ADVERTISEMENT

2018ರಲ್ಲೂ ಕಾಂಗ್ರೆಸ್‌ಗೆ ಬಹುಮತ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 10:46 IST
Last Updated 15 ಜುಲೈ 2017, 10:46 IST

ದೇವನಹಳ್ಳಿ: ರಾಜ್ಯದಲ್ಲಿ 2018ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲೂ  ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ. ಇದರಲ್ಲಿ ಅನುಮಾನವೇ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು.

ನಾಲ್ಕು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಿದೆ. ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಶೇ 95ರಷ್ಟು ಭರವಸೆಗಳನ್ನು ಪೂರೈಸಿದೆ. ಸಹಕಾರ ಸೊಸೈಟಿಗಳಲ್ಲಿ ರೈತರು ಮಾಡಿದ್ದ ₹50ಸಾವಿರ ವರೆಗಿನ ಸಾಲ ಮನ್ನಾ  ಮಾಡಿದ ಪರಿಣಾಮ ಸುಮಾರು 18 ಲಕ್ಷ ರೈತರಿಗೆ ಉಸಿರಾಡುವಂತಾಗಿದೆ. ಬರ ಪರಿಸ್ಥಿತಿಯಲ್ಲಿಯೂ ಸಾಲ ಮನ್ನಾ ಅಷ್ಟು ಸುಲಭವಲ್ಲ ಎಂದರು.

ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿ ಶೇ 50ರಷ್ಟು ಸಾಲ ಮನ್ನಾಕ್ಕೆ ಕೋರಿದರೂ ಅಂತಿಮವಾಗಿ ಅದು ಸಾಧ್ಯವಿಲ್ಲ ಎಂಬ ಕಠಿಣ ನಿರ್ಧಾರ ತೆಗೆದುಕೊಂಡಿತ್ತು. ಪರಿಣಾಮ ಸರ್ಕಾರ ರೈತರ ನೆರವಿಗೆ ಧಾವಿಸಿದೆ. ಕೇಂದ್ರ ಸರ್ಕಾರ ರೈತರ ಸಂಕಷ್ಟ ಅರ್ಥ ಮಾಡಿಕೊಂಡಿಲ್ಲ ಎಂದು ದೂರಿದರು.

ADVERTISEMENT

ರಾಗಿ ಇತರೆ ಸಿರಿ ಧಾನ್ಯಕ್ಕೆ ಮಾತ್ರ ಫಸಲ್‌ ಬಿಮಾ ಯೋಜನೆ ಸೀಮಿತಗೊಂಡಿದೆ. ಪ್ರಾದೇಶಿಕ ಪ್ರತಿಯೊಂದು ಕೃಷಿ ಮತ್ತು ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳಿಗೆ ಅನ್ವಯವಾಗುವಂತೆ ವಿಮಾ ಯಜನೆ ಮಾಡಬೇಕಿತ್ತು ಎಂದು ಟೀಕಿಸಿದರು.

ಕೆ.ಪಿ.ಸಿ.ಸಿ.ಅಧ್ಯಕ್ಷ ಡಾ.ಜಿ. ಪರಮೇಶ್ವರ್ ರಾಜ್ಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರಚಿಸಿದ್ದಾರೆ, ಜಿಲ್ಲಾ ಮತ್ತು ಬ್ಯಾಕ್ ಕಾಂಗ್ರೆಸ್ ವಿವಿಧ ಘಟಕ ಪದಾಧಿಕಾರಿಗಳು ಪ್ರತಿ ಗ್ರಾಮ ಮತ್ತು ಗ್ರಾಮ ಪಂಚಾಯಿತಿ, ಹೋಬಳಿ ಕೇಂದ್ರಗಳಿಗೆ ತೆರಳಿ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮತದಾರರಿಗೆ ಮನಮುಟ್ಟುವಂತೆ ತಿಳಿಸಬೇಕು. ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಗೊಳಿಸಬೇಕು ಎಂದರು.

ಬಿಜೆಪಿ ವಿಸ್ತಾರಕರು ಮತ್ತು ಉಸ್ತುವಾರಿ ವಿಸ್ತಾರಕರಿಂದ ಕರಪತ್ರ ವಿತರಿಸುತ್ತಿದೆ. ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ. ಮಿಷನ್ 150ಕ್ಕಿಂತ ಹೆಚ್ಚು ಸ್ಥಾನ ಎಂಬುದು ಬಡಾಯಿ ಎಂದರು. ಕೋಮು ಗಲಬೆ ಸೃಷ್ಟಿಗೆ ಬಿಜೆಪಿ ಮುಖಂಡರೆ ಪ್ರಚೋದನೆ ನೀಡುತ್ತಿರುವುದು ದುರದೃಷ್ಟಕರ ಎಂದರು.

ಹಿರಿಯ ಮುಖಂಡರಾದ ಮುನಿನರಸಿಂಹಯ್ಯ, ಚಲವಾದಿ ನಾರಾಯಣಸ್ವಾಮಿ, ಎ.ಚಿನ್ನಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ ಮಂಜುನಾಥ್, ರಾಧಮ್ಮಮುನಿರಾಜು, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಆರ್.ರವಿಕುಮಾರ್, ವಿ.ಎಸ್.ಎಸ್.ಎನ್. ಅಧ್ಯಕ್ಷ ಸಿ. ವಿಜಯಕುಮಾರ್, ಜಿಲ್ಲಾ ಸಹಕಾರಿ               ಯೂನಿಯನ್ ನಿರ್ದೇಶಕ ಸಂಪಂಗಿಗೌಡ, ತಾಲ್ಲೂಕು ಖಾದಿ ಬೋರ್ಡ್ ಅಧ್ಯಕ್ಷ ಲಕ್ಷ್ಮಣಮೂರ್ತಿ, ಚೇತನ್ ಗೌಡ, ಲಕ್ಷ್ಮಣ್ ಗೌಡ, ತಾಲ್ಲೂಕು ಕೃಷಿಕ ಸಮಾಜ ಖಜಾಂಚಿ ಲಕ್ಷ್ಮಿ ನರಸಿಂಹ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪುರುಷೋತ್ತಮ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.