ADVERTISEMENT

ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಮಹಿಳೆಯರಿಂದ ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ, ಕಾಕತಿ ಹೊರವಲಯದಲ್ಲಿ ನಡೆದ ಘಟನೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:21 IST
Last Updated 9 ಮಾರ್ಚ್ 2017, 11:21 IST
ಬೆಳಗಾವಿ: ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ­ಯಂಥ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ನಗರದಲ್ಲಿ ಮಹಿಳಾ ಸಂಘಟನೆ­ಗಳು ನಗರದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ಈ ಮೂಲಕ ಅಂತರ­ರಾಷ್ಟ್ರೀಯ ಮಹಿಳಾ ದಿನವನ್ನು ವಿನೂತನವಾಗಿ ಆಚರಿಸಿದವು. 
 
ಭಾರತೀಯ ಮಹಿಳಾ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ಬೆಳ­ಗಾವಿ ಶಾಖೆ ಹಾಗೂ ಸಮನ್ವಯ ಮಹಿಳಾ ವೇದಿಕೆ ವತಿಯಿಂದ ಸಂಭಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
 
ನೂರಾರು ಮಂದಿ ಮಹಿಳೆಯರು ಕಾಕತಿ ಹೊರವಲಯದಲ್ಲಿ ಈಚೆಗೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ, ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನು ರೂಪಿಸಲು ಒತ್ತಾಯಿಸಿ ಭಾರತೀಯ ಮಹಿಳಾ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ಬೆಳಗಾವಿ ಶಾಖೆಯಿಂದ ಮೌನ ಕ್ರಾಂತಿ ಮೆರವಣಿಗೆ ನಡೆಯಿತು.
 
ಮಹಿಳೆಯರು, ವಿವಿಧ ಮಹಿಳಾ ಮಂಡಳಗಳ ಸದಸ್ಯರು ಮುಖಕ್ಕೆ ಕಪ್ಪು ಪಟ್ಟಿ ಧರಿಸಿ, ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದ್ವಿಚಕ್ರವಾಹನದಲ್ಲೂ ಮಹಿಳೆಯರು ಭಾಗವಹಿಸಿದ್ದರು.
 
ಧರ್ಮವೀರ ಸಂಬಾಜಿ ವೃತ್ತ, ಗಣಪತಿ ಬೀದಿ, ಮಾರುತಿ ಗಲ್ಲಿ, ಸಮಾದೇವಿ ಗಲ್ಲಿ ರಾಮದೇವ ಗಲ್ಲಿ ಹಾಗೂ ಕಾಕತಿವೇಸ್‌ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದಾ ಹಜಾರೆ, ‘ಕಾಕತಿ ಹೊರವಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಸಹಿಸಲು ಸಾಧ್ಯವಿಲ್ಲ. ಸರ್ಕಾರ ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನು ರೂಪಿಸಬೇಕು. ಅತ್ಯಾಚಾರಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರ ದೊರೆಯುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಾನೂನು ರೂಪಿಸಬೇಕು’ ಎಂದು ಒತ್ತಾಯಿಸಿದರು.
 
ಲೋಕಸಭೆಯಲ್ಲಿ ಶೇ 33ರಷ್ಟು ಮೀಸಲಾತಿಯನ್ನು ಜಾರಿಗೊಳಿಸಬೇಕು. ಗೃಹಿಣಿಯರಿಗೂ ಪಿಂಚಣಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು. ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಅಡುಗೆಯವರು ಮತ್ತು ಸಹಾಯಕಿಯರ ವೇತನ ಹೆಚ್ಚಿಸಬೇಕು. ಅಂಗನವಾಡಿ ಕೇಂದ್ರಗಳನ್ನು ಮಹಿಳಾ ಶಕ್ತಿ ಕೇಂದ್ರಗ­ಳನ್ನಾಗಿ ಮೇಲ್ದರ್ಜೆಗೇರಿ­ಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.ನಂತರ ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಅವರಿಗೆ ಮನವಿ ಸಲ್ಲಿಸಲಾಯಿತು.
 
ಮೇಯರ್ ಸಂಜೋತಾ ಬಾಂದೇಕರ, ನಗರಪಾಲಿಕೆ ಸದಸ್ಯರಾದ ಸರಿತಾ ಪಾಟೀಲ, ಪುಷ್ಪಾ ಪರ್ವತರಾವ, ಲೀನಾ ಟೋಪಣ್ಣವರ, ಮನಿಷಾ ಸುಭೇದಾರ, ಅನುಶ್ರೀ ದೇಶಪಾಂಡೆ ರ್‌್ಯಾಲಿಯಲ್ಲಿ ಭಾಗವಹಿಸಿದ್ದರು.
 
ಸಮನ್ವಯ ಮಹಿಳಾ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಜ್ಯೋತಿ ಬಾದಾಮಿ ನೇತೃತ್ವ ವಹಿಸಿದ್ದರು. ‘ಮಹಿಳೆ ಎಂದರೆ ಆಟದ ವಸ್ತುಗಳಲ್ಲ, ಅವರೊಂದಿಗೆ ಆಟವಾಡಬೇಡಿ, ಅತ್ಯಾಚಾರಿಗಳ ವಿರುದ್ಧ ಸಿಡಿದೆದ್ದ ಮಹಿಳೆ, ಅತ್ಯಾಚಾರಿಗಳಿಗೆ ಏನು ಶಿಕ್ಷೆ? ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಿ, ಬದಲಾವಣೆಯತ್ತ ಮಹಿಳೆ, ದೌರ್ಜನ್ಯ ತಡೆಯಿರಿ, ಮಹಿಳೆಯರನ್ನು ರಕ್ಷಿಸಿ, ಸಮಾಜವವನ್ನು ರಕ್ಷಿಸಿ ಎಂಬ ಘೋಷವಾಕ್ಯಗಳಿದ್ದ ಫಲಕಗಳನ್ನು ಹಿಡಿದು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.