ADVERTISEMENT

ಆಸ್ತಿ ಮರು ಸಮೀಕ್ಷೆ, ಶೇ 15ರಷ್ಟು ತೆರಿಗೆ ಹೆಚ್ಚಳ

ಮಹಾನಗರ ಪಾಲಿಕೆಯ 2017–18ನೇ ಸಾಲಿನ ಆಯವ್ಯಯ ಮಂಡನೆ, ಅನುಮೋದನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:39 IST
Last Updated 8 ಫೆಬ್ರುವರಿ 2017, 9:39 IST
ಬೆಳಗಾವಿಯ ಮಹಾನಗರಪಾಲಿಕೆಯಲ್ಲಿ ಮಂಡಿಸಲಾದ 2017–18ರ ಆಯವ್ಯಯ ಪ್ರತಿಯನ್ನು ಮೇಯರ್‌ ಸರಿತಾ ಪಾಟೀಲ, ನಗರಪಾಲಿಕೆ ಆಯುಕ್ತ ಶಶಿಧರ ಕುರೇರ, ತೆರಿಗೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ರತನ ಮಾಸೇಕರ ಹಾಗೂ ಉಪಮೇಯರ್‌ ಸಂಜಯ ಶಿಂಧೆ ಪ್ರದರ್ಶಿಸಿದರು.
ಬೆಳಗಾವಿಯ ಮಹಾನಗರಪಾಲಿಕೆಯಲ್ಲಿ ಮಂಡಿಸಲಾದ 2017–18ರ ಆಯವ್ಯಯ ಪ್ರತಿಯನ್ನು ಮೇಯರ್‌ ಸರಿತಾ ಪಾಟೀಲ, ನಗರಪಾಲಿಕೆ ಆಯುಕ್ತ ಶಶಿಧರ ಕುರೇರ, ತೆರಿಗೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ರತನ ಮಾಸೇಕರ ಹಾಗೂ ಉಪಮೇಯರ್‌ ಸಂಜಯ ಶಿಂಧೆ ಪ್ರದರ್ಶಿಸಿದರು.   

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯ 2017–18ನೇ ಸಾಲಿನಲ್ಲಿ ಅಂದಾಜು ₹ 27.99 ಲಕ್ಷ ಉಳಿತಾಯ ಆಯವ್ಯಯವನ್ನು ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಮಂಡಿಸಿ ಅನು ಮೋದನೆ ಪಡೆಯಲಾಯಿತು.

ಮೇಯರ್‌ ಸರಿತಾ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆರಿಗೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ರತನ ಮಾಸೇಕರ ಅವರು ತೆರಿಗೆ ಸಂಗ್ರಹ ಹಾಗೂ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ನೀಡಿರುವ ಆಯವ್ಯಯವನ್ನು ಮಂಡಿಸಿದರು.

ಈ ಸಾಲಿನಲ್ಲಿ ಸರ್ಕಾರ ಸೇರಿದಂತೆ ವಿವಿಧ ಮೂಲಗಳಿಂದ ₹ 342.42 ಕೋಟಿ ಸ್ವೀಕೃತಿಯ ನಿರೀಕ್ಷೆ ಮಾಡಲಾಗಿದ್ದು, ₹ 342.14 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.

