ADVERTISEMENT

ಗ್ರಾಮೀಣ ಸೊಬಗು; ಸಂಸ್ಕೃತಿಯ ಸೊಗಡು

ಐ.ಬಿ. ಗಣಾಚಾರಿ ಪಿಯು ಕಾಲೇಜಿನಲ್ಲಿ ಸೀರೆ ದಿನಾಚರಣೆ; ರಂಗು ರಂಗಿನ ಸೀರೆಯುಟ್ಟು ಗಮನ ಸೆಳೆದ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 10:38 IST
Last Updated 5 ಜನವರಿ 2017, 10:38 IST

ಬೈಲಹೊಂಗಲ: ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಈರಮ್ಮ ಬಸಪ್ಪ ಗಣಾಚಾರಿ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯ ಬುಧವಾರ ಅಕ್ಷರಶಃ ವರ್ಣರಂಜಿತವಾಗಿತ್ತು. ಪ್ರತಿವರ್ಷದಂತೆ ಈ ವರ್ಷ ಆಚರಿಸಿದ ಸಾರಿ ಡೇಯಲ್ಲಿ ಒಂದು ಸಾವಿರ ವಿದ್ಯಾರ್ಥಿನಿಯರು ಉತ್ಸಾಹದಿಂದ ರಂಗು ರಂಗಿನ ಸೀರೆ ಧರಿಸುವ ಮೂಲಕ ಎಲ್ಲರ ಗಮನ ಸೆಳೆದರು.

ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿಗೆ, ರಾಯಣ್ಣ ವೃತ್ತಕ್ಕೆ ತೆರಳಿ ಶ್ರದ್ದೆ, ಭಕ್ತಿಯಿಂದ ಪುಷ್ಪನಮನ ಸಲ್ಲಿಸಿದರು. ಮದುಮಕ್ಕಳಂತೆ ಸಿಂಗಾರಗೊಂಡಿದ್ದ ವಿದ್ಯಾರ್ಥಿನಿಯರು ತಲೆ ತುಂಬ ಹೂವು, ಸೀರೆ, ಕುಪ್ಪಸ್ಸ, ಕೈ ತುಂಬ ಬಳೆಗಳು, ಕಾಲಲ್ಲಿ ಕಾಲ್ಗೆಜ್ಜೆ ಗಳನ್ನು ಕಟ್ಟಿಕೊಂಡು ಭಾರತೀಯ ಸಂಸ್ಕಾರ, ಸಂಸ್ಕೃತಿ, ಉಡುಗೆತೊಡುಗೆ ಬಗ್ಗೆ ಜನಜಾಗೃತಿ ಮೂಡಿಸಿದರು.

ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ನೆನಪಿಸುವ ಜೊತೆಗೆ ಉಳಿಸಿ ಬೆಳೆಸುವಂತ ಮನಸ್ಥಿತಿಯು ಇನ್ನೂ ಕೆಲವು ಯುವ ಜನಾಂಗದಲ್ಲಿ ಇದೆ ಎನ್ನುವುದಕ್ಕೆ ಗಣಾಚಾರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಸಾಕ್ಷೀಕರಿಸಿದ್ದು ಜನಮನ್ನಣೆ ಪಡೆಯಿತು.

ಪ್ರಾಚಾರ್ಯ ಡಾ.ಸಿ.ಬಿ. ಗಣಾಚಾರಿ ಮಾತನಾಡಿ, ‘ಸನಾತನ ಸಂಸ್ಕೃತಿ, ಸಂಸ್ಕಾರ, ಆಚರಣೆಗಳನ್ನು ಯಾರು ಯಾವತ್ತಿಗೂ ಮರೆಯಬಾರದು. ಭಾರತ ಪುಣ್ಯ ಭೂಮಿ. ಈ ಮಣ್ಣಿನಲ್ಲಿ ಜನಿಸಿದ ಪ್ರತಿಯೊಬ್ಬರು ಪುಣ್ಯವಂತರು. ಈ ನೆಲದ ಸಂಸ್ಕಾರ, ಸಂಸ್ಕೃತಿ, ಆಚರಣೆಗಳನ್ನು ಅನುದಿನವು ಮುನ್ನಡೆಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಸಂಸ್ಥೆಯಿಂದ ವರ್ಷ ಪದ್ಧತಿಯಂತೆ ಸಾರಿ ಡೇ ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಸಂಸ್ಕೃತಿ ಉಳಿಸಿ, ಬೆಳೆಸುವ ಕೆಲಸ ನಡೆಸುತ್ತಿರುವುದಾಗಿ’ ಅವರು ತಿಳಿಸಿದರು.

‘ಪ್ರತಿದಿನ ಕಾಲೇಜು ಸಮವಸ್ತ್ರ, ವಾರದಲ್ಲಿ ಒಂದು ದಿನ ಬಣ್ಣದ ಬಟ್ಟೆ ಧರಿಸಿಕೊಂಡು ಬರುತ್ತಿದ್ದೆವು. ಆದರೆ, ಈಗ ಸೀರೆ ಉಟ್ಟುಕೊಂಡು ಬರುವುದೆಂದರೆ ಒಂದು ರೀತಿಯ ಖುಷಿ. ಗ್ರಾಮೀಣ ಭಾಗಗಳಿಂದಲೂ ನಮ್ಮ ಕಾಲೇಜಿಗೆ ಅನೇಕ ವಿದ್ಯಾರ್ಥಿನಿಯರು ಬರುತ್ತಾರೆ. ಅವರೆಲ್ಲರೂ ಸೀರೆ ಉಟ್ಟು ಕಾಲೇಜಿಗೆ ಬಂದಿದ್ದರಿಂದ ಇಡೀ ಕಾಲೇಜು ಮದುವೆ ಮನೆಯಂತೆ ಸಿಂಗಾರಗೊಂಡಿತ್ತು’ ಎಂದು ವಿದ್ಯಾರ್ಥಿನಿಯರು ‘ಪ್ರಜಾವಾಣಿ’ಗೆ ಜೊತೆ ತಮ್ಮ ಅನುಭವ ಹಂಚಿಕೊಂಡರು. ಪುರಸಭೆ ಸದಸ್ಯೆ ಶೋಭಾ ವಾಲಿ, ಉಪನ್ಯಾಸಕಿಯರಾದ ಅರುಣಾ ಬೋಳೆತ್ತಿನ, ಪ್ರೇಮಾ ದಿನ್ನಿಮನಿ, ಸುನಿತಾ ರೊಟ್ಟಿ, ಭಾರತಿ ಪಾಟೀಲ, ನೀಲಮ್ಮಾ ರೊಡಬಸನವರ, ಸಿ.ಟಿ. ಕಲ್ಲೂರ, ದೀಪಿಕಾ ಹಲಕರಣಿ, ಈರಮ್ಮಾ ಕರೀಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.