ADVERTISEMENT

ಜನಸ್ನೇಹಿಯಾಗಿ: ಪೊಲೀಸರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 8:02 IST
Last Updated 21 ಜನವರಿ 2017, 8:02 IST
ಜನಸ್ನೇಹಿಯಾಗಿ: ಪೊಲೀಸರಿಗೆ ಸೂಚನೆ
ಜನಸ್ನೇಹಿಯಾಗಿ: ಪೊಲೀಸರಿಗೆ ಸೂಚನೆ   

ಬೆಳಗಾವಿ: ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ ಇಲ್ಲಿ ಸೂಚಿಸಿದರು. ಪೊಲೀಸ್‌ ಇಲಾಖೆ ವತಿಯಿಂದ ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರದಲ್ಲಿ ಉತ್ತರ ವಲಯಎಲ್ಲ ಜಿಲ್ಲೆಗಳು, ಬೆಳಗಾವಿ ಮತ್ತು ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರೇಟ್‌ಗಳ ವ್ಯಾಪ್ತಿಯ ಕೆಳಹಂತದ ಸಿಬ್ಬಂದಿಗೆ ಪದೋನ್ನತಿ ಆದೇಶ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕರ್ನಾಟಕ ಪೊಲೀಸ್ ಅನ್ನು ಜರ್ಮನಿ ಪೊಲೀಸ್ ವ್ಯವಸ್ಥೆ ಮಾದರಿಯಲ್ಲಿ ಜನಸ್ನೇಹಿ ಮಾಡಬೇಕು ಎನ್ನುವುದು ನನ್ನ ಆಶಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು. ಇದಕ್ಕೆ ತಕ್ಕಂತೆ ಪೊಲೀಸರು ಯಾವುದಾದರೊಂದು ವಿಭಾಗದಲ್ಲಿ ಪರಿಣತಿ ಸಾಧಿಸಬೇಕು. ಕರ್ನಾಟಕ ಪೊಲೀಸ್‌್ ಎಂದ ಕೂಡಲೇ ಇಂಥ ಸಾಧನೆಗೆ ಖ್ಯಾತಿ ಎನ್ನುವಂತಾಗಬೇಕು’ ಎಂದು ಹೇಳಿದರು.

‘ಪೊಲೀಸ್‌ ಇಲಾಖೆ ಇತಿಹಾಸದಲ್ಲಿಯೇ ಪದೋನ್ನತಿ ಸಮಾರಂಭ ಇಷ್ಟು ವರ್ಣರಂಜಿತವಾಗಿ ನಡೆದಿರಲಿಲ್ಲ. ಯಾವ ಸರ್ಕಾರವೂ ಇಷ್ಟೊಂದು ಅನುದಾನ ಕೊಟ್ಟಿರಲಿಲ್ಲ. ಸೂಕ್ಷ್ಮ ಹಾಗೂ ಅತ್ಯಂತ ಜವಾಬ್ದಾರಿ ಇಲಾಖೆಯಾದ ಪೊಲೀಸ್‌ ಇಲಾಖೆಯ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ’ ಎಂದರು.

ಸರ್ಕಾರ ಮುಖವಾಣಿ: ‘ಪೊಲೀಸ್ ಇಲಾಖೆಯು ಸರ್ಕಾರದ ಮುಖವಾಣಿಯಂತೆ. ಇಲಾಖೆ ಸರಿಯಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯವಾಗುತ್ತದೆ. ಆದ್ದರಿಂದ ಪೊಲೀಸರು ಹೊಣೆಗಾರಿಕೆ ಅರಿತುಕೊಂಡು ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಪೊಲೀಸ್ ಸಿಬ್ಬಂದಿ ಶಿಸ್ತು ಹಾಗೂ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸುವುದರ ಜತೆಗೆ ಸಮವಸ್ತ್ರದ ಘನತೆಯನ್ನೂ ಕಾಪಾಡಬೇಕು. ಸಮಾಜ ಹಾಗೂ ಸರ್ಕಾರ ಪೊಲೀಸ್ ಇಲಾಖೆ ಮೇಲೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿದ್ದು, ಇದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ಠಾಣೆಗೆ ನಿಯಮಿತವಾಗಿ ಭೇಟಿ ನೀಡಿ, ಮಾರ್ಗದರ್ಶನ ಹಾಗೂ ನಿರ್ದೇಶನ ನೀಡಬೇಕು’ ಎಂದು ಸೂಚಿಸಿದರು.

