ADVERTISEMENT

‘ಕಾಟಾಚಾರಕ್ಕೆ ರಾಜ್ಯೋತ್ಸವ ಆಚರಣೆ ಬೇಡ’

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 8:10 IST
Last Updated 21 ಅಕ್ಟೋಬರ್ 2014, 8:10 IST
ದೊಡ್ಡಬಳ್ಳಾಪುರದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತ  ಸಭೆ ಶಾಸಕ ಟಿ.ವೆಂಕಟರಮಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ತಾ.ಪಂ. ಅಧ್ಯಕ್ಷೆ ಶ್ಯಾಮಲ ಜಿ.ಲಕ್ಷ್ಮೀಪತಿ, ತಹಶೀಲ್ದಾರ್‌ ಎಂ.ಕೆ.ರಮೇಶ್‌ ಹಾಜರಿದ್ದರು
ದೊಡ್ಡಬಳ್ಳಾಪುರದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತ ಸಭೆ ಶಾಸಕ ಟಿ.ವೆಂಕಟರಮಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ತಾ.ಪಂ. ಅಧ್ಯಕ್ಷೆ ಶ್ಯಾಮಲ ಜಿ.ಲಕ್ಷ್ಮೀಪತಿ, ತಹಶೀಲ್ದಾರ್‌ ಎಂ.ಕೆ.ರಮೇಶ್‌ ಹಾಜರಿದ್ದರು   

ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬ­ಗಳ ಆಚರಣಾ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆ ಶಾಸಕ ಟಿ. ವೆಂಕಟರ­ಮಣಯ್ಯ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯ್ತಿ ಸಭಾಂಗಣ­ದಲ್ಲಿ ಸೋಮವಾರ ನಡೆಯಿತು.

ಕನ್ನಡ ರಾಜ್ಯೋತ್ಸವ ಕನ್ನಡಿಗರ ಮಹತ್ವದ ಕಾರ್ಯಕ್ರಮ. ಅಧಿಕಾರಿ­ಗಳು ಕನ್ನಡದ ಕಾರ್ಯಕ್ರಮಗಳನ್ನು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಕಾಟಾಚಾರಕ್ಕೆ ರಾಜ್ಯೋತ್ಸವ ಮಾಡು­ವು­ದಾ­ದರೆ ಸಹಕಾರ ನೀಡುವುದಿಲ್ಲ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತು­ವಾರಿ ಸಚಿವರು ಈ ಬಾರಿ ತಪ್ಪದೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವಂತೆ ಶಾಸಕರು ಹಾಗೂ ತಹಶೀಲ್ದಾರರು ಮುಂದಾಳತ್ವ ವಹಿಸ­ಬೇಕು ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಶಾಲಾಕಾಲೇಜು­ಗಳಲ್ಲಿ  ಹಾಗೂ ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಸಂಬಂಧ­ಪಟ್ಟ ಇಲಾಖೆ­ಗಳು ಸುತ್ತೋಲೆ ಹೊರಡಿ­ಸಬೇಕು. ವೇದಿಕೆಯಲ್ಲಿ ಶಿಷ್ಟಾಚಾರ ಪಾಲಿಸಬೇಕು. ತಾಲ್ಲೂಕು ಮಟ್ಟದಲ್ಲಿ  ಕನ್ನಡ ಅನುಷ್ಠಾನ ಸಮಿತಿಗಳನ್ನು ರಚಿಸ­ಬೇಕು ಎನ್ನುವ ಸಲಹೆಗಳು ವ್ಯಕ್ತ­ವಾದವು. ರಾಜ್ಯೋತ್ಸವ ಸಮಾರಂಭ­ವನ್ನು ಅರ್ಥಪೂರ್ಣವಾಗಿ ಆಚರಿಸುವ ಕುರಿತು ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ, ಸನ್ಮಾನ ಸಮಿತಿಗಳನ್ನು ರಚಿಸಲಾಯಿತು.