2016–17ನೇ ಸಾಲಿನಲ್ಲಿ ಪ್ರಾರಂಭ ವಾದ ಆಸ್ತಿ ತೆರಿಗೆ ವಸೂಲಿ ಅಭಿಯಾನ ವನ್ನು ಪರಿಣಾಮಕಾರಿಯಾಗಿ ಮುಂದು ವರಿಸಿ, ಜನವರಿ ಅಂತ್ಯದೊಳಗೆ ₹ 21 ಕೋಟಿ ವಸೂಲಿ ಮಾಡಲಾಗಿದೆ. 2017–18ನೇ ಸಾಲಿನಲ್ಲಿ ಆಸ್ತಿಗಳ ವಿವರಗಳನ್ನು ಮರು ಸರ್ವೆ ಮಾಡಿ, ಆಸ್ತಿಗಳ ಮೇಲಿನ ತೆರಿಗೆಯನ್ನು ಶೇ 15ರಷ್ಟು ಹೆಚ್ಚಿಸುವು ದರೊಂದಿಗೆ ₹ 35 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಸ್ವಯಂ ಘೋಷಿತ ಆಸ್ತಿ ತೆರಿಗೆ ಆದಾಯದ ಎಲ್ಲ ಆಸ್ತಿಗಳಿಗೆ ಮರುಸರ್ವೆ ಮಾಡುವ ಕುರಿತು ಹೊರಗುತ್ತಿಗೆಗೆ ವಹಿಸುವ ಚಿಂತನೆ ನಡೆಸಲಾಗುತ್ತಿದೆ. ಅದರಂತೆ ಆಸ್ತಿ ತೆರಿಗೆಯನ್ನು ಸಂಪೂರ್ಣ ಗಣಕೀಕರಣಗೊಳಿಸಿ, 2017–18ನೇ ಸಾಲಿನಲ್ಲಿಯೇ ಆದ್ಯತೆ ಮೇರೆಗೆ ಗಣಕೀಕೃತ ಚಲನ್‌ಗಳನ್ನು ನೀಡಲು ಪ್ರಸ್ತಾಪಿಸಲಾಗಿದೆ.

ನಕ್ಷೆ ಕಡ್ಡಾಯ!: ಸ್ವಯಂಘೋಷಿತ ಆಸ್ತಿಗಳ 4,000 ಚ.ಅಡಿ ಹೆಚ್ಚಿನ ಅಳತೆ ಹೊಂದಿದ ಆಸ್ತಿಗಳಿಗೆ ಅನುಮೋದಿತ ನಕ್ಷೆಗಳನ್ನು ಕಡ್ಡಾಯಗೊಳಿಲಾಗುವುದು. ಇದರಿಂದಾಗಿ, ತಪ್ಪು ಲೆಕ್ಕಾಚಾರ ತಪ್ಪಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ ನಂತರ ಅಂದರೆ ನ. 10ರಿಂದ ಡಿ. 15ರವರೆಗೆ ₹ 3.21 ಕೋಟಿಯನ್ನು ಸಾರ್ವಜನಿಕರು ವಿವಿಧ ಕರದ ರೂಪದಲ್ಲಿ ಪಾವತಿ ಸಿದ್ದಾರೆ! ಸರ್ಕಾರದ ಮಾನದಂಡದ ಪ್ರಕಾರ, ಪರಿಸರಸ್ನೇಹಿ ಕಟ್ಟಡಗಳಿಗೆ ಶೇ 10ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡಲಾಗುವುದು. ಅದರಂತೆ, ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸ್ವಾತಂತ್ರ್ಯ ಯೋಧರಿಗೆ ಅವರ ಆಸ್ತಿ ತೆರಿಗೆಯಲ್ಲಿ ಶೇ 10ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಘೋಷಿಸಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಹೋರ್ಡಿಂಗ್‌, ಕಿಯೋಸ್ಕ್‌, ಕ್ಯಾಂಟಿಲೀವರ್‌, ಗ್ಯಾಂಟ್ರೀಸ್‌, ಬ್ಯಾನರ್‌ಗಳು, ಕಟೌಟ್‌ಗಳು ಹಾಗೂ ಬಸ್ ತಂಗುದಾಣಗಳ ಜಾಹೀರಾತು ಕರ ವಸೂಲಿಯಿಂದ ಮತ್ತು ಮರು ಸಮೀಕ್ಷೆಯಿಂದ ₹ 1 ಕೋಟಿ ಆದಾಯ ಅಂದಾಜಿಸಲಾಗಿದೆ. ಈ ಎಲ್ಲದರ ಮೇಲೆ ಶೇ 30ರಷ್ಟು ಹೆಚ್ಚಿನ ಕರ ವಸೂಲಿಗೆ ಯೋಜಿಸಲಾಗಿದೆ.

