ADVERTISEMENT

ಕನ್ನಡಕ್ಕೆ ರಾಷ್ಟ್ರಭಾಷೆ ಸ್ಥಾನಮಾನಕ್ಕೆ ಒತ್ತಾಯ

ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದಿಂದ ಜಿಲ್ಲಾ ಮಟ್ಟದ ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 6:05 IST
Last Updated 30 ಜನವರಿ 2017, 6:05 IST
ಕನ್ನಡಕ್ಕೆ ರಾಷ್ಟ್ರಭಾಷೆ ಸ್ಥಾನಮಾನಕ್ಕೆ ಒತ್ತಾಯ
ಕನ್ನಡಕ್ಕೆ ರಾಷ್ಟ್ರಭಾಷೆ ಸ್ಥಾನಮಾನಕ್ಕೆ ಒತ್ತಾಯ   
ಬೆಳಗಾವಿ: ರಾಷ್ಟ್ರ ಭಾಷೆ ಹಿಂದಿಗೆ ನೀಡುವ ಸ್ಥಾನಮಾನವನ್ನು ಕನ್ನಡ ಭಾಷೆಗೂ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಕನ್ನಡಿಗರು ಒಗ್ಗಟ್ಟಾಗಿ ಧ್ವನಿ ಎತ್ತಬೇಕಾಗಿದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು. 
 
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನವು ಭಾನುವಾರ ನಗರದ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಭಾ ಭವನದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. 
 
ಶತಶತಮಾನಗಳ ಇತಿಹಾಸ ಇರುವ ಕನ್ನಡ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದ ಅವರು, ಇದಕ್ಕೆ ಎಲ್ಲ ಕನ್ನಡಿಗರ ಒಕ್ಕೊರಲಿನ  ಧ್ವನಿ ಅಗತ್ಯವಾಗಿದೆ ಎಂದರು.
 
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸ­ಬೇಕು. ಅದಕ್ಕೆ ಕನ್ನಡಿಗರು, ಜನಪ್ರತಿ­ನಿಧಿಗಳು ಹೆಚ್ಚಿನ ಆಸಕ್ತಿ ತೋರಬೇಕಾಗಿದೆ ಎಂದರು. 
 
ಕನ್ನಡ ನಾಡಿನಲ್ಲಿ ಕನ್ನಡಕ್ಕೇ ಅವಮಾನ ಆಗುತ್ತಿರುವುದನ್ನು ಸಹಿಸ­ಲಾಗದು ಎಂದ ಅವರು, ಕನ್ನಡದಲ್ಲಿ ಬರೆದ ಚೆಕ್‌ನ್ನು ಬೆಳಗಾವಿಯಲ್ಲಿ ಬ್ಯಾಂಕ್‌ನವರು ತಿರಸ್ಕರಿಸಿದ ಪ್ರಕರಣ ಅತ್ಯಂತ ದುರದೃಷ್ಟಕರ ಎಂದು ಅವರು ಖಂಡಿಸಿದರು. 
 
ಕನ್ನಡಿಗರ ಆಶಯಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ­ಗಳು ಸರ್ಕಾರದ ಗಮನಕ್ಕೆ ತರಬೇಕು ಎಂದು ಹೇಳಿದರು.
 
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂಜುಮನ್‌ ಕಾಲೇಜಿನ ಪ್ರಾಚಾರ್ಯ ಡಾ. ಎಚ್‌.ಐ. ತಿಮ್ಮಾಪೂರ, ಕಾವ್ಯವನ್ನು ಸಾಹಿತ್ಯದ ಮಾದರಿಯಲ್ಲಿ ಬರೆಯ­ಬಾರದು, ಚುಟುಕಾದ ಕಾವ್ಯವು ಹೇಳ­ಬೇಕಾದ ವಿಷಯದ ಪೂರ್ಣತೆ­ಯನ್ನು ಹೊಂದಿರಬೇಕು, ಅಂಥ ಕಾವ್ಯ ರಚಿಸಲು ಸತತ ಪ್ರಯತ್ನಪಡಬೇಕು ಎಂದು ಹೇಳಿದರು. 
 
ಉದಯೋನ್ಮುಖ ಕವಿಗಳ ಕಾವ್ಯ­ಗಳನ್ನು ವಿಮರ್ಶೆ ಮಾಡುವಾಗ ಹಳೆಯ ಪದ್ಧತಿಯಲ್ಲಿಯೇ ಆಯ್ಕೆ ಮಾಡು­ವುದು ಸರಿಯಲ್ಲ, ವಿಮರ್ಶೆ ಪದ್ಧತಿಗೂ ಹೊಸ ರೂಪ ಸಿಕ್ಕರೆ ಮಾತ್ರ ಇಂಥ ಕವಿಗಳ ಆಶಯ ಅರ್ಥವಾದೀತು ಎಂದರು. 
 
ಹಿರಿಯ ಪತ್ರಕರ್ತ ಎಲ್‌. ಎಸ್‌. ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಚ್‌.ಬಿ. ಕೋಲಕಾರ, ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಾಹಿತಿ ಜ್ಯೋತಿ ಬಾದಾಮಿ ವೇದಿಕೆಯಲ್ಲಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.