ADVERTISEMENT

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 6:01 IST
Last Updated 18 ನವೆಂಬರ್ 2017, 6:01 IST

ದೇವನಹಳ್ಳಿ: ಖಾಸಗಿ ಶಾಲೆಗಿಂತ ಹೆಚ್ಚು ಅತ್ಯಾಧುನಿಕ ಸೌಲಭ್ಯ ಹೊಂದಿರುವ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ ಎಂದು ಸಾಮಾಜಿಕ ಭಾವಮಿಲನ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ತಿಳಿಸಿದರು. ಬಚ್ಚಹಳ್ಳಿ ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹ ಪ್ರಾಯೋಜಕತ್ವದಲ್ಲಿ ಪ್ರತಿಯೊಂದು ಸರ್ಕಾರಿ ಶಾಲೆಗಳನ್ನು ಅತ್ಯಾಧುನಿಕ ಮಾದರಿಯಲ್ಲಿ ಮಾರ್ಪಡಿಸಿ ಎಲ್ಲಾ ರೀತಿಯ ಸೌಲಭ್ಯ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಪೋಷಕರು ಆಂಗ್ಲಭಾಷೆ ವ್ಯಾಮೋಹಕ್ಕೆ ಒಳಗಾಗಿ ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ದುಬಾರಿ ವಂತಿಗೆ ತಿಂಗಳ ಶುಲ್ಕ ನೀಡಿ ಪೋಷಕರು ಬೇಸತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿನ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಅರಿವಿಲ್ಲ ಎಂದರು.

ಸರ್ಕಾರಿ ಶಾಲೆಯಲ್ಲಿ ಕೂಡುಕಲಿಕೆಯಿಂದ ನೈತಿಕತೆಯ ನೀತಿ ಬೋಧನೆ, ಸಾಮಾಜಿಕ ಮೌಲ್ಯ, ಸಿಗಲಿದೆ. ಶಿಸ್ತು, ಸಮವಸ್ತ್ರದ ಹೆಸರಿನಲ್ಲಿ ಖಾಸಗಿ ಶಾಲೆಗಳು ಮಕ್ಕಳ ಮೇಲೆ ಒತ್ತಡ ಹೇರುತ್ತಿವೆ. ಬಾಲ್ಯ ವ್ಯವಸ್ಥೆಯ ಶಿಕ್ಷಣ ಮಕ್ಕಳ ವಿವೇಚನೆಯಂತೆ ನಡೆಯಬೇಕೇ ಹೊರತು ಅಂಕಗಳಿಗೆ ತಾಕೀತು ಮಾಡಬಾರದು ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್‌ ಮಾತನಾಡಿ, ಕುಂದಾಣ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಯಾವುದೇ ರೀತಿಯ ಕೊರತೆ ಇಲ್ಲ. ಕುಡಿಯುವ ನೀರು, ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ವಾಚನಾಲಯ, ಕ್ರೀಡಾ ಸಾಮಗ್ರಿ ಮತ್ತು ಪ್ರಭಾತ್‌ ಫೇರಿ, ಪರಿಕರಗಳ ಸೌಲಭ್ಯಗಳಿವೆ. ವಿಷಯವಾರು ಶಿಕ್ಷಕರೂ ಇದ್ದಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಮಾತನಾಡಿ, ವಿವಿಧ ಖಾಸಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪೆನಿಗಳು ಸಾಮಾಜಿಕ ಕಳಕಳಿಯಡಿ ಒಟ್ಟು 9 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಗುರುತಿಸಿವೆ. ಅಂದಾಜು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಆಧುನಿಕ ಕೊಠಡಿಗಳನ್ನು ನಿರ್ಮಿಸಲು ಮುಂದಾಗಿವೆ ಎಂದರು.

ನೂತನ ಸರ್ಕಾರಿ ಪ್ರೌಢಶಾಲೆಗೆ 4.20 ಎಕರೆ ಉಚಿತವಾಗಿ ಭೂಮಿ ನೀಡಿದ ಮುನಿಶಾಮಪ್ಪಗೌಡರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಮುರಳಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಯುವ ಕಾಂಗ್ರೆಸ್‌ ಘಟಕ ಅಧ್ಯಕ್ಷ ಮಾರುತಿ ಇದ್ದರು.

₹ 10 ಕೋಟಿ ವೆಚ್ಚದಲ್ಲಿ ವಸತಿ ಶಾಲೆ ಆರಂಭ
ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್‌ ಮಾತನಾಡಿ, ಕುಂದಾಣ ಹೋಬಳಿ ಕೇಂದ್ರದಲ್ಲಿ ಹತ್ತು ಕೋಟಿ ವೆಚ್ಚದಲ್ಲಿ ಬಾಲಕ ಮತ್ತು ಬಾಲಕಿಯರ ವಸತಿ ಶಾಲೆ ಆರಂಭವಾಗಿದ್ದು, 600 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.

ಯಾವುದೇ ಅಂತರರಾಷ್ಟ್ರೀಯ ಗುಣಮಟ್ಟದ ವಸತಿ ಶಾಲೆಗಿಂತ ಕಡಿಮೆ ಇಲ್ಲ. ರಾಜ್ಯ ಸರ್ಕಾರ ಹೋಬಳಿಗೆ ಒಂದರಂತೆ ಐದು ವಸತಿ ಶಾಲೆಗಳನ್ನು ನಿರ್ಮಾಣ ಮಾಡಿದ್ದು, ಉತ್ತಮ ಶೈಕ್ಷಣಿಕ ಸೌಲಭ್ಯ  ಕಲ್ಪಿಸಿದೆ. ಸರ್ಕಾರದ ಯೋಜನೆ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.