತರ ಜ್ವಲಂತ ಸಮಸ್ಯೆಗಳು ನಿವಾರಣೆಯಾಗಬೇಕಾದರೆ, ರೈತರು ಸಂಘಟಿತರಾಗಿ ಹೋರಾಟಗಳನ್ನು ಮಾಡುವಂತಹ ಅನಿವಾರ್ಯತೆ ಇದೆ’ ಎಂದು ಮುಖಂಡ ಮುನಿನರಸಿಂಹಯ್ಯ ಹೇಳಿದರು. ಇಲ್ಲಿನ ಚಂದೇನಹಳ್ಳಿ ಗೇಟ್ ನಲ್ಲಿರುವ ಬಸವಕಲ್ಯಾಣ ಮಠದಲ್ಲಿ ಗುರುವಾರ ಭಾರತೀಯ ಕೃಷಿಕ ಸಮಾಜ ನವದೆಹಲಿ, ರಾಷ್ಟ್ರೀಯ ರೈತ ಸಂಘ, ಕರ್ನಾಟಕ ರಾಜ್ಯ ಇವರ ವತಿಯಿಂದ ಗುರುವಾರ ಆಯೋಜಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ದೇಶದ ಬೆನ್ನೆಲುಬು ಆಗಿರುವ ಯೋಧ ಹಾಗೂ ರೈತರ ಸೇವೆ ಅನನ್ಯ. ದೇಶಕ್ಕೆ ಅನ್ನದಾತರಾದ ರೈತರು ಹಾಗೂ ರಕ್ಷಣೆ ನೀಡುತ್ತಿರುವ ಯೋಧರ ಸಾವು ಸಂಭವಿಸುತ್ತಿರುವುದು ತುಂಬಲಾರದ ನಷ್ಟ. ಅವರಿಲ್ಲದೇ ಇದ್ದರೆ ನಮ್ಮ ಶಕ್ತಿ ಕುಂದಿಹೋಗುತ್ತದೆ’ ಎಂದರು.

ರಾಜ್ಯ ಸರ್ಕಾರ ₹ 993 ಕೋಟಿ ವೆಚ್ಚದಲ್ಲಿ ಹೆಬ್ಬಾಳ ಕೆರೆಯ ನೀರನ್ನು ಸಂಸ್ಕರಿಸಿ ಈ ಭಾಗದ ಕೆರೆಗಳಿಗೆ ಹರಿಸುವ ಯೋಜನೆಗೆ ಜುಲೈ 28 ರಂದು ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.

ADVERTISEMENT

ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಮಠದ ಬಾಲಯೋಗಿ ಸಾಯಿ ಮಂಜುನಾಥ್ ಮಹಾರಾಜ್ ಸ್ವಾಮಿ ಮಾತನಾಡಿ, ‘ಸಂಘಟನೆಗಳು ಶಿಸ್ತುಬದ್ಧವಾಗಿ ನಡೆಸುವ ಹೋರಾಟಗಳಿಗೆ ನ್ಯಾಯ ಸಮ್ಮತವಾದ  ಪ್ರತಿಫಲ ಸಿಗಲಿದೆ. ರೈತರು ಈ ದೇಶದ ಆಸ್ತಿ, ಅವರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವಂತಹ ದೊಡ್ಡ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ’ ಎಂದರು.

ರಾಷ್ಟ್ರೀಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೆಟ್ಟಕೋಟೆ ಕೃಷ್ಣಮೂರ್ತಿ ಮಾತನಾಡಿ, ‘ರಾಜ್ಯದಲ್ಲಿ ಸಾಲಬಾಧೆಯಿಂದ ಸಾವಿರಾರು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇಶದಾದ್ಯಂತ ರೈತರ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ’ ಎಂದರು.

ವಾಣಿಜ್ಯ ಉದ್ದಿಮೆಗಳು, ಬೃಹತ್ ಕಂಪೆನಿಗಳಿಗೆ ಸರ್ಕಾರಗಳು ಮಣೆ ಹಾಕುತ್ತಿವೆ.  ರೈತಾಪಿ ವರ್ಗದವರು ಉಳಿಯಬೇಕಾದರೆ ಇವರ ಅಭಿವೃದ್ಧಿಯ ವಿಚಾರದಲ್ಲಿ ಸರ್ಕಾರಗಳು ಗಂಭೀರವಾದ ಚಿಂತನೆ ನಡೆಸಬೇಕು ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಎನ್.ಸಿ.ಮುನಿವೆಂಕಟರವಣಪ್ಪ ಮಾತನಾಡಿ, ‘ವ್ಯವಸ್ಥೆಯ ಬಗ್ಗೆ ರೈತರು ಹತಾಶರಾಗಿದ್ದಾರೆ. ಇದರಿಂದ ಸಕಾಲಕ್ಕೆ ಬಿತ್ತನೆ ಆಗುತ್ತಿಲ್ಲ’ ಎಂದರು.

ಉತ್ಪಾದನಾ ವೆಚ್ಚ ಜಾಸ್ತಿ ಆಗಿದೆ. ಅದಕ್ಕೆ ತಕ್ಕಂತೆ ಆದಾಯ ಬರುತ್ತಿಲ್ಲ. ಕುಟುಂಬ ಸದಸ್ಯರ ಸ್ಥಿತಿಯ ಬಗ್ಗೆಯೂ ಯೋಚಿಸದೆ ಆತ್ಮಹತ್ಯೆಯ ಹಾದಿ ತುಳಿಯುತ್ತಾರೆ ಎಂದರು.
ಎಲ್ಲ ಪದಾಧಿಕಾರಿಗಳಿಗೆ ಆದೇಶದ ಪ್ರತಿಗಳನ್ನು ವಿತರಣೆ ಮಾಡಲಾಯಿತು.

ಭಾರತೀಯ ಕೃಷಿಕ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್, ತಾಪಂ ಸದಸ್ಯ ಕೆ.ವೆಂಕಟೇಶ್, ಗ್ರಾಮಾಂತರ ಜಿಲ್ಲಾ ಯೋಜನಾ ಸಮಿತಿ ಸದಸ್ಯ ಜೆ.ಎನ್. ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಯಲುವಹಳ್ಳಿ ಅಶೋಕ್, ಲಕ್ಷ್ಮೀನಾರಾಯಣಪ್ಪ, ಸಿ. ಮುನಿ ನಾರಾಯಣಪ್ಪ, ದೇವರಾಜ್, ಜೆ.ಆರ್.ಮುನಿವೀರಣ್ಣ, ಬಿಜ್ಜವಾರ ಸುಬ್ರಮಣಿ, ಶ್ರೀಧರ್, ಡಾ.ವಿ.ನಾ. ರಮೇಶ್, ಜಿ.ಎಂ. ಚಂದ್ರು, ವೇಣುಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.