ADVERTISEMENT

ಅಭಯ ಪಾಟೀಲ ವಿರುದ್ಧ ತನಿಖೆಗೆ ಆದೇಶ

ಅಕ್ರಮ ಆಸ್ತಿ ಗಳಿಕೆ ದೂರು; ವಿಶೇಷ ಲೋಕಾಯುಕ್ತ ನ್ಯಾಯಾಲಯದಿಂದ ಎಸಿಬಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 7:04 IST
Last Updated 22 ಏಪ್ರಿಲ್ 2017, 7:04 IST
ಬೆಳಗಾವಿ: ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಮಾಜಿ ಶಾಸಕ, ಬಿಜೆಪಿಯ ಅಭಯ ಪಾಟೀಲ ಅವರ ವಿರುದ್ಧ ತನಿಖೆ ಕೈಗೊಂಡು, ಇದೇ 27ರೊಳಗೆ ವರದಿ ಸಲ್ಲಿಸಬೇಕೆಂದು 4ನೇ ಹೆಚ್ಚುವರಿ ಜಿಲ್ಲಾ ಹಾಗೂ ವಿಶೇಷ ಲೋಕಾಯುಕ್ತ ನ್ಯಾಯಾಲಯವು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ)  ಗುರುವಾರ ಆದೇಶ ನೀಡಿದೆ.
 
ಸಾಮಾಜಿಕ ಕಾರ್ಯಕರ್ತ ಸುಜಿತ್‌ ಮುಳಗುಂದ ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ನ್ಯಾಯಾಧೀಶ ಸುಖಬೀರ್‌ ಜೈನ್‌ ಗುರುವಾರ ಆದೇಶ ಹೊರಡಿಸಿದ್ದಾರೆ.
 
ಸುದ್ದಿಗಾರರ ಜೊತೆ ಮಾತನಾಡಿದ ದೂರುದಾರ ಸಾಮಾಜಿಕ ಕಾರ್ಯಕರ್ತ ಸುಜಿತ್‌ ಮುಳಗುಂದ, ‘2012ರಲ್ಲಿ ಶಾಸಕರಾಗಿದ್ದ ಅಭಯ ಪಾಟೀಲ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ನೀಡಿರುವ ಆಸ್ತಿ ವಿವರಣೆಗೂ ವಾಸ್ತವಿಕವಾಗಿ ಅವರು ಹೊಂದಿರುವ ಆಸ್ತಿಗೂ ಅಜಗಜಾಂತರ ವ್ಯತ್ಯಾಸವಿದೆ.
 
ಅಕ್ರಮ ಆಸ್ತಿ ಗಳಿಕೆಯಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರ ಬಗ್ಗೆ ತನಿಖೆ ಕೈಗೊಳ್ಳುವಂತೆ 2012ರಲ್ಲಿ ನಾವು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದೆವು’ ಎಂದು ಹೇಳಿದರು. 
 
‘ನಾಗರಿಕರ ಉಪಯೋಗಕ್ಕಾಗಿ ಹಾಗೂ ಮಕ್ಕಳ ಉದ್ಯಾನ ನಿರ್ಮಿಸಲು ಮೀಸಲು ಇಟ್ಟಿದ್ದ ಸಿ.ಎ ಸೈಟ್‌ಗಳನ್ನು ಇವರು ಭೂ ಪರಿವರ್ತನೆ ಮಾಡಿ ಮಾರಾಟ ಮಾಡಿದ್ದಾರೆ. ಇದರ ಬಗ್ಗೆ ತನಿಖೆ ಕೈಗೊಳ್ಳಬೇಕೆಂದು ದೂರು ನೀಡಿದ್ದೇವು’ ಎಂದರು. 
 
ತನಿಖೆಗೆ ಆದೇಶ: ಶಾಸಕನಾಗಿರುವ ಕಾರಣ ನನ್ನ ವಿರುದ್ಧ ತನಿಖೆ ನಡೆಸಲು ಶಾಸನಸಭೆಯ ಅನುಮತಿ ಪಡೆಯುವುದು ಅವಶ್ಯ. ಶಾಸನಸಭೆ ಅನುಮತಿ ಪಡೆಯದಿರುವುದರಿಂದ ತನಿಖೆ ರದ್ದುಪಡಿಸಬೇಕೆಂದು ಅಭಯ ಪಾಟೀಲ ಅವರು ಆಗ ಧಾರವಾಡದ ಹೈಕೋರ್ಟ್‌ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ತದನಂತರ ಪೀಠವು ಈ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.
 
‘ಮೇಲ್ಮನವಿಯ ವಿಚಾರಣೆ ನಡೆಸಿದ ವಿಶೇಷ ಲೋಕಾಯುಕ್ತ ನ್ಯಾಯಾಧೀಶ  ಸುಖಬೀರ್‌ ಸಿಂಗ್‌ ಅವರು, ಅಭಯ ಪಾಟೀಲ ಅವರು ಈಗ ಶಾಸಕರಲ್ಲ. ಅವರ ವಿರುದ್ಧ ತನಿಖೆ ನಡೆಸಲು ಶಾಸನಸಭೆಯ ಅನುಮತಿ ಅವಶ್ಯಕತೆ ಇಲ್ಲ. ತನಿಖೆ ನಡೆಸಿ, ಇದೇ ತಿಂಗಳ 27ರೊಳಗೆ ವರದಿ ನೀಡುವಂತೆ ಎಸಿಬಿಗೆ ಆದೇಶ ನೀಡಿದ್ದಾರೆ’ ಎಂದು ಬಗ್ಗೆ ಸುಜಿತ್‌ ಮುಳಗುಂದ ಸುದ್ದಿಗಾರರಿಗೆ ತಿಳಿಸಿದರು.
 
‘ಸಮಾಜದಲ್ಲಿರುವ ಭ್ರಷ್ಟಾಚಾರವನ್ನು ತೊಡೆದುಹಾಕಲು ಹೋರಾಟ ಮಾಡುತ್ತಿದ್ದೇವೆ. ಜನರ ಕಲ್ಯಾಣ ಮಾಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬರುವ ಶಾಸಕರು, ಜನಪ್ರತಿನಿಧಿಗಳು ತಮ್ಮ ಕಲ್ಯಾಣವನ್ನಷ್ಟೇ ನೋಡಿಕೊಳ್ಳುತ್ತಾರೆ. ಯಾವುದೇ ಪಕ್ಷವಿರಲಿ, ಶಾಸಕರಿರಲಿ ಅವರ ವಿರುದ್ಧ ನಿರಂತರ ಹೋರಾಟ ಮಾಡುತ್ತೇನೆ’ ಎಂದು ಮುಳಗುಂದ ನುಡಿದರು. 
***
‘ಯಾವುದೇ ತನಿಖೆಗೆ ಸಿದ್ಧ’
‘ನನಗೆ ನ್ಯಾಯಾಲಯ ಆದೇಶದ ಪ್ರತಿ ಸಿಕ್ಕಿಲ್ಲ. ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನ್ಯಾಯಾಲಯದ ಆದೇಶಕ್ಕೆ ಬದ್ಧನಾಗಿರುತ್ತೇನೆ. ಯಾವುದೇ ತನಿಖೆಗೂ ಸಿದ್ಧನಾಗಿದ್ದೇನೆ’ ಎಂದು ಮಾಜಿ ಶಾಸಕ ಅಭಯ ಪಾಟೀಲ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.