ADVERTISEMENT

ಕೂಲಿಕಾರನ ಮಗನ ಅಮೋಘ ಸಾಧನೆ

​ಪ್ರಜಾವಾಣಿ ವಾರ್ತೆ
Published 14 ಮೇ 2017, 9:52 IST
Last Updated 14 ಮೇ 2017, 9:52 IST
ಬೈಲಹೊಂಗಲ ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ತನ್ನ ತಾಯಿ, ತಂದೆಯೊಂದಿಗೆ ಹಣಮಂತ ಕರಿಗಾರ.
ಬೈಲಹೊಂಗಲ ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ತನ್ನ ತಾಯಿ, ತಂದೆಯೊಂದಿಗೆ ಹಣಮಂತ ಕರಿಗಾರ.   

ಬೈಲಹೊಂಗಲ: ‘ಸಾಹೇಬ್ರ ನಾವು ದಿನಾಲು ಕೂಲಿ-ನಾಲಿ ಮಾಡಿ ನಮ್ಮ ಜೀವನಾ ಸಾಗಿಸಬೇಕ್ರಿ. ನಮ್ಮ ಕುಟುಂಬ ದಾಗ ಶಾಲೆ ಕಲಿತು ಹೆಚ್ಚಿನ ಸಾಧನೆ ಮಾಡಿದವರು ಯಾರೂ ಇಲ್ರೀ, ಈಗ ನಮ್ಮ ಮಗಾ ಪಿಯುಸಿಯಲ್ಲಿ ಸಾಧನೆ ಮಾಡಿರುವುದು ನಮ್ಗ ಬಾಳ ಖುಷಿ ಕೊಟ್ಟೈತ್ರೀ...’

ಇದು ಮತ್ತೊಬ್ಬರ ಜಮೀನಿನಲ್ಲಿ ನಿತ್ಯ ದುಡಿದು ಜೀವನ ಸಾಗಿಸುವ ಭೀಮಣ್ಣ ಕರಿಗಾರ ಅವರ ಮಾತುಗಳು. ಮಗ ಹನುಮಂತ ಕರಿಗಾರ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ 566 ಅಂಕ (ಶೇ 96) ಗಳಿಸಿರುವ ಬಗ್ಗೆ ತಂದೆ ಭೀಮಣ್ಣ ಅವರ ಪ್ರತಿಕ್ರಿಯೆ.

ತಾಲ್ಲೂಕಿನ ದೇವಲಾಪುರ ಗ್ರಾಮದ ಹನಮಂತ ಕರಿಗಾರ ವಿಜ್ಞಾನ ವಿಭಾಗದಲ್ಲಿ ಬೈಲಹೊಂಗಲ ಪಟ್ಟಣದ ಸರ್ಕಾರಿ ಪಿ.ಯು. ಕಾಲೇಜಿನಲ್ಲಿ ಕಲಿತು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ADVERTISEMENT

ತಂದೆ, ತಾಯಿ ಕಡು ಬಡತನದಲ್ಲಿ ಬೆಂದು ಕೂಲಿ ಮಾಡಿ ಜೀವನ ಸಾಗಿಸುತ್ತಾರೆ. ಅಂಥವರ ಮಗನಾಗಿ ಹುಟ್ಟಿದ ಹನುಮಂತ ಕರಿಗಾರ ದೇವಲಾಪುರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿದ್ದರು.ಯಾವುದೇ ಟ್ಯೂಶನ್, ತರಬೇತಿಯ ಬೆನ್ನು ಬೀಳದೆ, ಮನೆಯಲ್ಲಿಯೇ ಕುಳಿತು ಸತತ ಅಧ್ಯಯನ ಮಾಡಿದ್ದಾರೆ.

ಹನುಮಂತ ಅವರಿಗೆ ಭೌತ ವಿಜ್ಞಾನ ದಲ್ಲಿ 96, ರಸಾಯನ ವಿಜ್ಞಾನದಲ್ಲಿ 98, ಗಣಿತದಲ್ಲಿ 99, ಜೀವ ವಿಜ್ಞಾನದಲ್ಲಿ 98, ಕನ್ನಡದಲ್ಲಿ 95, ಇಂಗ್ಲಿಷ್‌ನಲ್ಲಿ 80 ಅಂಕಗಳು ಲಭಿಸಿವೆ. ವಿದ್ಯಾಭ್ಯಾಸದ ಮಧ್ಯೆ ಪಾಲಕರ ಕೆಲಸ ಕಾರ್ಯಗಳಿಗೂ ನೆರವಾಗಿದ್ದಾರೆ. ಹನಮಂತ ಅವರ ಸಾಧನೆಯಿಂದಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ದುಡಿಮೆ ನಂಬಿ ಬದುಕಿರುವೆ: ‘ಹೊಲಕ್ಕೆ ಕೆಲಸಕ್ಕೆ ಹೋಗಿದ್ದಾಗ ಮಗ ಶೇ 96ರಷ್ಟು ಅಂಕಗಳನ್ನು ಗಳಿಸಿ ಪಾಸಾಗಿದ್ದಾನೆಂದು ಜಮೀನಿಗೆ ಬಂದು ಗ್ರಾಮಸ್ಥರೊಬ್ಬರು ಹೇಳಿದಾಗ ನನ್ನ ಖುಷಿಗೆ ಪಾರವೇ ಇರಲಿಲ್ಲ. ಅಲ್ಲಿದ್ದವರೂ ಖುಷಿ ಪಟ್ಟರು. ಮಗ ಹೆಚ್ಚು ಓದಲು ಆಸಕ್ತಿ ವ್ಯಕ್ತಪಡಿ ಸಿದ್ದಾನೆ. ದುಡಿಮೆಯೇ ನಂಬಿ ಬದುಕಿ ರುವರು ನಾವು. ನನ್ನ ಮಗ ಎಲ್ಲಿಯ ವರೆಗೂ ಕಲಿಯುತ್ತಾನೆ ಅಲ್ಲಿಯವರೆಗೆ ಕಲಿಸುತ್ತೇನೆ ಎಂದು ಭೀಮಣ್ಣ ಕರಿಗಾರ ‘ಪ್ರಜಾವಾಣಿ’ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.