ADVERTISEMENT

‘ಹಿಪ್ಪುನೇರಳೆ ಸೊಪ್ಪಿಗೆ ಬಂಗಾರದ ಬೆಲೆ’

ವಾತಾವರಣದಲ್ಲಿ ಹೆಚ್ಚಾಗುತ್ತಿರುವ ತೇವಾಂಶ, ಬೆಳಗಿನ ಜಾವ ಮಂಜಿನ ಹನಿ

ಎಂ.ಮುನಿನಾರಾಯಣ
Published 1 ಜನವರಿ 2018, 4:42 IST
Last Updated 1 ಜನವರಿ 2018, 4:42 IST
ವಿಜಯಪುರ ಸಮೀಪದಲ್ಲಿ ರೈತರು ಬೆಳೆದಿರುವ ಹಿಪ್ಪುನೇರಳೆ ಸೊಪ್ಪು
ವಿಜಯಪುರ ಸಮೀಪದಲ್ಲಿ ರೈತರು ಬೆಳೆದಿರುವ ಹಿಪ್ಪುನೇರಳೆ ಸೊಪ್ಪು   

ವಿಜಯಪುರ: ವಾತಾವರಣದಲ್ಲಿ ಹೆಚ್ಚಾಗುತ್ತಿರುವ ತೇವಾಂಶದಿಂದಾಗಿ ಹಿಪ್ಪುನೇರಳೆ ತೋಟಗಳಲ್ಲಿ ನಿಧಾನಗತಿಯಲ್ಲಿ ಬೆಳೆಯುತ್ತಿರುವ ಹಿಪ್ಪುನೇರಳೆ ಸೊಪ್ಪಿಗೆ ಬೇಡಿಕೆ ಹೆಚ್ಚಾಗಿದ್ದು ಬಂಗಾರದ ಬೆಲೆ ಬಂದಿದೆ.

ಡಿಸೆಂಬರ್ ಆರಂಭದಿಂದ ಬೆಳಗಿನ ಜಾವ ಮಂಜಿನ ಹನಿಗಳು ದಟ್ಟವಾಗಿ ಬೀಳುತ್ತಿದ್ದು, ಸಂಜೆಯಾಗುತ್ತಿದ್ದಂತೆ ವಾತಾವರಣದಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಚಳಿಯಿಂದಾಗಿ ಹಿಪ್ಪುನೇರಳೆ ಸೊಪ್ಪು ಸರಿಯಾಗಿ ಬೆಳೆಯುತ್ತಿಲ್ಲ.

ಹಿಪ್ಪುನೇರಳೆ ಬೆಳೆ ಒಂದು ಬಾರಿ ಕಟಾವಾದ ನಂತರ 50 ದಿನಗಳಿಗೆ ಮತ್ತೊಂದು ಕಟಾವು ಮಾಡಬಹುದಾಗಿದೆ. ಚಳಿ ಹೆಚ್ಚಾಗಿರುವ ಕಾರಣ, 70 ದಿನಗಳಾದರೂ ಸೊಪ್ಪು ಬೆಳೆಯುತ್ತಿಲ್ಲ, ಚಳಿಗಾಲದಲ್ಲಿ ರೇಷ್ಮೆಹುಳು ಬೆಳೆ ಚೆನ್ನಾಗಿ ಆಗುತ್ತದೆ. ಹುಳುಸಾಕಾಣಿಕೆ ಮನೆಗಳಲ್ಲಿ ಉಷ್ಣಾಂಶವನ್ನು ಕಾಪಾಡಿಕೊಂಡರೆ, ಉತ್ತಮ ಇಳುವರಿ ಬರುತ್ತದೆ. ಸೊಪ್ಪಿನ ಕೊರತೆಯಿಂದಾಗಿ ಇಳುವರಿಯು ಕಡಿಮೆಯಾಗುವ ಆತಂಕ ಕಾಡುತ್ತಿದೆ ಎಂದು ರೈತ ಮಿತ್ತನಹಳ್ಳಿ ಮುನಿಆಂಜಿನಪ್ಪ ಹೇಳಿದರು.

ADVERTISEMENT

ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಎಲ್ಲೆಡೆ ಹಿಪ್ಪುನೇರಳೆ ತೋಟಗಳಿಗೆ ಕಾಡಿದ ಎಲೆಸುರುಳಿ ರೋಗದಿಂದಾಗಿ ಬಹಳಷ್ಟು ತೋಟಗಳಲ್ಲಿನ ಸೊಪ್ಪನ್ನು ಕಟಾವು ಮಾಡಿ ದನಕರುಗಳಿಗೆ ಹಾಕಿದ್ದರಿಂದ ರೇಷ್ಮೆ ಬೆಳೆಗಾರರು ಸೊಪ್ಪಿನ ಕೊರತೆಯಿಂದಾಗಿ ಉದ್ಯಮದಿಂದ ಹಿಂದೆ ಸರಿದಿದ್ದರು. ಈಚೆಗೆ ಬೆಳೆದಿರುವ ಸೊಪ್ಪುಗಳನ್ನು ನಂಬಿಕೊಂಡು ಪುನಃ ಹುಳು ಸಾಕಾಣಿಕೆಯ ಕಡೆಗೆ ಗಮನಹರಿಸಿರುವ ರೈತರ ಪಾಲಿಗೆ ಸೊಪ್ಪಿನ ಬೆಲೆಗಳು ನಿರಾಸೆಯನ್ನುಂಟು ಮಾಡುತ್ತಿದೆ ಎಂದು ಅವರು ದೂರಿದ್ದಾರೆ.

