ADVERTISEMENT

ಜಿಎಸ್‌ಟಿಯಿಂದ ಸಾಮಾನ್ಯರಿಗೆ ದೊಡ್ಡ ಪೆಟ್ಟು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 9:05 IST
Last Updated 9 ಫೆಬ್ರುವರಿ 2018, 9:05 IST

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿ ಯೋಜನೆ ಹಾಗೂ ನೋಟುಗಳ ಅಮಾನೀಕರಣದಿಂದಾಗಿ ದೊಡ್ಡ ಉದ್ದಿಮೆದಾರರು ಮಾತ್ರವಲ್ಲದೇ ಕಾರು ಗ್ಯಾರೇಜುಗಳ ಮೆಕಾನಿಕ್‌ಗಳ ಜೀವನೋಪಾಯದ ಮೇಲೂ ಪರಿಣಾಮ ಬೀರಿದೆ ಎಂದು ಮೆಕಾನಿಕ್ ಇಸ್ಮಾಯಿಲ್ ಪಾಷ ಬೇಸರ ವ್ಯಕ್ತಪಡಿಸಿದರು.

ಕೋಲಾರ ರಸ್ತೆಯಲ್ಲಿ ನಾವು ಕಲಿತಿರುವ ಕಲಿಕೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು, ಗ್ಯಾರೇಜ್‌ಗಳನ್ನು ಇಟ್ಟುಕೊಂಡು ನೂರಾರು ಮಂದಿ ಜೀವನ ಮಾಡುತ್ತಿದ್ದೇವೆ. ಬಹಳಷ್ಟು ಮಂದಿ ನಿರುದ್ಯೋಗಿಗಳಿಗೆ ಮೆಕಾನಿಕ್ ಕೆಲಸ ಕಲಿಸುತ್ತಿದ್ದೇವೆ. ಉದ್ಯೋಗ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದೇವೆ. ಹಲವಾರು ಬ್ಯಾಂಕುಗಳಿಂದ ಸಾಲ ಪಡೆದುಕೊಂಡು ಗ್ಯಾರೇಜ್‌ಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಬೆಳಿಗ್ಗೆ 9 ಗಂಟೆಗೆ ಬಂದರೆ, ಕಾರುಗಳು, ದ್ವಿಚಕ್ರ ವಾಹನಗಳ ರಿಪೇರಿಗಾಗಿ ಬಹಳಷ್ಟು ಮಂದಿ ಗ್ರಾಹಕರು ಬರುತ್ತಿದ್ದರು. ವಾಹನಗಳನ್ನು ರಿಪೇರಿ ಮಾಡಿಕೊಂಡು ದಿನಕ್ಕೆ ಕನಿಷ್ಠ ₹400 ರೂಪಾಯಿಗಳಷ್ಟು ಕೂಲಿ ಸಂಪಾದನೆ ಮಾಡಿಕೊಂಡು ಜೀವನ ಮಾಡಿಕೊಂಡಿದ್ವಿ, ಕೇಂದ್ರ ಸರ್ಕಾರದ ನೋಟು ಅಮಾನ್ಯ, ಜಿಎಸ್‌ಟಿ ಜಾರಿಗೆ ಯಿಂದ ನಮ್ಮ ಜೀವನ ಮಾಡಲಿಕ್ಕೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನೋವು ತೋಡಿಕೊಂಡರು.

ADVERTISEMENT

ದಿನಕ್ಕೆ ₹400 ರಿಂದ ₹500 ಸಂಪಾದನೆ ಮಾಡುತ್ತಿದ್ದ ನಾವು ವಾರಕ್ಕೆ ಕೇವಲ ₹1,000 ದಿಂದ ₹1,500 ಸಂಪಾದನೆ ಮಾಡುತ್ತಿದ್ದೇವೆ. ನಾವು ಮಾಡುವಂತ ಕೆಲಸಕ್ಕೆ ಬಂಡವಾಳ ಹಾಕಬೇಕಾದರೆ ಕನಿಷ್ಠ ₹5 ಲಕ್ಷವಾದರೂ ಬೇಕಾಗುತ್ತದೆ. ಇತ್ತೀಚೆಗೆ ಬ್ಯಾಂಕುಗಳಿಂದ ಸಾಲ ಪಡೆದುಕೊಳ್ಳೊಣ ಎಂದರೆ ಆದಾಯ ತೆರಿಗೆ ಮಾಡಿಸಿದ್ದೀರಾ ಎಂದು ಕೇಳುತ್ತಾರೆ. ನಮಗೆ ಬರುವ ಸಂಪಾದನೆಗೆ ಆದಾಯ ತೆರಿಗೆ ಮಾಡಿಸಲಿಕ್ಕಾಗುತ್ತಾ ಎಂದು ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ ಅವರು.

ಈ ಕಾರಣದಿಂದ ಬ್ಯಾಂಕುಗಳಲ್ಲಿ ಸಾಲಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಜೀವನ ನಡೆಸುವುದೇ ಕಷ್ಟ ಆಗಿದೆ. ಅನೇಕ ಉದ್ಯಮಗಳು, ವಿವಿಧ ಉದ್ದೇಶಗಳಿಗಾಗಿ ಸಾಲಸೌಲಭ್ಯಗಳನ್ನು ಕೊಡುತ್ತಿರುವ ಸರ್ಕಾರಗಳು, ನಮ್ಮಂತ ಸ್ವಯಂ ಉದ್ಯೋಗಿಗಳ ಕಡೆಗೂ ಗಮನಹರಿಸಬೇಕು. ಬ್ಯಾಂಕುಗಳಲ್ಲಿ ಸಾಲಸೌಲಭ್ಯಗಳನ್ನು ಕಲ್ಪಿಸಿದರೆ ಜೀವನ ಮತ್ತಷ್ಟು ಉಜ್ವಲವಾಗುತ್ತದೆ ಎಂದು ಮೆಕಾನಿಕ್‌ಗಳಾದ ಬಾಬು, ರವಿಕುಮಾರ್, ನವೀದ್, ಫಯಾಜ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.