ADVERTISEMENT

ಸಾವಯವ ಕೃಷಿಗೆ ಸರ್ಕಾರದ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 10:05 IST
Last Updated 6 ಜುಲೈ 2017, 10:05 IST

ತೂಬಗೆರೆ (ದೊಡ್ಡಬಳ್ಳಾಪುರ): ‘ಮಣ್ಣಿನ ಪರೀಕ್ಷೆ ಮೂಲಕ ಫಲವತ್ತತೆಯನ್ನು ಅರಿತು ಬೇಸಾಯ ಮಾಡುವುದಕ್ಕೆ ಪ್ರಥಮ ಆದ್ಯತೆ ನೀಡಬೇಕು’ ಎಂದು ಶಾಸಕ ಪಿಳ್ಳಮುನಿಶಾಮಪ್ಪ ಹೇಳಿದರು. ಅವರು ತಾಲ್ಲೂಕಿನ ತೂಬಗೆರೆ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಬುಧವಾರ ನಡೆದ  ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿ ಯಂತ್ರಧಾರೆ ಯೋಜನೆ ಮೂಲಕ ರೈತರಿಗೆ ಕಡಿಮೆ ಬೆಲೆಯಲ್ಲಿ  ಉಳುಮೆಗೆ  ಕೃಷಿ ಯಂತ್ರಗಳನ್ನು ಬಾಡಿಗೆಗೆ ನೀಡುತ್ತಿದೆ. ಇದರಿಂದ ನೂರಾರು ಸಣ್ಣ ಹಿಡುವಳಿದಾರ ರೈತರಿಗೆ ಅನುಕೂಲವಾಗಲಿದೆ ಎಂದರು.  

ರಾಜ್ಯ ಸರ್ಕಾರ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಬೆಳೆಯಲು ಉತ್ತೇಜನ ನೀಡುತ್ತಿದೆ. ರೈತರು ಸಿರಿಧಾನ್ಯ ಬೆಳೆಯುವ ಕಡೆ ಗಮನ ಹರಿಸಬೇಕಿದೆ. ಇವುಗಳಿಗೆ ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ಸರ್ಕಾರದ ಸಾವಯವ ಭಾಗ್ಯ ಯೋಜನೆಯಡಿ ನಗರ ಪ್ರದೇಶಗಳಲ್ಲಿ ‘ಸಿರಿಧಾನ್ಯ ಮೇಳ’ಗಳನ್ನು ಆಯೋಜಿಸಲಾಗುತ್ತದೆ ಎಂದರು.

ADVERTISEMENT

ರಾಗಿ, ಜೋಳ, ನವಣೆ, ಸಾಮೆ, ಸಜ್ಜೆ, ಹಾರಕ, ಬರಗು, ಊದಲಿನಂತಹ ಸಿರಿಧಾನ್ಯಗಳಲ್ಲಿರುವ ಔಷಧೀಯ ಗುಣ ಮತ್ತು ಅವುಗಳ ಸೇವನೆಯಿಂದ ರೋಗಿಯಲ್ಲಿನ ಮಧುಮೇಹ, ರಕ್ತದೊತ್ತ ಡದಂತಹ ರೋಗಗಳು ನಿಯಂತ್ರಣಕ್ಕೆ ಬರಲಿದೆ ಎಂದರು.  ಕೃಷಿ ಅಭಿಯಾನದ ಅಂಗವಾಗಿ ವಿವಿಧ ಕೃಷಿ ಪರಿಕರಗಳ ಹಾಗೂ ಕೃಷಿ ಧಾನ್ಯಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿಅಕ್ಕಯ್ಯಮ್ಮ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ್‌, ಹಾಡೋನಹಳ್ಳಿ ಗ್ರಾಪಂ ಅಧ್ಯಕ್ಷ ಎಚ್‌. ನಾರಾಯಣಪ್ಪ ಇದ್ದರು.

ಮುಖಂಡರಾದ ಮೇಳೇಕೋಟೆ ಆಂಜಿನಪ್ಪ, ಜಗನ್ನಾಥಚಾರ್‌, ಬೈರಪ್ಪ, ಮುದ್ದುಕೃಷ್ಣ, ನಾರಾಯಣಪ್ಪ, ಬಮೂಲ್‌ ಮುಖಂಡ ಜಿ.ಎಂ. ಚನ್ನಪ್ಪ,  ವೆಂಕಟೇಶ್‌, ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿ. ತಿಮ್ಮೇಗೌಡ, ನಟೇಶ್‌ ಸೇರಿದಂತೆ ಗ್ರಾಪಂ ಸದಸ್ಯರು ಹಾಗೂ ರೈತರು ಭಾಗವಹಿಸಿದ್ದರು.

ರಾಸುಗಳಿಗೆ ಕಡ್ಡಾಯ ವಿಮೆ
‘ಬಮೂಲ್‌’ ಅಧ್ಯಕ್ಷ ಎಚ್‌. ಅಪ್ಪಯ್ಯಣ್ಣ ಮಾತನಾಡಿ, ಹೈನುಗಾರಿಕೆಯಿಂದ ಗ್ರಾಮೀಣ ಭಾಗದ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ ಎಂದರು. ರೈತರು ತಮ್ಮ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿದರೆ, ರಾಸುಗಳು ಅಕಾಲಿಕ ಮರಣ ಹೊಂದಿದಾಗ ನಷ್ಟ ಅನುಭವಿಸುವುದು ತಪ್ಪಲಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ರೈತರಿಗೆ ಹಲವಾರು ಯೋಜನೆಗಳನ್ನು ‘ಬಮೂಲ್‌’ ರೂಪಿಸಿದೆ. ಇವುಗಳ ಉಪಯೋಗ ಪಡೆಯಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.