ಸಕಾಲಕ್ಕೆ ಬಡ್ತಿ :  ‘10 ವರ್ಷಕ್ಕೆ ಕಡ್ಡಾಯವಾಗಿ ಒಂದು ಬಡ್ತಿ ದೊರೆಯುವಂತೆ ಮಾಡಲಾಗಿದೆ. 15 ವರ್ಷಕ್ಕೆ ಮತ್ತೊಂದು ಬಡ್ತಿಯೂ ಸಿಗಬಹುದು. 18 ವರ್ಷಕ್ಕೆ ಕಾನ್‌ಸ್ಟೆಬಲ್‌ ಆದವರು ಸರ್ಕಲ್‌ ಇನ್‌ಸ್ಪೆಕ್ಟರ್‌, 24 ವರ್ಷಕ್ಕೆ ಸೇರಿದವರು ಎಸ್‌ಐ ಹಾಗೂ 30 ವರ್ಷಕ್ಕೆ ಸೇರ್ಪಡೆಯಾದವರು ಎಎಸ್‌ಐ ಆಗಿ ನಿವೃತ್ತಿಯಾಗುತ್ತಾರೆ. ಅಂದರೆ, ಕಾನ್‌ಸ್ಟೆಬಲ್‌ ಕನಿಷ್ಠ ಎಎಸ್‌ಐ ಆಗಿ ನಿವೃತ್ತರಾಗುತ್ತಾರೆ. ದೇಶದ ಯಾವುದೇ ರಾಜ್ಯದಲ್ಲೂ ಇಂಥ ಕಾರ್ಯ ಆಗಿಲ್ಲ. ಹಿಂದೆ ಒಂದು ಬಡ್ತಿ ಪಡೆಯಲು ಎಷ್ಟು ವರ್ಷ ಬೇಕಾಗುತ್ತಿತ್ತು?’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಒಂದು ಸಾವಿರ ಠಾಣೆಗಳಿವೆ. ಪ್ರತಿ ಠಾಣೆಗೂ ವಾರ್ಷಿಕ ಖರ್ಚಿಗೆಂದು ತಲಾ ₹1 ಲಕ್ಷ ಅನುದಾನ ನೀಡಲಾಗಿದೆ.
₹225 ಕೋಟಿ ಅನುದಾನ: ಗೃಹಸಚಿವರ ಸಲಹೆಗಾರ ಕೆಂಪಯ್ಯ ಮಾತನಾಡಿ, ‘ಸುಮಾರು 12 ಸಾವಿರ ಪೊಲೀಸರಿಗೆ ಏಕಕಾಲಕ್ಕೆ ಪದೋನ್ನತಿ ನೀಡುವ ಮೂಲಕ ಸರ್ಕಾರವು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಪದೋನ್ನತಿ ಹಾಗೂ ಭತ್ಯೆ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಒಟ್ಟು ₨ 225 ಕೋಟಿ ಅನುದಾನ ಒದಗಿಸಿ, ಕಾಳಜಿ ತೋರಿಸಿದೆ. ಸಿಬ್ಬಂದಿಯು ಸರ್ಕಾರದ ಆಶಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ನನ್ನ 35 ವರ್ಷದ ಅನುಭವದಲ್ಲಿ ಯಾವುದೇ ಸರ್ಕಾರ ಈ ಪ್ರಮಾಣದಲ್ಲಿ ಸೌಲಭ್ಯ ಒದಗಿಸಿರಲಿಲ್ಲ. ಹೀಗಾಗಿ, ಈ ದಿನ ಇಲಾಖೆಗೆ ಸಂಭ್ರಮದ ದಿನ’ ಎಂದು ತಿಳಿಸಿದರು.

ಅತಿಥಿಯಾಗಿದ್ದ ಕೆಎಸ್ಆರ್‌ಪಿ ಎಡಿಜಿಪಿ ಭಾಸ್ಕರರಾವ್, ‘ಕರ್ನಾಟಕ ಪೊಲೀಸ್ ಇಲಾಖೆಯು ಏಕಕಾಲಕ್ಕೆ 12,000 ಸಿಬ್ಬಂದಿಗೆ ಪದೋನ್ನತಿ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆದಿದೆ’ ಎಂದು ಹೇಳಿದರು.

ಕನ್ನಡದಲ್ಲಿ ಕವಾಯತು ಆಜ್ಞೆ ನೀಡಿದ ಪೊಲೀಸ್‌್ ತಂಡಕ್ಕೆ ₹10,000 ನಗದು ಬಹುಮಾನ ನೀಡಲಾಯಿತು. ಅಪರಾಧ ತಡೆ ಕುರಿತ ‘ಜಾಗೃತಿ’ ಎಂಬ ಚಿತ್ರಸುರುಳಿ ಹಾಗೂ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

ಉತ್ತರ ವಲಯ ಐಜಿಪಿ ಕೆ. ರಾಮಚಂದ್ರರಾವ್, ಬೆಳಗಾವಿ ನಗರ ಪೊಲೀಸ್ ಆಯುಕ್ತ ಟಿ.ಜಿ. ಕೃಷ್ಣಭಟ್ಟ, ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಪಿ.ಎಚ್. ರಾಣೆ, ಬೆಳಗಾವಿ ಎಸ್ಪಿ ಬಿ.ಆರ್. ರವಿಕಾಂತೇಗೌಡ, ಬಾಗಲಕೋಟೆ ಎಸ್ಪಿ ಸಿ.ಬಿ. ರಿಷಂತ್, ಗದಗ ಜಿಲ್ಲಾ ಎಸ್ಪಿ ಕೆ. ಸಂತೋಷಬಾಬು, ಧಾರವಾಡ ಎಸ್ಪಿ ಧಮೇಂದ್ರಕುಮಾರ್ ಮೀನಾ, ಬೆಳಗಾವಿ ಡಿಸಿಪಿ ರಾಧಿಕಾ, ಅಮರನಾಥ್ ರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.