ಶುಲ್ಕ, ಪರವಾನಗಿ: ಅಭಿವೃದ್ಧಿ ಶುಲ್ಕ ₹ 5 ಕೋಟಿ, ಮೂಲಸೌಲಭ್ಯ ಹಾಗೂ ಸ್ಲಂ ಸೆಸ್‌ನಿಂದ ₹ 2.07 ಕೋಟಿ, ಪಾಲಿಕೆ ವ್ಯಾಪ್ತಿಯಲ್ಲಿ ಕೇಬಲ್‌ ಅಳವಡಿಕೆ ಶುಲ್ಕ ವೆಂದು ₹ 7 ಕೋಟಿ, ಈ ಪೈಕಿ ಹೆಸ್ಕಾಂನಿಂದ ₹ 5 ಕೋಟಿ ಹಾಗೂ ಕಟ್ಟಡ ಪರವಾನಗಿಯಿಂದ ₹ 1 ಕೋಟಿ ಸೇರಿ ಒಟ್ಟು ₹ 15.07 ಕೋಟಿ, ನಗರ ವ್ಯಾಪ್ತಿಯಲ್ಲಿ ಅಡುಗೆ ಅನಿಲ ಸಂಪರ್ಕದ ರಸ್ತೆ ಅಗೆತದಿಂದ ₹ 2.50 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ಅಭಿವೃದ್ಧಿ ಕರವನ್ನು ಈ ಹಿಂದೆ 2012ರಲ್ಲಿ ಹೆಚ್ಚಿಗೆ ಮಾಡಲಾಗಿದ್ದು, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಅಭಿವೃದ್ಧಿ ಕರವನ್ನು ಗಣನೆಗೆ ತೆಗೆದುಕೊಂಡು ಹೆಚ್ಚಿಸಲಾಗು ವುದು. ಖುಲ್ಲಾ ಜಾಗಗಳು, ಕಟ್ಟಡ ಆವಶೇಷ ತೆರವುಗೊಳಿಸುವುದು ಹಾಗೂ ಇತರೆ ಆದಾಯಗಳನ್ನು ಸಹ ವಾಸ್ತವಿಕ ವಾಗಿ ಲೆಕ್ಕ ಹಾಕಿ ಪಾಲಿಕೆಯ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.

ಕಟ್ಟಡ ಪರವಾನಗಿಯನ್ನು ತ್ವರಿತಗತಿ ಯಲ್ಲಿ ಸಂಪೂರ್ಣ ಗಣಕೀಕೃತಗೊಳಿಸಿ, ನಾಗರಿಕರಿಗೆ ಪೂರೈಸಲು ಅತಿ ಶೀಘ್ರ ದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆಯ ಕಟ್ಟಡ ಉಪವಿಧಿಗಳನ್ನು ಪ್ರಸ್ತುತ ಸಾಲಿನಲ್ಲಿ ಪೂರ್ಣಗೊಳಿಸಿ ಅಳವಡಿಸಲಾಗುವುದು. ಇದರಿಂದಲೂ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ.

ನೀರು ಸರಬರಾಜು: ಹಿಡಕಲ್‌ ಜಲಾಶಯದಿಂದ ಬೃಹತ್‌ ಉದ್ದಿಮೆ ಗಳಿಗೆ ನೀರು ಸರಬರಾಜು ಮಾಡಲು ಬಳಸುವ ವಿದ್ಯುತ್‌ ಬಿಲ್‌ ಮೊತ್ತ ಮರುಪಾವತಿಯಿಂದ ₹ 3.50 ಕೋಟಿ ನಿರೀಕ್ಷಿಸಲಾಗಿದೆ. ಬಸವನಕೊಳ್ಳ ಜಲ ಶುದ್ಧೀಕರಣ ಘಟಕದ ಕಾಮಗಾರಿಯು ಪೂರ್ಣಗೊಂಡಿದ್ದು, ನಗರದ ಉತ್ತರ ಭಾಗದ ಮಾಳಮಾರುತಿ, ರಾಮ ತೀರ್ಥನಗರ, ಕಣಬರಗಿ ಪ್ರದೇಶದ ಬಹುದಿನ ಬೇಡಿಕೆ ಈಡೇರಿದಂತಾಗಿ, ಕುಡಿಯುವ ನೀರು ಪೂರೈಕೆ ಸುಲಲಿತ ವಾಗಲಿದೆ. ಇದರಿಂದ, ಸುಮಾರು 1 ಲಕ್ಷ ಜನರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಲಾಗಿದೆ.

ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಬೆಳಗಾವಿಯ ಉದ್ಯಮಬಾಗ ಕೈಗಾರಿಕಾ ಪ್ರದೇಶದಿಂದ ಪಾಲಿಕೆಗೆ ಬರಬೇಕಾದ ನೀರಿನ ಬಾಕಿಯನ್ನು ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ, ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಉಲ್ಲೇಖಿಸಲಾಗಿದೆ.

