ADVERTISEMENT

‘ಕೇಂದ್ರದ ಯೋಜನೆಗೆ ರಾಜ್ಯದ ನಿರಾಸಕ್ತಿ’

ರಾಜ್ಯ ರೈಲ್ವೆ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕುತುಬುದ್ದೀನ್‌ ಆರೋಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 11:16 IST
Last Updated 10 ಜುಲೈ 2017, 11:16 IST

ರಾಯಬಾಗ: ‘ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ನಿರಾಸಕ್ತಿ ತೋರುತ್ತಿದೆ. ಕುಡಚಿ–ಬಾಗಲಕೋಟ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಹಸಿರು ನಿಶಾನೆ ತೋರಿ ಹಲವು ವರ್ಷಗಳು ಕಳೆದರೂ ಇನ್ನು ಯೋಜನೆ ಪೂರ್ಣಗೊಂಡಿಲ್ಲ. 

ಯೋಜನೆಗೆ ಭೂಮಿ ವಶಪಡಿಸಿಕೊಳ್ಳುವಲ್ಲಿ ವಿಳಂಬ ಮಾಡುತ್ತಿರುವ ಜಮಖಂಡಿ ಹಾಗೂ ಚಿಕ್ಕೋಡಿ ಭೂಸ್ವಾಧೀನ ಅಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ’ ಎಂದು ರಾಜ್ಯ ರೈಲ್ವೆ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕುತುಬುದ್ದೀನ್‌ ಖಾಜಿ ಎಚ್ಚರಿಕೆ ನೀಡಿದರು.

ಕುಡಚಿ–ಬಾಗಲಕೋಟ ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ 2010ರಲ್ಲಿ ತಾಲ್ಲೂಕಿನ ಕುಡಚಿಯಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ರೈಲ್ವೆ ಇಲಾಖೆಯು ಕುತುಬ್ಬುದ್ದೀನ್‌ ಸೇರಿ 21 ಜನರ ಮೇಲೆ ರಾಯಬಾಗ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು. ನ್ಯಾಯಾಲಯದಿಂದ ಹೊರಬಂದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ADVERTISEMENT

‘ಅಂದು ₹ 816 ಕೋಟಿ ವೆಚ್ಚ ವೆಚ್ಚದಲ್ಲಿ ಮುಗಿಯಬೇಕಿದ್ದ ಕಾಮಗಾರಿ ವಿಳಂಬವಾಗಿದ್ದರಿಂದ ವೆಚ್ಚ ಈಗ ₹ 15ರಿಂದ 16 ಸಾವಿರ ಕೋಟಿಗೆ ಏರಿದೆ.  ಪ್ರತಿ ಕಿ.ಮೀ. ರೈಲು ಮಾರ್ಗಕ್ಕೆ 10 ಎಕರೆ ಭೂಮಿಬೇಕು. ಜಮಖಂಡಿ  ಹಾಗೂ ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ತಮ್ಮ ಪ್ರದೇಶದಲ್ಲಿನ ಭೂಮಿ ರೈಲು ಮಾರ್ಗಕ್ಕೆ ಸ್ವಾಧೀನ ಪಡಿಸಿಕೊಳ್ಳಲು ವಿಳಂಬ ಮಾಡುತ್ತಿದ್ದಾರೆ’ ಎಂದರು.

‘ಜಮಖಂಡಿ ಉಪವಿಭಾಗಾಧಿಕಾರಿಗಳು  800 ಹಾಗೂ ಚಿಕ್ಕೋಡಿ ಉಪವಿಭಾಗಾಧಿಕಾರಿಗಳು 400 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಆದರೆ ರೈತರಿಗೆ ಕೊಡಬೇಕಾದ ಪರಿಹಾರದ ಹಣ ಸರ್ಕಾರ ನೀಡಿಲ್ಲ. ನಮ್ಮ ಹೋರಾಟ ಸಮಿತಿಯ ಸದಸ್ಯೆ ಉಮಾಶ್ರೀ ಸಚಿವೆಯಾದರೂ ಯೋಜನೆಗೆ ಹಣದ ಕೊರತೆಯಿದೆ ಎಂದು ಸುಳ್ಳು ಹೇಳುತ್ತಿದ್ದಾರೆ’ ಎಂದು ದೂರಿದರು.

‘ಬಾಗಲಕೋಟಿಯಿಂದ 40 ಕಿ.ಮೀ. ರೈಲ್ವೆ ಮಾರ್ಗ ಪೂರ್ಣಗೊಂಡು ಖಜ್ಜಿಡೋನಿವರೆಗೆ ಐದು ನಿಲ್ದಾಣಗಳು ನಿರ್ಮಾಣವಾಗಿವೆ.  ಇವುಗಳತ್ತ ಯಾರೂ ಗಮನ ಹರಿಸಿಲ್ಲ. ಮುಂದಾದರೂ ಯೋಜನೆಯನ್ನು ಬೇಗನೆ ಕಾರ್ಯಗತಗೊಳಿಸಬೇಕು’ ಎಂದು ಕುತುಬ್ಬುದ್ದೀನ್‌ ಆಗ್ರಹಿಸಿದರು.

ಹೋರಾಟ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ ಮಾತನಾಡಿದರು.  ಹೋರಾಟ ಸಮಿತಿ ಕಾರ್ಯದರ್ಶಿಬಿ. ಜಿ.ಪೂಜಾರಿ, ನಾರಾಯಣಸಾ ಪವಾರ, ದಯಾನಂ,ದ ಬಿಜ್ಜರಗಿ, ಸುರೇಶ ಚಂಡಕ,ಶಬ್ಬೀರ ಪಾಲೇಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.