ADVERTISEMENT

ಆಹಾರ ಶೇಖರಣಾ ಘಟಕಕ್ಕೆ ಬೀಗ ಜಡಿದು ಪಾಲಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 6:15 IST
Last Updated 9 ಸೆಪ್ಟೆಂಬರ್ 2017, 6:15 IST

ಬೈಲಹೊಂಗಲ: ತಾಲ್ಲೂಕಿನ ಕುರುಗುಂದ ಗ್ರಾಮದ ಬಸವೇಶ್ವರ ದೇವಸ್ಥಾನ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕಳಪೆ ಮಟ್ಟದ ಆಹಾರ ವಿತರಿಸಲಾಗುತ್ತಿದೆ. ಇದರಿಂದ ಮಕ್ಕಳು, ಗರ್ಭಿಣಿಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಆರೋಪಿಸಿ ಪಾಲಕರು ಗುರುವಾರ ಪ್ರತಿಭಟನೆ ನಡೆಸಿದರು.

ಅಂಗನವಾಡಿಯ ಆಹಾರ ಶೇಖರಣಾ ಘಟಕಕ್ಕೆ ದಿಢೀರ್ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟಿಸಿದ ಪಾಲಕರು ಅಂಗನವಾಡಿ ಸಹಾಯಕಿ ಅನಸೂಯಾ ಹುದ್ದಾರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಗ್ರಾಮದ ಮುಖಂಡ ರಮೇಶ ಗೊಂದಳಿ ಮಾತನಾಡಿ, ‘ಅಂಗನ ವಾಡಿಯಲ್ಲಿ ಮಕ್ಕಳಿಗೆ ಕಳಪೆಮಟ್ಟದ ಆಹಾರ ವಿತರಣೆ ಮಾಡುತ್ತಿದ್ದು ಅದನ್ನು ತಡೆಗಟ್ಟಿ ಅಂಗನವಾಡಿ ಶಿಕ್ಷಕಿ ಮೇಲೆ ಶಿಸ್ತು ಕ್ರಮಕೈಕೊಳ್ಳಬೇಕು. ಮುಂದೆ ಆಗುವ ದುರಂತ ತಡೆ ಹಿಡಿಯಬೇಕು’ ಎಂದು ಒತ್ತಾಯಿಸಿದರು. ಶಿವಪ್ಪ ಹಟ್ಟಿಹೊಳಿ, ಸುರೇಶ ಮುರಗೋಡ ಮಾತನಾಡಿದರು.

ADVERTISEMENT

ತಾಲ್ಲೂಕು ಸಹಾಯಕ ಆರೋಗ್ಯ ಮೇಲ್ವಿಚಾರಕಿ ಎಸ್.ವಿ.ಹಿರೇಮಠ ಮಾತನಾಡಿ, ಇಲ್ಲಿ ಕಳೆದ 5-6 ತಿಂಗಳಿ ನಿಂದ ಉಳಿಯುತ್ತಿರುವ ಆಹಾರ ವಿತರಿಸುತ್ತಿರುವುದು ಕಂಡು ಬಂದಿದೆ. ಇದರಿಂದ ಮಕ್ಕಳ, ಗರ್ಭಿಣಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಇದನ್ನು ತಪ್ಪಿಸಲು ಶೀಘ್ರ ಕ್ರಮ ಕೈಕೊಳ್ಳುವುದಾಗಿ ಅವರು ತಿಳಿಸಿದರು.

ನಮ್ಮಲ್ಲಿ ಆಹಾರ ಪದಾರ್ಥ ಉಳಿಯುತ್ತಿದೆ ಎಂದು ಅಧಿಕಾರಿಗಳ ಗಮನಕ್ಕೆ ತರಬೇಕು. ಸುಮ್ಮನೆ ಉಳಿಸಿಕೊಂಡು ಆಹಾರ ಪದಾರ್ಥ ಹಾಳು ಮಾಡಬಾರದು. ಕೇಂದ್ರದ ಆಹಾರವನ್ನು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮಕೈಕೊಳ್ಳಲಾಗುವದು ಎಂದು ಸಿಡಿಪಿಒ ಎ.ಎಫ್ ಮರೀಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.