ADVERTISEMENT

ಹಾಲು ಉತ್ಪಾದನೆ ಪ್ರಮಾಣದಲ್ಲಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 4:01 IST
Last Updated 22 ಅಕ್ಟೋಬರ್ 2017, 4:01 IST

ವಿಜಯಪುರ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಹೈನೋದ್ಯಮ ದಲ್ಲಿ ಹಾಲಿನ ಉತ್ಪಾದನೆಯ ಪ್ರಮಾಣ ಏರಿಕೆಯಾಗುತ್ತಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡುತ್ತಿದೆ. ನಾಲ್ಕು ವರ್ಷಗಳಿಂದ ತೀವ್ರ ಬರಗಾಲಕ್ಕೆ ಒಳಗಾಗಿದ್ದ ಬಯಲು ಸೀಮೆ ಭಾಗದಲ್ಲಿನ ರೈತಾಪಿ ವರ್ಗವನ್ನು ಹೈನೋದ್ಯಮ ಕೈ ಹಿಡಿದಿತ್ತು.

ಕಳೆದ ವರ್ಷ ಮಳೆಯ ಕೊರತೆಯಿಂದಾಗಿ ಹಾಲಿನ ಉತ್ಪಾದನೆ ಕಡಿಮೆಯಾಗಿತ್ತು. ಈಚೆಗೆ ಬೀಳುತ್ತಿರುವ ಮಳೆಯಿಂದ ರಾಸುಗಳಿಗೆ ಅಗತ್ಯವಾಗಿರುವ ಹಸಿರು ಮೇವು ಸಿಗುತ್ತಿರುವುದರಿಂದ ಹಾಲಿನ ಉತ್ಪಾದನೆಯು ಹೆಚ್ಚಾಗುತ್ತಿದೆ.

ತಾಲ್ಲೂಕಿನಲ್ಲಿ ಪ್ರತಿದಿನ 1.41 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿ ಬಮೂಲ್ ಗೆ ಹೋಗುತ್ತಿತ್ತು. ಈಗ 1.47 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.
ಜಾನುವಾರುಗಳಿಗೆ ಅಗತ್ಯ ಹಸಿರು ಮೇವು ಹಾಗೂ ಕುಡಿಯುವ ನೀರು ಲಭಿಸುವ ಕಾರಣ ಹಸುಗಳ ದರ ಏರಿಕೆಯಾಗುತ್ತಿದೆ.

ADVERTISEMENT

10 ಲೀಟರ್ ಹಾಲು ಉತ್ಪಾದನೆ ಮಾಡುವ ಒಂದು ಹಸುವಿಗೆ ₹50 ಸಾವಿರ ಕೊಡಬೇಕು. ಎಚ್.ಎಫ್. ತಳಿಯ ಕರುಗಳಿಗೂ ಹೆಚ್ಚು ಬೇಡಿಕೆಯಿದೆ ಎಂದು ಹಸುಗಳ ಮಧ್ಯವರ್ತಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಮೇವು ಮತ್ತು ನೀರು ಕೊರತೆಯಿಂದಾಗಿ ಬಹಳಷ್ಟು ರಾಸುಗಳನ್ನು ಸಂತೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂದಿದ್ವಿ, ಈಗ ಚೆನ್ನಾಗಿ ಮಳೆ ಬಿದ್ದಿದೆ. ರಾಸು ಖರೀದಿ ಮಾಡಲಿಕ್ಕೆ ಅಷ್ಟೊಂದು ಹಣ ಒದಗಿಸಲಿಕ್ಕೆ ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ರೈತ ಶಾಮಣ್ಣ ತಿಳಿಸಿದ್ದಾರೆ. ಸರ್ಕಾರದಿಂದ ಪಶುಭಾಗ್ಯ ಯೋಜನೆಯಡಿಯಲ್ಲಿ ಸೌಲಭ್ಯ ಪಡೆದು ಕೊಳ್ಳೋಣವೆಂದು ಅರ್ಜಿ ಹಾಕಿದ್ದೇವೆ. ಇದುವರೆಗು ಆಯ್ಕೆಯಾಗಿಲ್ಲ ಎಂದಿದ್ದಾರೆ.

ಪಶುಭಾಗ್ಯ ಯೋಜನೆ: ಈ ಯೋಜನೆಯಡಿ ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಠ ₹1.20 ಲಕ್ಷದವರೆಗೆ ಸಾಲ ಒದಗಿಸಿ ಹಸು, ಹಂದಿ, ಕೋಳಿ, ಕುರಿ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡಲಾಗುತ್ತದೆ. ಇದರಡಿ ಫಲಾನುಭವಿಗಳಿಗೆ ಎರಡು ಹಸುಗಳನ್ನು ಒದಗಿಸಲಾಗುತ್ತದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ 50 ರಷ್ಟು ಸಹಾಯಧನ, ಇತರರಿಗೆ ಶೇ 25 ರಷ್ಟು ಸಹಾಯಧನ ಸಿಗಲಿದೆ.

4 ಹಂದಿಗಳನ್ನು ಸಾಕಣೆಗೆ ನೀಡಲಾಗುತ್ತಿದೆ. ₹94 ಸಾವಿರ ಘಟಕ ವೆಚ್ಚವಾಗಿದೆ. ಕುರಿ ಸಾಕಣೆಯಲ್ಲಿ 11 ಆಡುಗಳನ್ನು ನೀಡಲಾಗುತ್ತಿದೆ ₹67,440 ಘಟಕ ವೆಚ್ಚ ಒದಗಿಸಲಾಗುತ್ತದೆ. ಹಾಗೆಯೇ 200 ಮಾಂಸದ ಕೋಳಿ ಸಾಕಣೆಗಾಗಿ ₹85 ಸಾವಿರ ಘಟಕ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಅಮ್ಮನ ಕುರಿ ಮೇಕೆ ಯೋಜನೆಯಡಿ ₹10 ಸಾವಿರ ಘಟಕ ವೆಚ್ಚವಿದೆ. ಇದು ಮಹಿಳೆಯರಿಗೆ ಮಾತ್ರ ಇರುವ ಯೋಜನೆಯಾಗಿದ್ದು, ಎಸ್.ಸಿ, ಎಸ್.ಟಿ.ಗೆ ₹ 9 ಸಾವಿರ ಸಹಾಯಧನ, ಇತರರಿಗೆ ₹7500 ಸಹಾಯಧನ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.