ನಗರದ ಪುರಭವನದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ನಡೆ­ಸಲು ತೀರ್ಮಾನಿಸಲಾಯಿತು. ಕಲಾ­ತಂಡಗಳೊಂದಿಗೆ ಶ್ರೀಭುವನೇಶ್ವರಿ ದೇವಿಯ ಅದ್ದೂರಿ ಮೆರವಣಿಗೆಯಲ್ಲಿ ಜಾನಪದ ತಂಡಗಳನ್ನು ಕರೆಸಲು ತೀರ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕನ್ನಡ ರಾಜ್ಯೋತ್ಸವವನ್ನು ಅರ್ಥ­ಪೂರ್ಣ­­ವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ತಮ್ಮ ಸಹಕಾರವಿದೆ. ರಾಜ್ಯೋತ್ಸವ ಆಚರಿಸಲು ಎಲ್ಲಾ ಕನ್ನಡಪರ ಹಾಗೂ ವಿವಿಧ ಸಂಘಟನೆ­ಗಳ ಸಹಕಾರ ಅಗತ್ಯವಾಗಿದೆ. ತಾಲ್ಲೂ­ಕಿನಲ್ಲಿ ಬಿಬಿಎಂಪಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದು, ಸಚಿವರ ಗಮನಕ್ಕೆ ತರಲಾಗಿದೆ ಎಂದರು. ಶಾಲೆಗಳಲ್ಲಿ ರಾಜ್ಯೋತ್ಸವ­ವನ್ನು ಅದ್ದೂರಿಯಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾ­ಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಪರಭಾಷೆ ಚಿತ್ರಪ್ರದರ್ಶನಕ್ಕೆ ವಿರೋಧ: ನವೆಂಬರ್ ಪೂರ್ತಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದಕ್ಕೆ, ಹೊಸ ಚಲನಚಿತ್ರ­ಗಳು ಸಿಗುವುದಿಲ್ಲ. ಚಿತ್ರಮಂದಿರ­ಗಳಲ್ಲಿ ಪ್ರೇಕ್ಷಕರ ಕೊರತೆಯಿದ್ದು, ತೀರಾ ನಷ್ಟ ಅನುಭವಿಸುವಂತಾಗುತ್ತಿದೆ. ಈ ನಿಟ್ಟಿ­ನಲ್ಲಿ ನ.೧ರಂದು ಮಾತ್ರ ಕನ್ನಡ ಚಿತ್ರ­ಗಳನ್ನು ಪ್ರದರ್ಶಿಸಿ, ಉಳಿದ ಸಮಯ­ದಲ್ಲಿ ಪರಭಾಷಾ ಚಿತ್ರಗಳನ್ನು ಪ್ರದರ್ಶಿಸಲು ಕನ್ನಡಪರ ಸಂಘಟನೆಗಳ ರಾಜಕೀಯ ಪಕ್ಷಗಳ ಕಾರ್ಯಕರ್ತರು ಅನುವು ಮಾಡಿಕೊಡಬೇಕು ಎಂದು ಚಿತ್ರಮಂದಿರದ ಮಾಲೀಕರು ಸಭೆ­ಯಲ್ಲಿ ಮನವಿ ಮಾಡಿದರು.

ಇದಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯ­ಕರ್ತರು ವಿರೋಧ ವ್ಯಕ್ತಪಡಿಸಿ, ಇಡೀ ವರ್ಷ ಪರಭಾಷೆ ಚಿತ್ರಗಳನ್ನು ಪ್ರದ­ರ್ಶಿಸಿ ಹಣ ಗಳಿಸುವ ಚಿತ್ರಮಂದಿರದ ಮಾಲೀಕರು ಒಂದು ತಿಂಗಳು ಕನ್ನಡ ಚಿತ್ರಗಳನ್ನು ಪದರ್ಶಿಸಲು ನಿರ್ಲಕ್ಷಿ­ಸು­ವುದು ಸರಿಯಲ್ಲ. ಎಂದಿನಂತೆ ನವೆಂಬರ್‌­ನಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ತಹಶೀಲ್ದಾರ್ ಎಂ.ಕೆ.ರಮೇಶ್, ತಾ.ಪಂ ಅಧ್ಯಕ್ಷೆ ಶ್ಯಾಮಲಾ ಲಕ್ಷ್ಮೀಪತಿ, ಎಪಿಎಂಸಿ ಅಧ್ಯಕ್ಷ ತಿ.ರಂಗರಾಜು, ಉಪತಹಸೀಲ್ದಾರ್ ಶಿವರಾಜ್  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.