ADVERTISEMENT

ಜಲಾನಯನ ಪ್ರದೇಶಗಳಲ್ಲಿ ವರುಣನ ಅಬ್ಬರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 7:18 IST
Last Updated 21 ಜುಲೈ 2017, 7:18 IST
ಚಿಕ್ಕೋಡಿ ತಾಲ್ಲೂಕಿನ ಕಾರದಗಾ ಗ್ರಾಮದೇವರಾದ ಬಂಗಾಲಿಬಾಬಾ ಮಂದಿರವನ್ನು ದೂಧಗಂಗಾ ನದಿ ನೀರು ಸುತ್ತುವರಿದಿದೆ
ಚಿಕ್ಕೋಡಿ ತಾಲ್ಲೂಕಿನ ಕಾರದಗಾ ಗ್ರಾಮದೇವರಾದ ಬಂಗಾಲಿಬಾಬಾ ಮಂದಿರವನ್ನು ದೂಧಗಂಗಾ ನದಿ ನೀರು ಸುತ್ತುವರಿದಿದೆ   

ಚಿಕ್ಕೋಡಿ: ಮಹಾರಾಷ್ಟ್ರದ ನದಿ ಜಲಾನಯನ ಪ್ರದೇಶಗಳಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಪರಿಣಾಮವಾಗಿ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಬರುತ್ತಿರುವ ಒಳ ಹರಿವಿನಲ್ಲೂ ಕಳೆದ 24 ಗಂಟೆಗಳಲ್ಲಿ ಸುಮಾರು 33 ಸಾವಿರ ಕ್ಯೂಸೆಕ್‌ನಷ್ಟು ಹೆಚ್ಚಳ ದಾಖಲಾಗಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ ಹಾಗೂ ದೂಧಗಂಗಾ ನದಿಯಿಂದ ಸೇರಿದಂತೆ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಬುಧವಾರ ಹರಿದು ಬರುತ್ತಿದ್ದ 62 ಸಾವಿರ ಕ್ಸೂಸೆಕ್‌ ನೀರು ಗುರುವಾರ 95,296 ಕ್ಯೂಸೆಕ್‌ಗೆ ಏರಿಕೆಯಾಗಿದೆ. ರಾಜಾಪುರ  ಬ್ಯಾರೇಜ್‌ನಿಂದ 75,584 ಕ್ಯೂಸೆಕ್‌ ಮತ್ತು ದೂಧಗಂಗಾ ನದಿಯಿಂದ 19,712 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.

ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜತ್ರಾಟ–ಭೀವಶಿ, ಅಕ್ಕೋಳ–ಸಿದ್ನಾಳ, ಭೋಜವಾಡಿ–ಕುನ್ನೂರ ಹಾಗೂ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಲಿಕವಾಡ–ದತ್ತವಾಡ ಸೇತುವೆಗಳು ಗುರುವಾರ ಜಲಾವೃತಗೊಂಡಿವೆ. ಬುಧವಾರ ಕೃಷ್ಣಾ ನದಿಗೆ ನಿರ್ಮಿಸಿರುವ ಕಲ್ಲೋಳ–ಯಡೂರ ಮತ್ತು ದೂಧಗಂಗಾ ನದಿಗೆ ಇರುವ ಕಾರದಗಾ–ಭೋಜ ಗ್ರಾಮಗಳ ಮಧ್ಯೆದ ಸೇತುವೆಗಳು ಜಲಾವೃತಗೊಂಡಿವೆ.