ಉದ್ದಿಮೆ ಪರವಾನಗಿ ಶುಲ್ಕವೆಂದು ₹ 1.10 ಕೋಟಿ ಉದ್ದಿಮೆ ಪರವಾನಗಿಗೆ ಆಡಳಿತಾತ್ಮಕ ಶುಲ್ಕ, ವಾಹನ ನಿಲುಗಡೆ ಹಾಗೂ ಇತರ ಶುಲ್ಕವೆಂದು ₹ 33.10 ಲಕ್ಷ ಅಂದಾಜು ಆದಾಯ ನಿರೀಕ್ಷಿಸ ಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಳ ಪಡುವ ಖಾಲಿ ಜಾಗಗಳನ್ನು ಮಾರುವು ದರಿಂದ ₹ 30 ಕೋಟಿ ಬಂಡವಾಳ ನಿರೀಕ್ಷಿಸಲಾಗಿದೆ. ಇದರಿಂದ ಬಂದ ಹಣವನ್ನು ಪಾಲಿಕೆ ಆಸ್ತಿ ನಿರ್ಮಾಣಕ್ಕಾಗಿ ವಿನಿಯೋಗಿಸ ಲಾಗುವುದು.

ಘನತ್ಯಾಜ್ಯ ವಿಂಗಡಣೆ ಘಟಕ: ₹ 3 ಕೋಟಿ ವೆಚ್ಚದಲ್ಲಿ ಘನತ್ಯಾಜ್ಯ ವಿಂಗಡಣೆ ಘಟಕ ಸ್ಥಾಪಿಸಲಾಗುವುದು. ಮಾನವ ಸಂಪನ್ಮೂಲದ ಜೊತೆಯಲ್ಲಿ ಯಾಂತ್ರೀಕೃತ ಘನತ್ಯಾಜ್ಯ ವಿಲೇವಾರಿ ಯನ್ನು ಅಳವಡಿಸಿ, ಮನೆ ಮನೆಗೆ ಹೋಗಿ ಕಸ ಸಂಗ್ರಹಿಸಲು ಮತ್ತು ಅವುಗಳನ್ನು ಹಸಿ, ಒಣ ಕಸವೆಂದು ವಿಂಗಡಿಸಲು ಆದ್ಯತೆ ನೀಡಲಾಗುವುದು. ಈ ಮೂಲಕ ನಗರವನ್ನು ಸ್ವಚ್ಛ ಹಾಗೂ ಮಾದರಿ ನಗರವನ್ನಾಗಿ ಮಾಡಲು ಸಂಕಲ್ಪಿಸ ಲಾಗಿದೆ.

ಜನನ, ಮರಣ ನೋಂದಣಿಯ ರಿಜಿಸ್ಟರ್‌ಗಳನ್ನು ಗಣಕೀಕರಣ ಮಾಡಲು ಯೋಜಿಸಲಾಗಿದೆ. ಈಗಿರುವ ಪಾಲಿಕೆಯ ಕಟ್ಟಡಕ್ಕೆ ಹೊಂದಿಕೊಂಡು ಅನೆಕ್ಸ್‌ ಕಟ್ಟಡಕ್ಕಾಗಿ ₹ 5 ಕೋಟಿ ನಿಗದಿಪಡಿಸ ಲಾಗಿದೆ. ಇದನ್ನು ಪಾಲಿಕೆಯ ನಿಧಿ ಯಿಂದ ಭರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ವಾಣಿಜ್ಯ ಉದ್ದೇಶಕ್ಕೆ ಉಪ ಯೋಗವಾಗುವಂಥ ಖುಲ್ಲಾ ಜಾಗಗ ಳನ್ನು ವಶಕ್ಕೆ ಪಡೆದಿದೆ.

ADVERTISEMENT

ಆ ಜಾಗಗಳನ್ನು ಸಾರ್ವಜನಿಕರಿಗೆ ಉಪಯೋಗವಾಗು ವಂತೆ ಮಾಡಲು ವಾಣಿಜ್ಯ ಸಂಕೀರ್ಣ ಹಾಗೂ ಮಾರುಕಟ್ಟೆ ನಿರ್ಮಿಸಲು ₹ 10 ಕೋಟಿ ಪಾಲಿಕೆ ನಿಧಿಯಿಂದ ನಿಗದಿ ಪಡಿಸಲಾಗಿದೆ.

