ADVERTISEMENT

ಗ್ರಾಮೀಣ ಸೊಗಡಿನ ಗೀತೆಗಳಿಗೆ ತಲೆದೂಗಿದ ಪ್ರೇಕ್ಷಕರು

ಕೃಷಿ ಮೇಳದಲ್ಲಿ ಸಾಂಸ್ಕೃತಿಕ ವೈಭವದ ಮಿಂಚು

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 10:01 IST
Last Updated 28 ಜನವರಿ 2017, 10:01 IST
ಗ್ರಾಮೀಣ ಸೊಗಡಿನ ಗೀತೆಗಳಿಗೆ ತಲೆದೂಗಿದ ಪ್ರೇಕ್ಷಕರು
ಗ್ರಾಮೀಣ ಸೊಗಡಿನ ಗೀತೆಗಳಿಗೆ ತಲೆದೂಗಿದ ಪ್ರೇಕ್ಷಕರು   

ಬೈಲಹೊಂಗಲ: ಸಮಾಜದಲ್ಲಿ ರೂಢಿಯಲ್ಲಿರುವ ಅನಿಷ್ಟ ಪದ್ಧತಿಗಳಾದ ಬಾಲ್ಯವಿವಾಹ, ಭ್ರೂಣ ಹತ್ಯೆ, ವರದಕ್ಷಿಣೆ ಕುರಿತಾದ ನಾಟಕಗಳು, ನಗೆಹಬ್ಬ, ಭಾವಗೀತೆ, ದಾಂಡಿಯಾ, ಭಜನೆ, ಕೋಲಾಟ, ಮಲ್ಲಕಂಬ, ಜಾನಪದ ಗೀತೆ, ಭಕ್ತಿ ಗೀತೆಗಳು ಕೇಳುಗರ ಹೃದಯಭಾರ ಹಗುರ ಮಾಡಿದವು.

ರಾಜ್ಯ ಮಟ್ಟದ 37ನೇ ಕೃಷಿಮೇಳದಲ್ಲಿ ಗುರುವಾರ ಸಂಜೆ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜನಮನ್ನಣೆ ಪಡೆಯಿತು. ಪ್ರೇಕ್ಷಕ ಗ್ಯಾಲರಿಯಲ್ಲಿ ಕುಳಿತು ಸಾಂಸ್ಕೃತಿಕ ವೈಭವ ಕಣ್ತುಂಬಿಕೊಂಡ ಅಸಂಖ್ಯಾತ ಸಾರ್ವಜನಿಕರು ಸಿಳ್ಳೆ, ಚಪ್ಪಾಳೆ ತಟ್ಟಿ ಕಲೆ, ಕಲಾವಿದರನ್ನು ಹುರಿದುಂಬಿಸಿದರು. ಎಸ್‌ಡಿಎಂ ಸಂಸ್ಥೆಯ ವಿವಿಧ ವಿಭಾಗಗಳ ಶಾಲೆ, ಕಾಲೇಜು ವಿದ್ಯಾರ್ಥಿಗಳ ನೃತ್ಯ, ನಾಟಕಗಳು ನೋಡುಗರ ಮೈಮನ ರೋಮಾಂಚನಗೊಳಿಸಿದವು.

ಹಚ್ಚೇವು ಕನ್ನಡದ ದೀಪ, ಗೀಗೀ ಪದ, ಜೈ ಜವಾನ್ ಜೈ ಕಿಸಾನ್ ಮತ್ತು ರಂಗ್ ದೇ ಬಸಂತಿ, ಹೆಣ್ಣು ಮಗು ಉಳಿಸಿ ಕಿರು ನಾಟಕ, ಕೋಲಾಟ, ಜಾಂಜ್ ಕುಣಿತ, ಘಲ್ಲು ಘಲ್ಲೆನ್ನುತಾ... ಗೆಜ್ಜೆ ಹಾಡು, ಇತರೆ ವೈವಿಧ್ಯಮಯ ಸಾಂಸ್ಕೃತಿಕ ರಸದೌತಣ ಕಾರ್ಯಕ್ರಮ ನೋಡುಗರ ಹುಬ್ಬೇರುವಂತೆ ಮಾಡಿದವು.

ಕಲಾವಿದೆ ಲಕ್ಷ್ಮೀ ಬೋರಕ್ಕನವರ, ನೇತ್ರಾ ಯರಗಟ್ಟಿ ಶಿವನ ನೃತ್ಯಕ್ಕೆ ಹೆಜ್ಜೆ ಹಾಕಿದರು. ಕೆಆರ್‌ಸಿ ಆಂಗ್ಲಮಾಧ್ಯಮ ಶಾಲೆಯ ಹಿರಣ್ಯ ಕಶ್ಯಪ ಅಭನಯ, ನೃತ್ಯ, ಗಣಾಚಾರಿ ಕಾಲೇಜು ವಿದ್ಯಾರ್ಥಿಗಳ ಮಲ್ಲಕಂಬ, ಕಮಲಾ ಸೋಮನ್ನವರ ಸಂಗಡಿಗರ ಕೋಲಾಟ, ದಾವಣಗೆರೆ ಚಿಂದೋಡಿ ಲೀಲಾ ಕಂಪನಿಯ ನಾಟಕ, ವಕ್ಕುಂದ ಭಾರತಿ ಧವಳೆ ಸಂಗಡಿಗರ ದಾಂಡಿಯಾ, ಎಲ್‌ಎಚ್‌ಸಿ ಇಂಗ್ಲಿಷ್ ಮಾಧ್ಯಮ ಶಾಲೆಯ ಸ್ವಚ್ಛ ಭಾರತ ನಾಟಕ, ಬಾಪೂಜಿ ಕಾಲೇಜಿನ ಮಲೆಯಾಳಿ ನೃತ್ಯ, ನಾಗನೂರ ಚಂದ್ರಶೇಖರ ಕೊಪ್ಪದ ಭಜನಾ ಮಂಡಳದ ಹಂತಿಪದ, ವಕ್ಕುಂದ ಸಿದ್ದಾರೂಢ ಭಜನಾ ಮಂಡಳದ ಭಜನೆ ನೋಡುಗರನ್ನು ಸೆಳೆದವು. ಮಧ್ಯರಾತ್ರಿ ಯವರೆಗೆ ಕಿಕ್ಕಿರಿದು ತುಂಬಿದ ಜನತೆಗೆ ಮನರಂಜನೆಯ ರಸದೌತಣ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.