ADVERTISEMENT

ಉದ್ಯಾನ ಪಕ್ಕದ ನಿವಾಸಿಗಳ ಅಳಲು

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:35 IST
Last Updated 15 ಮೇ 2017, 7:35 IST
ಬೆಳಗಾವಿಯ ಮಹಾತ್ಮಾ ಗಾಂಧಿ ಉದ್ಯಾನದಲ್ಲಿರುವ ದೊಡ್ಡ ಚರಂಡಿ ಬಳಿ ಶೌಚಾಲಯ ನಿರ್ಮಿಸಲಾಗುತ್ತಿದೆ
ಬೆಳಗಾವಿಯ ಮಹಾತ್ಮಾ ಗಾಂಧಿ ಉದ್ಯಾನದಲ್ಲಿರುವ ದೊಡ್ಡ ಚರಂಡಿ ಬಳಿ ಶೌಚಾಲಯ ನಿರ್ಮಿಸಲಾಗುತ್ತಿದೆ   

ಬೆಳಗಾವಿ: ನಗರದ ಮಹಾತ್ಮ ಗಾಂಧಿ ಉದ್ಯಾನದ ಒಂದು ಬದಿಯಲ್ಲಿ ನಿರ್ಮಿ ಸುತ್ತಿರುವ ಶೌಚಾಲಯ ಅವೈಜ್ಞಾನಿಕ ವಾಗಿದೆ ಎಂದು ಪಕ್ಕದ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾಯುವಿಹಾರ, ವಿಶ್ರಾಂತಿ ಪಡೆಯಲು ಉದ್ಯಾನಕ್ಕೆ ಬರುವವರಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿರುವ ಕೊರತೆ ನೀಗಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಒಂದು ತಿಂಗಳಿಂದ ಶೌಚಾಲಯ ನಿರ್ಮಾಣ ಕಾರ್ಯ ನಡೆದಿದೆ. ಗೋಡೆ, ಸ್ಲ್ಯಾಬ್‌ ಕಾರ್ಯ ಮುಗಿದಿದೆ. ಎರಡು ವಾರಗಳಲ್ಲಿ ಶೌಚಾಲಯ ಸಿದ್ಧವಾಗಲಿದೆ.

ಆದರೆ, ಶೌಚಾಲಯ ನಿರ್ಮಾಣದ ಸ್ಥಳದ ಬಗ್ಗೆ ಸ್ಥಳೀಯರಿಂದ ಅತೃಪ್ತಿ ವ್ಯಕ್ತವಾಗಿದೆ. ಮನೆಗಳ ಪಕ್ಕದಲ್ಲಿ ನಿರ್ಮಿಸುವ ಬದಲಿಗೆ, ಉದ್ಯಾನದ ಇನ್ನೊಂದು ಬದಿಯನ್ನು ಆಯ್ಕೆ ಮಾಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದು ಅವರ ಅಭಿಪ್ರಾಯ.

ADVERTISEMENT

ಏನಾಗಿದೆ ಇಲ್ಲಿ?: ಶಹಪುರದಲ್ಲಿ ಮಹಾತ್ಮ ಗಾಂಧಿ ಹಾಗೂ ಛತ್ರಪತಿ ಶಿವಾಜಿ ಉದ್ಯಾನಗಳು ಅಕ್ಕಪಕ್ಕದಲ್ಲಿಯೇ ಇವೆ. ಎರಡೂ ಉದ್ಯಾನ ಮಧ್ಯದಲ್ಲಿ ಪಶ್ಚಿಮದಿಂದ ಪೂರ್ವದ ಕಡೆಗೆ ಹರಿಯುವ ನಾಲೆಗೆ ಸಿಮೆಂಟ್‌ ಗೋಡೆ ನಿರ್ಮಿಸಲಾಗಿದೆ.

ಕೊಳಚೆ ನೀರು ನಿಲ್ಲಬಾರದು, ದುರ್ವಾಸನೆ ಬೀರಬಾರದು, ಮಾಲಿನ್ಯಕ್ಕೆ ಅವಕಾಶ ಆಗಬಾರದು ಎಂಬ ಕಾರಣದಿಂದ ನೀರು ಸರಾಗವಾಗಿ ಹರಿದು ಹೋಗಲು ನಾಲೆ ಕಟ್ಟಲಾಗಿದೆ. ಆದರೆ ಇದರಿಂದ ಪ್ರಯೋಜನ ಆದಂತಿಲ್ಲ. ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ದುರ್ವಾಸನೆ ತಪ್ಪಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದರೂ ಉದ್ಯಾನದ ವಾತಾವರಣ ಸುಧಾರಿಸುವ ಕಾರ್ಯವಾಗಿಲ್ಲ.