ಮಿನಿ ಮಾರುಕಟ್ಟೆ ಕಾಂಪ್ಲೆಕ್ಸ್‌ ನಿರ್ಮಿಸಲು ₹ 1.50 ಕೋಟಿ, ರಸ್ತೆಬದಿ ವ್ಯಾಪಾರಿಗಳಿಗೆ ಪಾಲಿಕೆಯಿಂದ ನಿಗದಿತ ಸ್ಥಳಗಳಲ್ಲಿ ಸ್ವ–ಉದ್ಯೋಗ ಕೈಗೊಳ್ಳಲು ತಳ್ಳುಗಾಡಿ ಪೂರೈಸಲು ₹ 1 ಕೋಟಿ, ವಿವಿಧ ಬಡಾವಣೆಗಳಲ್ಲಿ ಸೌರ ದೀಪಗಳನ್ನು ಅಳವಡಿಸಲು ₹ 50 ಲಕ್ಷ, ವಾರ್ಡ್‌ಗಳಲ್ಲಿನ ಮೂಲಸೌಲಭ್ಯ ಅಭಿವೃದ್ಧಿಗೆ ತಲಾ ₹ 10 ಲಕ್ಷ, ಬಸ್‌ ತಂಗುದಾಣ ನಿರ್ಮಾಣಕ್ಕೆ ₹ 1 ಕೋಟಿ, ವೃತ್ತಗಳ ಅಭಿವೃದ್ಧಿಗೆ ₹ 1 ಕೋಟಿ ನಿಗದಿಪಡಿಸಲಾಗಿದೆ.

ನಾನಾ–ನಾನಿ, ಚಿಣ್ಣರಿಗೆ ಉದ್ಯಾನ: ಹೊಸದಾಗಿ ‘ನಾನಾ–ನಾನಿ’ ಉದ್ಯಾನ ಅಭಿವೃದ್ಧಿಪಡಿಸಲು ₹ 1 ಕೋಟಿ, ಕಿಲ್‌–ಬಿಲ್‌/ ಚಿಣ್ಣರ ಉದ್ಯಾನ ನಿರ್ಮಾಣಕ್ಕೆ 50 ಲಕ್ಷ, ಹೊಸ ಗಣಕಯಂತ್ರಗಳ ಖರೀದಿಗೆ ₹ 97 ಲಕ್ಷ, ಮೇಯರ್ ಸೂಚಿಸಿದ ಅಭಿವೃದ್ಧಿ ಕಾರ್ಯಕ್ಕೆ ₹ 50 ಲಕ್ಷ, ಉಪಮೇಯರ್ ಸೂಚಿಸಿದ ಅಭಿವೃದ್ಧಿ ಕೆಲಸಕ್ಕೆ ₹ 25 ಲಕ್ಷ ನಿಗದಿ ಪಡಿಸಲಾಗಿದೆ. ₹ 20 ಲಕ್ಷದಲ್ಲಿ ಹೊಸ ವಾಹನ ಖರೀದಿಗೆ ಯೋಜಿಸಲಾಗಿದೆ.

ಸಾರ್ವಜನಿಕ ಶೌಚಾಲಯ ಹಾಗೂ ಒಳಚರಂಡಿ ನಿರ್ಮಾಣಕ್ಕೆ ₹ 1 ಕೋಟಿ, ಪ.ಜಾತಿ,ಪಂಗಡದ ಬಡಾವಣೆಯ ಅಭಿ ವೃದ್ಧಿಗೆ ₹ 3.22 ಕೋಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ₹ 96.92 ಲಕ್ಷ ಹಾಗೂ ಅಂಗವಿಕಲರ ಕಲ್ಯಾಣಕ್ಕೆ ₹ 40.10 ಲಕ್ಷ ನಿಗದಿಪಡಿಸಲಾಗಿದೆ. ಉಪಮೇಯರ್‌ ಸಂಜಯ ಶಿಂಧೆ, ನಗರಪಾಲಿಕೆ ಆಯುಕ್ತ ಶಶಿಧರ ಕುರೇರ, ಶಾಸಕ ಸಂಭಾಜಿ ಪಾಟೀಲ, ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.