ADVERTISEMENT

ಹೆಗ್ಗಡಿಹಳ್ಳಿ: ಚುನಾವಣೆ ಮುಂದೂಡಿಕೆ

ಗ್ರಾ.ಪಂ. ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ: ನಾಮಪತ್ರ ವಾಪಸ್‌ ಪಡೆದ ಅಭ್ಯರ್ಥಿಗಳು, ಜಿಲ್ಲಾಧಿಕಾರಿಗೆ ವರದಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 10:28 IST
Last Updated 4 ಜುಲೈ 2015, 10:28 IST

ದೊಡ್ಡಬಳ್ಳಾಪುರ: ತಾಲ್ಲೂಕಿನ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ಪರಿಶಿಷ್ಟ ಜಾತಿ ಮಹಿಳಾ ಅಭ್ಯರ್ಥಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಾಮಪತ್ರ ಸಲ್ಲಿದ್ದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದ ಪ್ರಸಂಗ ನಡೆದಿದೆ.

ಗಾಯಿತ್ರಿ, ನಾರಾಯಣಮ್ಮ ಅವರು ತಮ್ಮ ನಾಮ ಪತ್ರಗಳನ್ನು ಹಿಂದಕ್ಕೆ ಪಡೆದಿದ್ದಾರೆ. ಇದರಿಂದಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ  ನಡೆದಿದ್ದು ಜನಾರ್ಧನ್‌ ಆಯ್ಕೆಯಾಗಿದ್ದಾರೆ. ನಾಮ ಪತ್ರಗಳನ್ನು ಹಿಂದಕ್ಕೆ ಪಡೆದಿರುವ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. 14 ಸ್ಥಾನಗಳನ್ನು ಹೊಂದಿರುವ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 12 ಜನ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದ ಇಬ್ಬರು ಅಭ್ಯರ್ಥಿಗಳು ನಾಮ ಪತ್ರಗಳನ್ನು ಹಿಂದಕ್ಕೆ ಪಡೆದಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು. ವರದಿ ಪರಿಶೀಲನೆ ನಂತರ ಮತದಾನದ ದಿನಾಂಕ ಪ್ರಕಟವಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹ ಅಧಿಕಾರಿ ಕೆ.ಅಶ್ವತ್ಥ್‌ರೆಡ್ಡಿ ತಿಳಿಸಿದ್ದಾರೆ.       

ಆಯ್ಕೆ: ತಾಲ್ಲೂಕಿನ ಕಂಟನಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಮತದಾನದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎನ್‌.ಮಂಜುನಾಥ್‌ ಅಧ್ಯಕ್ಷರಾಗಿ, ಲಕ್ಷ್ಮೀದೇವಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಿವಶಂಕರ್‌, ಉಪಾಧ್ಯಕ್ಷರಾಗಿ ಲಕ್ಷ್ಮಮ್ಮ, ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ವಿಮಲ, ಉಪಾಧ್ಯಕ್ಷರಾಗಿ ಬಟಾಯಿ ಕೃಷ್ಣಪ್ಪ, ಕಾಡನೂರು ಗ್ರಾಮ ಪಂಚಾಯಿತಿ  ಅಧ್ಯಕ್ಷೆಯಾಗಿ ಮಲ್ಲಮ್ಮಅಶ್ವತ್ಥಪ್ಪ,ಉಪಾಧ್ಯಕ್ಷರಾಗಿ ರಮೇಶ್‌, ಮೇಲಿನಜೂಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಮಮತಾ ಮಂಜುನಾಥ್‌, ಉಪಾಧ್ಯಕ್ಷೆಯಾಗಿ ಮುನಿಲಕ್ಷ್ಮಮ್ಮ ,ಹಣಬೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಿದ್ದಣ್ಣ, ಉಪಾಧ್ಯಕ್ಷರಾಗಿ ನಾಗರಾಜ್‌, ಕೊನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಎ.ಆರ್‌.ಆಶಾ, ಉಪಾಧ್ಯಕ್ಷ ಭಾಗ್ಯಮ್ಮ, ಹೊನ್ನವಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗಂಗಣ್ಣ,  ಉಪಾಧ್ಯಕ್ಷೆಯಾಗಿ ಸುಮಾ ರಾಜಗೋಪಾಲ್‌ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.