ADVERTISEMENT

ಅಪಾಯಕ್ಕೆ ಆಹ್ವಾನ ನೀಡುವ ಸೇತುವೆ

ಪ್ರಸನ್ನ ಕುಲಕರ್ಣಿ
Published 13 ಸೆಪ್ಟೆಂಬರ್ 2017, 6:10 IST
Last Updated 13 ಸೆಪ್ಟೆಂಬರ್ 2017, 6:10 IST
ಖಾನಾಪುರ ಪಟ್ಟಣದ ಹೊರವಲಯದಲ್ಲಿ ಶಿಥಿಲಾವಸ್ಥೆಯಲ್ಲಿರುವ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ
ಖಾನಾಪುರ ಪಟ್ಟಣದ ಹೊರವಲಯದಲ್ಲಿ ಶಿಥಿಲಾವಸ್ಥೆಯಲ್ಲಿರುವ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ   

ಖಾನಾಪುರ: ಪಟ್ಟಣದ ಹೊರವಲಯದ ಬೆಳಗಾವಿ–ಪಣಜಿ ರಾಷ್ಟ್ರೀಯ ಹೆದ್ದಾರಿ­ಯಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಶಿಥಿಲಗೊಂಡಿದೆ.
ಐದು ದಶಕಗಳ ಇತಿಹಾಸ ಹೊಂದಿರುವ ಸೇತುವೆಯ ಮೇಲಿನ ರಸ್ತೆ ಪಕ್ಕದಲ್ಲಿ ಸಮರ್ಪಕವಾದ ತಡೆಗೋಡೆ­ಯಿಲ್ಲದ್ದರಿಂದ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವ ಅನಿವಾರ್ಯತೆ ನಿರ್ಮಾಣ­ವಾಗಿದೆ.

ಸೇತುವೆಯ ಕೆಳಭಾಗದ ಗೋಡೆ ಬಿರುಕುಗೊಂಡಿದ್ದು, ಈ ಹೆದ್ದಾರಿಯಲ್ಲಿ ಭಾರೀ ವಾಹನಗಳು ಸಂಚರಿಸುವ ಕಾರಣ ದಿನೇ ದಿನೇ ಸೇತುವೆ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ.

ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಗೋವಾ ಸಂಪರ್ಕಿಸುವ ರಾಜ್ಯದ ಪ್ರಮುಖ ಹೆದ್ದಾರಿಯಲ್ಲಿ ಈ ಸೇತುವೆಯಿದ್ದು, 1970ರ ದಶಕದಲ್ಲಿ ನಿರ್ಮಾಣ­ಗೊಂಡಿದೆ. ಸೇತುವೆಯ ಅಡಿಪಾಯ­ವನ್ನು ಕಲ್ಲುಗಳಿಂದ ನಿರ್ಮಿಸಲಾಗಿದ್ದು, ಪಟ್ಟಣದಿಂದ ನಂದಗಡ, ಬೀಡಿ, ಅಳ್ನಾವರ, ಹಳಿಯಾಳ, ಗುಂಜಿ, ಲೋಂಡಾ, ದಾಂಡೇಲಿ, ಭೀಮಗಡ, ಹೆಮ್ಮಡಗಾ, ಪಣಜಿ, ಕಾರವಾರ, ಧಾರವಾಡ ಮತ್ತಿತರ ಪ್ರದೇಶಗಳಿಗೆ ತೆರಳಲು ಇದೊಂದೇ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.

ADVERTISEMENT

ಸೇತುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀನಕ್ಕೊಳ­ಪಟ್ಟಿದ್ದು, ಸೇತುವೆಯ ದುರಸ್ತಿಗಾಗಿ ಅಗತ್ಯ ಕ್ರಮ ಜರುಗಿಸಲು ಸ್ಥಳೀಯ ಆಡಳಿತದಿಂದ ಹಲವು ಬಾರಿ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ ಎಂದು ಪಟ್ಟಣದ ಪಟ್ಟಣ ಪಂಚಾಯ್ತಿಯವರು ದೂರುತ್ತಾರೆ.

ಸೇತುವೆಯ ಕೆಳಭಾಗದಲ್ಲಿ ಮಲಪ್ರಭಾ ನದಿ ರಭಸದಿಂದ ಹರಿಯುತ್ತಿದ್ದು, ಸೇತುವೆಯ ಇಕ್ಕೆಲಗಳಲ್ಲಿ ತಡೆಗೋಡೆ ಇಲ್ಲದ ಕಾರಣ ಕಳೆದ 5 ವರ್ಷಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಜನರು ಸೇತುವೆಯ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವು ಸಣ್ಣ ಪುಟ್ಟ ಅಪಘಾತಗಳು ಜರುಗಿ ಪ್ರಯಾ­ಣಿಕರು ಗಾಯಗೊಂಡಿದ್ದಾರೆ.

ಸೇತುವೆ ಕ್ಷಮತೆಯನ್ನು ಪರೀಕ್ಷಿಸಿ ಅದರ ಮೇಲೆ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ತಡೆಗೋಡೆಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಪಟ್ಟಣದ ನಾಗರಿಕ ಮಹಾಂತೇಶ ರಾಹುತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಒತ್ತಾಯಿ­ಸಿದ್ದಾರೆ. ಒಟ್ಟಾರೆ ಅವಘಡ ಸಂಭವಿಸು­ವುದಕ್ಕೂ ಮುನ್ನ ಸೇತುವೆಯ ಸುಸ್ಥಿತಿಗೆ ಸಂಬಂಧಪಟ್ಟವರು ಮುಂದಾಗ­ಬೇಕೆಂಬುದು ಖಾನಾಪುರ ತಾಲ್ಲೂಕಿನ ನಾಗರಿಕರ ಒಕ್ಕೂರಲಿನ ಆಗ್ರಹ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.