ADVERTISEMENT

ಕೆಳಮಟ್ಟದ ಸೇತುವೆಗಳು ಮುಳುಗಡೆಯಾಗಿರುವುದರಿಂದ ಸಾರ್ವಜನಿಕರು ಹತ್ತಾರು ಕಿ.ಮಿ. ಸುತ್ತುಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದುವರೆಗೆ ಯಾವುದೇ ಗ್ರಾಮ ಅಥವಾ ಜನವಸತಿ ಪ್ರದೇಶಗಳ ಸಂಪರ್ಕ ಕಡಿತಗೊಂಡಿಲ್ಲ. ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಸುಕ್ಷೇತ್ರ ನರಸಿಂಹವಾಡಿಯ ದತ್ತ ಮಂದಿರ ಮತ್ತು ತಾಲ್ಲೂಕಿನ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನಗಳು ಗುರುವಾರ ಜಲಾವೃತಗೊಂಡಿವೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ರಾಜ್ಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲೂ ನಿರಂತರ ಏರಿಕೆ ಕಂಡು ಬರುತ್ತಿದೆ. ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ದಡದಲ್ಲಿರುವ ನೀರಾವರಿ ವಿದ್ಯುತ್‌ ಪಂಪಸೆಟ್‌ಗಳನ್ನು ಸ್ಥಳಾಂತರಿಸುವಲ್ಲಿ ಕೃಷಿಕರು ಮಗ್ನರಾಗಿದ್ದಾರೆ. ಸದಲಗಾ ಬಳಿ ಮೈದುಂಬಿಕೊಂಡು ಹರಿಯುತ್ತಿರುವ ದೂಧಗಂಗಾ ನದಿ ನೀರು ಪಕ್ಕದ ಹೊಲಗದ್ದೆಗಳಿಗೆ ನುಗ್ಗತೊಡಗಿದೆ.

‘ಸಂಭವನೀಯ ನೆರೆ ಹಾವಳಿಯನ್ನು ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನದಿ ನೀರಿಗೆ ಯಾರೂ ಇಳಿಯದಂತೆ ಸೂಚನೆ ನೀಡಲಾಗಿದೆ. ಮುಳುಗಡೆಯಾಗಿರುವ ಸೇತುವೆ ಬಳಿ ಬ್ಯಾರಿಕೇಡ್‌ ಅಳವಡಿಸಿ ಪೊಲೀಸ್‌ ಭದ್ರತೆ ನೀಡಲಾಗಿದೆ.

ತಾಲ್ಲೂಕಿನ ನದಿ ತೀರದಲ್ಲಿ ಒಟ್ಟು 32 ಜನ ನೋಡಲ್‌ ಆಫೀಸರ್‌ಗಳನ್ನು ನಿಯೋಜಿಸಲಾಗಿದ್ದು, ಗ್ರಾಮಮಟ್ಟದ ಅಧಿಕಾರಿಗಳೂ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ. ಕಲ್ಲೋಳ, ಯಡೂರ, ಯಡೂರವಾಡಿ, ಚಂದೂರ, ಮಾಂಜರಿ, ಅಂಕಲಿ, ಇಂಗಳಿ, ಹುನ್ನರಗಿ ಮೊದಲಾದ ಗ್ರಾಮಗಳಲ್ಲಿ ದೋಣಿಗಳನ್ನೂ ಸುಸ್ಥಿತಿಯಲ್ಲಿಡಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ತಹಶೀಲ್ದಾರ್ ಸಿ.ಎಸ್‌. ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮಳೆ ವಿವರ: ಮಹಾರಾಷ್ಟ್ರದ ಕೊಯ್ನಾ –237 ಮಿ.ಮೀ., ವಾರಣಾ–100 ಮಿ. ಮೀ, ರಾಧಾನಗರ–276 ಮಿ.ಮೀ, ದೂಧಗಂಗಾ–147 ಮಿ. ಮೀ., ಮಹಾಬಳೇಶ್ವರ–120 ಮಿ.ಮೀ., ನವಜಾ–326 ಮಿ.ಮೀ. ಹಾಗೂ ತಾಲ್ಲೂಕಿನ ಚಿಕ್ಕೋಡಿ37.9 ಮಿ.ಮೀ., ಅಂಕಲಿ–23.4 ಮಿ.ಮೀ., ನಾಗರಮುನ್ನೋಳಿ –19.6 ಮಿ.ಮೀ., ಸದಲಗಾ–41.04 ಮಿ.ಮೀ., ಗಳತಗಾ–47.2 ಮಿ. ಮೀ., ಜೋಡಟ್ಟಿ–9.8 ಮಿ. ಮೀ., ನಿಪ್ಪಾಣಿ–63.4 ಮಿ. ಮೀ., ಸೌಂದಲಗಾ– 64.3 ಮಿ.ಮೀ ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.