ಈಗ ಗಾಂಧಿ ಉದ್ಯಾನದ ಆಗ್ನೇಯ ಭಾಗದಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದೆ. ಉದ್ಯಾನದಲ್ಲಿ ಕೊಳಚೆ ನೀರಿನ ನಾಲೆ ಇದೆ. ಪೂರ್ವ ಭಾಗದಲ್ಲಿ ಉತ್ತರದಿಂದ ದಕ್ಷಿಣದ ಕಡೆಗೆ ಹರಿದು ಮುಖ್ಯ ಕೊಳಚೆ ನಾಲೆಗೆ ಸೇರುವ ಇನ್ನೊಂದು ನಾಲೆ ಇದೆ. ಅದರ ಪಕ್ಕದ ಪೂರ್ವಭಾಗದಲ್ಲಿ ಮನೆಗಳಿವೆ.

ಈಗಾಗಲೇ ಈ ನಾಲೆಗಳ ಕೊಳಚೆ ನೀರಿನ ದುರ್ವಾಸನೆಯಿಂದ ಹಾಗೂ ಮಳೆಗಾಲದಲ್ಲಿ ನಾಲೆಯ ನೀರು ವಸತಿ ಪ್ರದೇಶಕ್ಕೆ ನುಗ್ಗುವುದರಿಂದ ಸಾರ್ವ ಜನಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಇದೀಗ, ಶೌಚಾಲಯ ನಿರ್ಮಿಸಿ ನೆಮ್ಮದಿ ಹಾಳು ಮಾಡುವುದು ಸರಿಯಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಹಲವು ಬಾರಿ ದೂರು ನೀಡಿದರೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಇತ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ.

ಜನವಸತಿ ಪ್ರದೇಶದಲ್ಲಿ ನಿರ್ಮಾಣ
‘ಕಳೆದ ವರ್ಷ ಮಳೆಗಾಲದಲ್ಲಿ ಈ ವಸತಿಗೃಹಗಳಿಗೆ ಎರಡೂ ನಾಲೆ ಗಳಿಂದ ಕೊಳಚೆ ನೀರು ನುಗ್ಗಿತ್ತು. ಆಗ ಮಹಾನಗರ ಪಾಲಿಕೆ ಎಂಜಿನಿಯರ್‌ ಕರೆಸಿ, ಪರಿಸ್ಥಿತಿಯನ್ನು ತೋರಿಸಿ ಮನವರಿಕೆ ಮಾಡಲಾಗಿತ್ತು. ಸಮಸ್ಯೆಗೆ ಪರಿಹಾರ ನೀಡಲಿಲ್ಲ. ಆಗ ಎಂಜಿನಿ ಯರ್‌ಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು.

ಈಗ ಉದ್ಯಾನದ ಪಕ್ಕದ ಜನರಿಗೆ ಅಡಚಣೆ ಮಾಡುವ ಉದ್ದೇಶದಿಂದಲೇ ಶೌಚಾಲಯ ನಿರ್ಮಿಸಲಾಗುತ್ತಿದೆ. ಈಗಾಗಲೇ ನಾಲೆಯ ದುರ್ವಾಸನೆ ಯಿಂದ ನೆಮ್ಮದಿ ಕಳೆದುಕೊಂಡಿ ದ್ದೇವೆ’ ಎಂದು ನಿವಾಸಿ ದೀಪಾಲಿ ದೇಶಪಾಂಡೆ ದೂರಿದರು.

ಶಿವಾಜಿ ಉದ್ಯಾನದ ‘ಶಿವ ಸೃಷ್ಟಿ’ (ಶಿವಾಜಿ ಜೀವನಚರಿತ್ರೆ ಬಿಂಬಿಸುವ) ಪಕ್ಕದಲ್ಲಿ ನಿರ್ಮಿಸಲಾಗಿರುವ ವ್ಯಾಯಾಮ,  ಯೋಗ ವೇದಿಕೆಯ ಬಳಿ ಈ ಶೌಚಾಲಯ ನಿರ್ಮಾಣ ಆಗಬೇಕಿತ್ತು. ಆದರೆ ಮಹಾನಗರ ಪಾಲಿಕೆಯ ಅಧಿಕಾರಿಗಳ ಬೇಜವಾ ಬ್ದಾರಿಯಿಂದ ಜನವಸತಿ ಇರುವ ಕಡೆ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.