ADVERTISEMENT

ಕ್ರಿಕೆಟಿಗರೊಂದಿಗೆ ಗ್ರಾಹಕರ ಸೆಲ್ಫಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 4:53 IST
Last Updated 16 ಸೆಪ್ಟೆಂಬರ್ 2017, 4:53 IST
ಬೆಳಗಾವಿಯಲ್ಲಿ ಕೆನರಾ ಬ್ಯಾಂಕ್‌ನಿಂದ ಶುಕ್ರವಾರ ಆಯೋಜಿಸಿದ್ದ ‘ಕ್ರಿಕೆಟಿರೊಂದಿಗೆ ಫೋಟೋ ತೆಗೆದುಕೊಳ್ಳಿ’ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ ಗ್ರಾಹಕರೊಬ್ಬರಿಗೆ ತಮ್ಮ ಸಹಿಯುಳ್ಳ ಚಿಕ್ಕಬ್ಯಾಟ್‌ ವಿತರಿಸಿದರು
ಬೆಳಗಾವಿಯಲ್ಲಿ ಕೆನರಾ ಬ್ಯಾಂಕ್‌ನಿಂದ ಶುಕ್ರವಾರ ಆಯೋಜಿಸಿದ್ದ ‘ಕ್ರಿಕೆಟಿರೊಂದಿಗೆ ಫೋಟೋ ತೆಗೆದುಕೊಳ್ಳಿ’ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ ಗ್ರಾಹಕರೊಬ್ಬರಿಗೆ ತಮ್ಮ ಸಹಿಯುಳ್ಳ ಚಿಕ್ಕಬ್ಯಾಟ್‌ ವಿತರಿಸಿದರು   

ಬೆಳಗಾವಿ: ಇಲ್ಲಿನ ಕೆನರಾ ಬ್ಯಾಂಕ್‌ ಪ್ರಾದೇಶಿಕ ಕಚೇರಿಯು ತನ್ನ ಆಯ್ದ ಗ್ರಾಹಕರಿಗೆ ಕ್ರಿಕೆಟಿಗರೊಂದಿಗೆ ಫೋಟೋ ತೆಗೆದುಕೊಳ್ಳುವ ಅವಕಾಶವನ್ನು ಶುಕ್ರವಾರ ಒದಗಿಸಿತು.
ಕೃಷ್ಣದೇವರಾಯ ವೃತ್ತದಲ್ಲಿರುವ ಸಾಯಿ ಸಂಗಮ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಹಕರು ಮಾಜಿ ಕ್ರಿಕೆಟಿಗರಾದ ವೆಂಕಟೇಶ್‌ ಪ್ರಸಾದ್‌ ಹಾಗೂ ಶ್ರೀನಿವಾಸ ಮೂರ್ತಿ ಜತೆ ಫೋಟೋ ತೆಗೆಸಿಕೊಂಡು, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಬ್ಯಾಂಕ್‌ ನಿಗದಿಪಡಿಸಿದ, ಇಂತಿಷ್ಟು ಹಣಕಾಸಿನ ವ್ಯವಹಾರ ನಡೆಸಿದ 30ಕ್ಕೂ ಹೆಚ್ಚಿನ ಗ್ರಾಹಕರು ನೆಚ್ಚಿನ ಕ್ರಿಕೆಟ್‌್ ತಾರೆಯರೊಂದಿಗೆ ಕೆಲ ಕ್ಷಣಗಳನ್ನು ಕಳೆದರು. ನೆನಪಿನ ಕಾಣಿಕೆಯಾಗಿ ವೆಂಕಟೇಶ್‌ಪ್ರಸಾದ್‌ ಸಹಿಯುಳ್ಳ ಚಿಕ್ಕ ಬ್ಯಾಟ್‌ ಕೂಡ ಪಡೆದರು.

‘ಕ್ರಿಕೆಟ್‌ನಲ್ಲಿ ನಾನು ಏನೇ ಅತ್ಯುತ್ತಮ ಸಾಧನೆ ಮಾಡಿದ್ದರೂ, ಪ್ರದರ್ಶನ ತೋರಿದ್ದರೂ ಅದು ಕೆನರಾ ಬ್ಯಾಂಕ್‌ಗೆ ಸೇರಿದ ನಂತರವೇ ಆಗಿದೆ. ಬ್ಯಾಂಕ್‌ನಿಂದ ನೀಡಿದ ಸಹಕಾರವೇ ಅದಕ್ಕೆ ಕಾರಣ’ ಎಂದು ವೆಂಕಟೇಶ್‌ ಹೇಳಿದರು.

ADVERTISEMENT

ಪ್ರೋತ್ಸಾಹ ದೊಡ್ಡದು: ‘1996ರಲ್ಲಿ ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನದಲ್ಲಿ 5 ವಿಕೆಟ್‌ ಪಡೆದುಕೊಂಡೆ. ಅಲ್ಲಿ ಐದು ವಿಕೆಟ್‌ ಪಡೆದವರು ಅಥವಾ 100 ರನ್‌ ಗಳಿಸಿದವರ ಹೆಸರನ್ನು ಗೌರವಾರ್ಥವಾಗಿ ಬೋರ್ಡ್‌ನಲ್ಲಿ ಹಾಕುತ್ತಾರೆ. ನಾನು ಇಲ್ಲದಿದ್ದರೂ ನನ್ನ ಹೆಸರು ಅಲ್ಲಿ ಶಾಶ್ವತವಾಗಿ ಇರುತ್ತದೆ. 1999ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಪಡೆದೆ. ಅರ್ಜುನ ಪ್ರಶಸ್ತಿಯೂ ದೊರೆಯಿತು. ಒಮ್ಮೆ ‘ಅಂತರರಾಷ್ಟ್ರೀಯ ವರ್ಷದ ಕ್ರಿಕೆಟಿಗ’ ಗೌರವವೂ ಸಿಕ್ಕಿದೆ. ಇದಕ್ಕೆಲ್ಲ ಕೆನರಾಬ್ಯಾಂಕ್‌ನ ಪ್ರೋತ್ಸಾಹ ದೊಡ್ಡದಿದೆ’ ಎಂದು ತಿಳಿಸಿದರು.

‘ಕ್ರೀಡಾಪಟುಗಳಿಗೆ ಪ್ರೇಕ್ಷಕರ ಪ್ರೋತ್ಸಾಹ ಎಷ್ಟು ಮುಖ್ಯವೋ ಅಂತೆಯೇ ಬ್ಯಾಂಕ್‌ಗಳಿಗೆ ಗ್ರಾಹಕರ ಸಹಕಾರ ಮಹತ್ವದ್ದಾಗಿದೆ’ ಎಂದು ಅಭಿಪ್ರಾಯಪಟ್ಟರು. ಮಾಜಿ ಕ್ರಿಕೆಟಿಗರೂ ಆದ ಕೆನರಾ ಬ್ಯಾಂಕ್‌ ಕ್ರೀಡಾ ಘಟಕ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ, ಕೆನರಾ ಎಚ್‌ಎಸ್‌ ಬಿಸಿ ವ್ಯವಹಾರ ಅಭಿವೃದ್ಧಿ ವಿಭಾಗ ಮುಖ್ಯಸ್ಥ ಜಾರ್ಜ್‌ ಜೇಕಬ್‌ ಇದ್ದರು.

* * 

ನಾನು ಕನ್ನಡಿಗ, ಕರ್ನಾಟಕದವನು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಪಡುತ್ತೇನೆ
ವೆಂಕಟೇಶಪ್ರಸಾದ್‌
ಮಾಜಿ ಕ್ರಿಕೆಟಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.