ADVERTISEMENT

ಜಿಲ್ಲಾ ಮಟ್ಟದ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 6:59 IST
Last Updated 16 ಮೇ 2017, 6:59 IST

ಖಾನಾಪುರ: ಪಟ್ಟಣದ ಶಾಸಕರ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಾಲಭವನ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಟ್ಯಾಲೆಂಟ್ ಸರ್ಚ್ ಫೌಂಡೇಷನ್‌ಗಳ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ವಿಶೇಷ ಬೇಸಿಗೆ ಶಿಬಿರಕ್ಕೆ ಬಾಲಭವನದ ಅಧ್ಯಕ್ಷೆ ಡಾ.ಅಂಜಲಿ ನಿಂಬಾಳ್ಕರ್‌ ಸೋಮವಾರ ಚಾಲನೆ ನೀಡಿದರು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಶಿಬಿರದಲ್ಲಿ 100 ಮಕ್ಕಳನ್ನು ದಾಖಲಿಸುವ ಗುರಿ ಹೊಂದಿದ್ದರೂ ಇದುವರೆಗೆ 140ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿರುವುದು ಮತ್ತು ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಪಟ್ಟಣದಲ್ಲಿ ಮೊದಲ ಬಾರಿ ಜಿಲ್ಲಾ ಮಟ್ಟದ ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸುವ ಮೂಲಕ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊತ್ತ ತಾಲ್ಲೂಕಿನ ಅರಣ್ಯ ಮತ್ತು ಗುಡ್ಡಗಾಡು ಭಾಗದ ಮಕ್ಕಳಿಗೆ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ವಿಷಯಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ತಮ್ಮ ಉದ್ದೇಶ ಈಡೇರಿದೆ.

ADVERTISEMENT

ರಜಾ ಅವಧಿಯಲ್ಲಿ ನಡೆಯುವ ಶಿಬಿರಗಳಲ್ಲಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ಇಷ್ಟವಾದ ವಿಭಾಗದ ಬಗ್ಗೆ ಜ್ಞಾನ ಪಡೆದುಕೊಳ್ಳುವಂತೆ ಮಾಡಲಾಗುತ್ತದೆ. ಇದರಿಂದ ಅವರ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಶಿಬಿರದ ಸಂಯೋಜಕ ರಾಜೇಂದ್ರ ಭಂಡಾರ ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಚಿತ್ರಕಲೆ, ಗಾಯನ, ನೃತ್ಯ ಮತ್ತಿತರ ರಂಗಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಿ ವಿವಿಧ ಕ್ಷೇತ್ರಗಳ ಪರಿಣಿತರನ್ನು ಶಿಬಿರಕ್ಕೆ ಆಹ್ವಾನಿಸಿ ಅವರಿಂದ ವಿಶೇಷ ವರ್ಗಗಳನ್ನು ಆಯೋಜಿಸಲಾಗುತ್ತದೆ. ಸಂಪೂರ್ಣ ಉಚಿತವಾಗಿರುವ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದವರಿಗೆ ವಿಶೇಷ ಕಿಟ್ ಹಾಗೂ ಪ್ರಮಾಣ ಪತ್ರ ನೀಡ ಲಾಗುತ್ತದೆ ಎಂದು ಮಾಹಿತಿ ನೀಡಿದರು.

ಟ್ಯಾಲೆಂಟ್ ಸರ್ಚ್ ಫೌಂಡೇಷನ್‌ನ ಡಾ.ಸಲೀಂ ಸೋನೆಖಾನ, ಸರ್ಕಾರಿ ಬಾಲ ಮಂದಿರದ ಅಧೀಕ್ಷಕಿ ಅನ್ನಪೂರ್ಣ ಕುಬಗಡ್ಡಿ, ಬಿ.ಆರ್.ಸಿ ಸಂಯೋಜಕಿ ಸವಿತಾ ಹಲಕಿ, ಶಿಕ್ಷಣ ಸಂಯೋಜಕ ಸಿದ್ಧಣ್ಣ ಸಾಣಿಕೊಪ್ಪ, ಶಾಸಕರ ಮಾದರಿ ಶಾಲೆಯ ಮುಖ್ಯ ಶಿಕ್ಷಕಿ ಜೆ.ಎ ಚಿಕ್ಕೋಡಿ ಇದ್ದರು. ಸಿಡಿಪಿಒ ಚಂದ್ರಕಾಂತ ಕಾರೇಕರ ಸ್ವಾಗತಿಸಿದರು. ಫಾರೂಕ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.