₹ 350 ರಿಂದ ₹ 400 ಇದ್ದ ಒಂದು ಮೂಟೆ ಸೊಪ್ಪಿನ ಬೆಲೆ ಈಗ ₹ 650 ರಿಂದ ₹ 700 ವರೆಗೂ ಏರಿಕೆಯಾಗಿದೆ. ದಿನಕ್ಕೆ ಹುಳುಗಳಿಗೆ ಮೂರು ಬಾರಿ ಬೆಳಿಗ್ಗೆ 4 ಗಂಟೆ, ಮಧ್ಯಾಹ್ನ 12 ಗಂಟೆ ಸಂಜೆ 6 ಗಂಟೆಗೆ ಸೊಪ್ಪು ನೀಡುತ್ತಾರೆ. 100 ಮೊಟ್ಟೆ ಹುಳು ಆರಂಭದಿಂದ ಹಣ್ಣಾಗುವ ತನಕ ಸುಮಾರು 40 ಮೂಟೆಗಳಷ್ಟು ಸೊಪ್ಪು ಬೇಕಾಗುತ್ತದೆ. ₹ 28,000 ದಷ್ಟು ಹಣವನ್ನು ಸೊಪ್ಪಿಗೆ ರೈತರು ಖರ್ಚು ಮಾಡಬೇಕಾಗಿದೆ.

ತೋಟಗಳಲ್ಲಿ ಸೊಪ್ಪು ಕಟಾವು ಮಾಡಿದ ನಂತರ ಎಷ್ಟು ಮೂಟೆ ಕಟಾವು ಮಾಡಿಕೊಂಡಿದ್ದರೆ, ಅಷ್ಟು ಹಣವನ್ನು ಸ್ಥಳದಲ್ಲೆ ಕೊಟ್ಟು ಬರಬೇಕಾದಂತಹ ಅನಿವಾರ್ಯತೆ ಇದೆ. ಪರಿಚಯವಿರುವ ರೈತರಷ್ಟೆ ಸಾಲವಾಗಿ ಸೊಪ್ಪು ಕೊಡುತ್ತಾರೆ. ಗೂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ನಂತರ ಹಣ ಕೊಡುತ್ತಾರೆ. ಸೊಪ್ಪು ಸಿಗದ ಕಾರಣ ಬೆಳೆಗಾರರಲ್ಲಿ ಪೈಪೋಟಿ ಶುರುವಾಗಿದೆ.

ಸಂಜೆ ಆದದ್ದೇ ಗೊತ್ತಾಗಲ್ಲ

ರೈತ ಪಿ.ರಂಗನಾಥಪುರ ನಟರಾಜು ಅವರ ಪ್ರಕಾರ, ‘ಬೆಳಗಿನ ಜಾವದಲ್ಲಿ ಮನೆಯಿಂದ ಹೊರಟರೆ ಸೊಪ್ಪುಗಳನ್ನು ಹುಡುಕಿ ವ್ಯಾಪಾರ ಮಾಡಿಕೊಂಡು ಬರಬೇಕಾದರೆ ಸಂಜೆ ಎಷ್ಟು ಹೊತ್ತಾಗುತ್ತದೊ ಗೊತ್ತಾಗುವುದಿಲ್ಲ’ ಎನ್ನುತ್ತಾರೆ.

‘ಮೂರು ತಿಂಗಳಿನಿಂದ ರೇಷ್ಮೆ ಬೆಳೆ ಆಗಿಲ್ಲ, ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗಿದೆ. ಅದಕ್ಕೆ ಪುನಃ ಹುಳು ಸಾಕಾಣಿಕೆ ಮಾಡುತ್ತಿದ್ದೇವೆ. ಈಗ ಸೊಪ್ಪು ಸಿಗುತ್ತಿಲ್ಲ, ಕಷ್ಟಪಟ್ಟು ವ್ಯಾಪಾರ ಮಾಡಿಕೊಂಡು, ಅಡ್ವಾನ್ಸ್ ಕೊಟ್ಟು ಬಂದರೂ ಬೆಳಿಗ್ಗೆ ಹೋಗಿ ಕಟಾವಿಗೆ ಹೋದರೆ ಬೇರೆ ಬೆಳೆಗಾರರು ಕಟಾವು ಮಾಡಿಬಿಟ್ಟಿರುತ್ತಾರೆ ಏನು ಮಾಡಬೇಕೆಂದೆ ಗೊತ್ತಾಗುವುದಿಲ್ಲ’ ಎಂದರು.

ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಪ್ರಮಾಣದಲ್ಲಿ ಏರಿಳಿತಗಳಾಗುತ್ತಿದೆ. ಅದರೊಂದಿಗೆ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ ಸೊಪ್ಪು ಹಾಗೂ ಗೂಡಿನ ಅಭಾವ ಕಾಡುತ್ತಿದೆ
-ಎಂ.ಎಸ್.ಭೈರಾರೆಡ್ಡಿ ,
ಉಪನಿರ್ದೇಶಕ, ರೇಷ್ಮೆಗೂಡು ಮಾರುಕಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.