ADVERTISEMENT

ಚಿಕ್ಕೋಡಿ ಜಿಲ್ಲೆ: ಗರಿಗೆದರಿದ ಚಟುವಟಿಕೆ

ಸುಧಾಕರ ಎಸ್.ತಳವಾರ, ಬೆಂಗಳೂರು
Published 20 ಡಿಸೆಂಬರ್ 2017, 6:31 IST
Last Updated 20 ಡಿಸೆಂಬರ್ 2017, 6:31 IST
ಚಿಕ್ಕೋಡಿಯಲ್ಲಿರುವ ಐತಿಹಾಸಿಕ ನ್ಯಾಯಾಲಯ ಕಟ್ಟಡ
ಚಿಕ್ಕೋಡಿಯಲ್ಲಿರುವ ಐತಿಹಾಸಿಕ ನ್ಯಾಯಾಲಯ ಕಟ್ಟಡ   

ಚಿಕ್ಕೋಡಿ: ಅಧಿಕಾರ ವಿಕೇಂದ್ರಿಕರಣದ ಮೂಲಕ ಗಡಿಭಾಗದ ಸಮಗ್ರ ಅಭಿವೃದ್ಧಿಯ ಸದುದ್ದೇಶದೊಂದಿಗೆ ವಿಶಾಲ ಕಾರ್ಯವ್ಯಾಪ್ತಿ ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ಎರಡು ದಶಕಗಳಿಂದಲೂ ನಡಯುತ್ತಿರುವ ನಿರಂತರ ಹೋರಾಟಕ್ಕೆ ಪ್ರತಿಫಲ ಸಿಗುವ ಕಾಲ ಸನ್ನಿಹಿತವಾಗಿದ್ದು, ಗಡಿಭಾಗದಲ್ಲಿ ಪ್ರತ್ಯೇಕ ಜಿಲ್ಲೆಯ ಕನಸು ಗರಿಗೆದರಿದೆ.

ಬೆಳಗಾವಿ ಸಹಕಾರಿ, ಶಿಕ್ಷಣ, ಕೃಷಿ ಕ್ಷೇತ್ರದಲ್ಲಿ ಹಿರಿದಾದ ಸಾಧನೆಗೈದಿರುವ ಬೆಳಗಾವಿ ಭೌಗೋಳಿಕವಾಗಿಯೂ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆ. ಎರಡು ಲೋಕಸಭೆ, 18 ವಿಧಾನಸಭೆ, ಎರಡು ವಿಧಾನಪರಿಷತ್‌ ಕ್ಷೇತ್ರಗಳೂ ಸೇರಿದಂತೆ ರಾಜಕೀಯವಾಗಿಯೂ ಬಲಾಢ್ಯವಾಗಿದೆ. ಅದಕ್ಕೆ ಕಿರೀಟವಿಟ್ಟಂತೆ ಬೆಳಗಾವಿ ಎರಡನೇ ರಾಜಧಾನಿಯಾಗಿ ಸುವರ್ಣಸೌಧವನ್ನೂ ಹೊಂದಿದೆ.

ಚಿಕ್ಕೋಡಿ ಸ್ವತಂತ್ರ ಶೈಕ್ಷಣಿಕ ಜಿಲ್ಲೆಯಾಗಿದ್ದು, ಆರೋಗ್ಯ, ಅಬಕಾರಿ, ಲೋಕೋಪಯೋಗಿ, ಕಂದಾಯ, ಪಂಚಾಯತ್ ರಾಜ್ ಇಲಾಖೆ, ಹಕಾರ ಇಲಾಖೆಯ ಉಪನಿಬಂಧಕರ ಕಚೇರಿ, ಸಾರಿಗೆ ಇಲಾಖೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿ, ಪರಿಸರ ಮತ್ತು ನೈಮರ್ಲೀಕರಣ ಮಂಡಳಿ, ಜಿಲ್ಲಾ ನ್ಯಾಯಾಲಯ ಸೇರಿದಂತೆ ಹಲವು ವಿಭಾಗೀಯ ಕಚೇರಿಗಳನ್ನೂ ಹೊಂದಿದೆ. ಆದರೂ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಜಿಲ್ಲಾ ರಚನೆ ವಿಳಂಬವಾಗುತ್ತಿದೆ ಎಂಬ ಅಸಮಾಧಾನ ಜನರಲ್ಲಿದೆ.

ADVERTISEMENT

‘ಚಿಕ್ಕೋಡಿ ಜಿಲ್ಲಾ ಕೇಂದ್ರವಾಗಬೇಕು ಎಂಬುದು ಈ ಭಾಗದ ಜನರ ಬಹುದಿನಗಳ ಕನಸು. ಈ ನಿಟ್ಟಿನಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ಕಾರ್ಯೋನ್ಮುಖರಾಗಿದ್ದು, ಉಪಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯನ್ನು ಹೊರತುಪಡಿಸಿ ಬಹುತೇಕ ಎಲ್ಲ ಜಿಲ್ಲಾ ಕಚೇರಿಗಳನ್ನು ಚಿಕ್ಕೋಡಿಗೆ ಮಂಜೂರು ಮಾಡಿಸಿದ್ದಾರೆ’ ಎಂದು ಕರ್ನಾಟಕ ದ್ರಾಕ್ಷಾರಸ ಮಹಾಮಂಡಳಿ ಅಧ್ಯಕ್ಷ ರವಿ ಮಿರ್ಜಿ ಹೇಳುತ್ತಾರೆ.

‘ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಆಗುವುದು ಅಗತ್ಯವಿದೆ. ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾದರೆ ಈ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇತ್ತೀಚೆಗೆ ಚಿಕ್ಕೋಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಎಂ.ಬಿ. ಪಾಟಿಲ, ಸಂಸದ ಪ್ರಕಾಶ ಹುಕ್ಕೇರಿ ಒತ್ತಡ ಹೇರಿದ್ದು, ಅದರ ಪರಿಣಾಮವಾಗಿ ವಿಧಾನ ಮಂಡಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕೋಡಿ ಜಿಲ್ಲೆ ರಚನೆ ಶತಸಿದ್ದ ಎಂಬ ಹೇಳಿಕೆ ನೀಡಿದ್ದು, ಇದರಿಂದಾಗಿ ಚಿಕ್ಕೋಡಿ ಜಿಲ್ಲಾ ರಚನೆ ಕುರಿತು ವಿಶ್ವಾಸ ಮೂಡಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಆರ್.ಸಂಗಪ್ಪಗೋಳ.

* * 

ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡುವುದಾಗಿ ನೀಡಿದ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ ಮುತುವರ್ಜಿ ವಹಿಸಿದ್ದಾರೆ
ರವಿ ಮಿರ್ಜಿ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.