ADVERTISEMENT

₹ 80 ಲಕ್ಷ ವೆಚ್ಚದಲ್ಲಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 8:57 IST
Last Updated 20 ಮಾರ್ಚ್ 2017, 8:57 IST

ದೊಡ್ಡಬಳ್ಳಾಪುರ: ಗ್ರಾಮ ವಿಕಾಸ ಯೋಜನೆಯಲ್ಲಿ ವಡ್ಡರಹಳ್ಳಿ ಗ್ರಾಮ ಆಯ್ಕೆಯಾಗಿದ್ದು, ₹80 ಲಕ್ಷಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿವೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಅವರು ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ  ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಕಾಲೇಜಿನ ಎನ್‌ಎಸ್‌ಎಸ್‌ ವಾರ್ಷಿಕ ಯುವಜನ ಸೇವಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಎನ್‌ಎಸ್‌ಎಸ್‌ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಬದುಕಿನ ನಿಜ ಜೀವನದ ಪಾಠ ಕಲಿಯಲು ಅವಕಾಶ ದೊರೆಯಲಿದೆ.

ಗಾಂಧೀಜಿ ಕನಸನ್ನು ನನಸು ಮಾಡುವ ಉದ್ದೇಶವನ್ನು ಎನ್‌ಎಸ್ಎಸ್‌ ಹೊಂದಿದೆ. ಇದನ್ನು ಕಾರ್ಯಗತ ಮಾಡಲು ವಿದ್ಯಾರ್ಥಿಗಳು ಶ್ರಮಿಸಬೇಕು. ಆರೋಗ್ಯ ಸ್ವಚ್ಛತೆಯನ್ನು ಕಾಪಾಡಲು ಗ್ರಾಮದ ಎಲ್ಲರೂ ಸಹಕರಿಸಬೇಕು ಎಂದರು.

ಅಡುಗೆ ಅನಿಲವನ್ನು ಬಳಸುವ ಮೂಲಕ ಸೌದೆಯ ಬಳಕೆ ಕಡಿಮೆ ಮಾಡಬೇಕು. ಇದರಿಂದ ಪರಿಸರ ನಾಶ ತಪ್ಪಲಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಪದ್ಮಾವತಿ ಬಿ.ಮುನೇಗೌಡ ಮಾತನಾಡಿ, ವಿದ್ಯಾರ್ಥಿಗಳು ಮನೆಯಲ್ಲಿ  ಕಲಿಯುವುದಕ್ಕಿಂತ ಸಮಾಜದಲ್ಲಿ ಬೆರೆತು ಕಲಿಯುವುದು ಮುಖ್ಯ.

ಶಿಕ್ಷಣದ ಮೌಲ್ಯ ಕುಸಿಯುತ್ತಿರುವ ಈ ದಿನಗಳಲ್ಲಿ  ಮಕ್ಕಳು ಕುಟುಂಬದ, ಕಾಲೇಜಿನ ಗೌರವವನ್ನು ಹೆಚ್ಚು ಮಾಡಲು ಮುಂದಾಗಬೇಕು ಎಂದು ಹೇಳಿದರು. ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಸಾಬು ಜಾರ್ಜ್‌ ಅಧ್ಯಕ್ಷತೆ ವಹಿಸಿದ್ದರು.

ಕಿಮ್ಸ್‌ ಅಧ್ಯಕ್ಷ ಬಿ.ಮುನೇಗೌಡ, ಕಾಂಗ್ರೆಸ್‌ ನಗರ ಬ್ಲಾಕ್‌ ಅಧ್ಯಕ್ಷ ಕೆ.ಜಿ.ಅಶೋಕ್‌, ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಎಂ.ಬೈರೇಗೌಡ, ಕಾರ್ಯದರ್ಶಿ ಜಿ.ಲಕ್ಷ್ಮೀಪತಿ,  ಹಳ್ಳಿ ಜನಪದ ಸೇವಾ ಟ್ರಸ್ಟ್‌ ಅಧ್ಯಕ್ಷ ಎ.ನಾಗರಾಜ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜಯಲಕ್ಷ್ಮಮ್ಮ, ಕಾಂತರಾಜ್‌, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಗೋಪಾಲ್‌, ರಾಮಚಂದ್ರರೆಡ್ಡಿ, ಸುರೇಶ್‌, ಮಾಜಿ ಸದಸ್ಯೆ ರಮೇಶ್‌, ಎಂಪಿಸಿಎಸ್‌ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಅಶೋಕ್‌ ಮತ್ತಿತರರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.