ADVERTISEMENT

‘ಸ್ವಂತ ಕಟ್ಟಡ ಹೊಂದಲು ನೆರವು’

​ಪ್ರಜಾವಾಣಿ ವಾರ್ತೆ
Published 23 ಮೇ 2017, 10:16 IST
Last Updated 23 ಮೇ 2017, 10:16 IST

ದೊಡ್ಡಬಳ್ಳಾಪುರ: ತಾಲ್ಲೂಕಿನ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೂ ಸುಸಜ್ಜಿತವಾದ ಕಟ್ಟಡಗಳನ್ನು ಹೊಂದುವಂತೆ ಒಕ್ಕೂಟದ ವತಿಯಿಂದ ಎಲ್ಲ ರೀತಿಯ ಸಹಕಾರ ಹಾಗೂ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಎಚ್‌. ಅಪ್ಪಯ್ಯಣ್ಣ ಹೇಳಿದರು.

ಅವರು ತಾಲ್ಲೂಕಿನ ನೆಲ್ಲುಕುಂಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ತಾಲ್ಲೂಕಿನಲ್ಲಿ 231 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ಇದರಲ್ಲಿ 161 ಸಂಘಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. ಎಲ್ಲ ಸಂಘಗಳು ಸ್ವಂತ ಕಟ್ಟಡಗಳನ್ನು ಹೊಂದಲು ಅಗತ್ಯ ಇರುವ ಎಲ್ಲ ರೀತಿಯ ನೆರವನ್ನು ಬೆಂಗಳೂರು ಹಾಲು ಒಕ್ಕೂಟ ನೀಡಲಿದೆ ಎಂದರು.

ರೈತರು ಸರಬರಾಜು ಮಾಡುವ ಹಾಲಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಬರಗಾಲದಲ್ಲಿ ನೀಡಲಾಗುತ್ತಿದ್ದ ಪ್ರೋತ್ಸಾಹಧನವನ್ನು ಮಾತ್ರ ಈಗ ಕಡಿತ ಮಾಡಲಾಗಿದ್ದು, ಹಾಲಿನ ದರದಲ್ಲಿ ಯಾವುದೇ ಕಡಿತವಾಗಿಲ್ಲ. ಒಕ್ಕೂಟಕ್ಕೆ ಹಾಲಿ ಸರಬರಾಜಾಗುತ್ತಿದ್ದ 13 ಲಕ್ಷ ಲೀಟರ್ ಹಾಲು ಈಗ 15 ಲಕ್ಷ ಲೀಟರ್‌ಗಳಿಗೆ ಏರಿಕೆಯಾಗಿದೆ.

ADVERTISEMENT

4 ತಿಂಗಳಲ್ಲಿ   ₹ 60 ಕೋಟಿ  ಪ್ರೋತ್ಸಾಹಧನ ನೀಡಲಾಗಿದೆ. ಈ ದಿಸೆಯಲ್ಲಿ ಹಾಲು ಒಕ್ಕೂಟದ ಲಾಭದಲ್ಲಿ ನೀಡಲಾಗುತ್ತಿದ್ದ ಪ್ರೋತ್ಸಾಹಧನ ಮಾತ್ರ ಕಡಿತಗೊಳಿಸಲಾಗಿದ್ದು, ಈ ಹಿಂದೆ ಲೀಟರ್‌ಗೆ ₹2 ನೀಡುತ್ತಿದ್ದುದು ಈಗ 0.50 ಪೈಸೆ ನೀಡಲಾಗುತ್ತಿದೆ. ಪಶು ಆಹಾರಕ್ಕೆ ನೀಡಲಾಗುತ್ತಿದ್ದ ₹ 3 ಪ್ರೋತ್ಸಾಹಧನ ನಿಲ್ಲಿಸಲಾಗಿದೆ.

ಆದರೂ ಬೆಂಗಳೂರು ಹಾಲು ಒಕ್ಕೂಟ (ಬಮುಲ್) ರಾಜ್ಯದ ಇತರೆ ಹಾಲು ಒಕ್ಕೂಟಗಳಿಗಿಂತ ರೈತರು ಸರಬರಾಜು ಮಾಡುವ ಹಾಲಿಗೆ ಹೆಚ್ಚಿನ ದರ ನೀಡುತ್ತಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ನೆಲ್ಲುಕುಂಟೆ ಎಂಪಿಸಿಎಸ್‌ ಅಧ್ಯಕ್ಷ ಗಣೇಶಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಟಿಎಪಿಎಂಸಿಎಸ್‌ ನಿರ್ದೇಶಕ ಕೆ.ಸಿ. ಲಕ್ಷ್ಮೀನಾರಾಯಣ್‌, ದೊಡ್ಡಬಳ್ಳಾಪುರ ಹಾಲು ಶೀಥಲ ಕೇಂದ್ರದ ಉಪವ್ಯವಸ್ಥಾಪಕ ಡಾ.ಶ್ರೀನಿವಾಸ್‌ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.