ADVERTISEMENT

ಜಿಲ್ಲೆಗೆ ಒಂದೇ ಆಧಾರ್‌ ನೋಂದಣಿ ಕೇಂದ್ರ!

ಶ್ರೀಕಾಂತ ಕಲ್ಲಮ್ಮನವರ
Published 13 ಜುಲೈ 2017, 11:57 IST
Last Updated 13 ಜುಲೈ 2017, 11:57 IST

ಬೆಳಗಾವಿ:  ಜಿಲ್ಲೆಯಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಇದ್ದ 16 ಆಧಾರ್‌ ನೋಂದಣಿ ಕೇಂದ್ರಗಳನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರದ ಇ– ಆಡಳಿತ ಕೇಂದ್ರ ನಿರ್ಧರಿಸಿದ್ದು, ಇಡೀ ಜಿಲ್ಲೆಗೆ ಅನ್ವಯವಾಗುವಂತೆ ಬೆಳಗಾವಿಯ ತಹಶೀಲ್ದಾರ್‌ ಕಚೇರಿಯಲ್ಲಿ ಒಂದು ಕೇಂದ್ರವನ್ನು ಮಾತ್ರ ಚಾಲ್ತಿಯಲ್ಲಿಟ್ಟಿದೆ.

ಇದಕ್ಕೂ ಮೊದಲು, ಜಿಲ್ಲೆಯ ಎಲ್ಲ 11 ತಾಲ್ಲೂಕುಗಳು ಸೇರಿದಂತೆ ಹೋಬಳಿ ಮಟ್ಟದಲ್ಲೂ ಕೇಂದ್ರಗಳನ್ನು ತೆರೆಯಲಾಗಿತ್ತು. ಹೀಗಾಗಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆಧಾರ್‌ ನೋಂದಣಿ ಮಾಡಿಸಲು ಸಹಕಾರಿಯಾಗಿತ್ತು. ಈಗ ಇವುಗಳನ್ನು ಸ್ಥಗಿತಗೊಳಿಸಿರುವುದರಿಂದ ನೋಂದಣಿ ಮಾಡಿಸಲು ಬಯಸುವವರು ಬೆಳಗಾವಿಗೇ ಬರಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ. 

ಈ ಆದೇಶವು ಬೆಳಗಾವಿ ಸೇರಿದಂತೆ ಇಡೀ ರಾಜ್ಯಕ್ಕೆ ಅನ್ವಯಿಸಲಿದೆ. ಕೇಂದ್ರ ಸರ್ಕಾರ ನೀಡುತ್ತಿರುವ ವೆಚ್ಚಕ್ಕಿಂತ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿರುವ ನೆಪವೊಡ್ಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇದ್ದ ಒಟ್ಟು 662 ಆಧಾರ್‌ ನೋಂದಣಿ ಕಿಟ್‌ಗಳನ್ನು ಸ್ಥಗಿತಗೊಳಿಸಲು ಇ– ಆಡಳಿತ ಕೇಂದ್ರ ನಿರ್ಧರಿಸಿದೆ.

ADVERTISEMENT

ದೇಶದ ಪ್ರತಿಯೊಬ್ಬ ನಾಗರಿಕರಿಗೂ ವಿಶಿಷ್ಟ ಸಂಖ್ಯೆ ನೀಡುವ ಆಧಾರ್‌ ನೋಂದಣಿ ಪ್ರಕ್ರಿಯೆ 2016ರಲ್ಲಿ ಆರಂಭವಾಯಿತು. ನೋಂದಣಿ ಮಾಡಿಸಲು ಸರ್ಕಾರಿ ಕಚೇರಿಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿತ್ತು. ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕೇಂದ್ರಗಳನ್ನು ತೆರೆಯಲಾಗಿತ್ತು. ಇದೇ ರೀತಿ ರಾಜ್ಯದಲ್ಲಿ 692 ಕೇಂದ್ರಗಳನ್ನು ತೆರೆಯಲಾಗಿತ್ತು.

ಇವುಗಳ ಪೈಕಿ 662 ಕೇಂದ್ರಗಳನ್ನು ಸ್ಥಗಿತಗೊಳಿಸಿ, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಒಂದರಂತೆ 30 ಕೇಂದ್ರಗಳನ್ನು ಮಾತ್ರ ಚಾಲ್ತಿಯಲ್ಲಿ ಇಡಲು ನಿರ್ಧರಿಸಲಾಗಿದೆ.

ಹಲವು ದೂರು:  ಆಧಾರ್‌ ನೋಂದಣಿಗಾಗಿ ಹಣ ವಸೂಲಿ, ಆಪರೇಟರ್‌ಗಳ ಕೊರತೆ, ಏಜೆನ್ಸಿಯವರ ಅಸಹಕಾರ ಹಾಗೂ ಸರ್ಕಾರ ಹಣ ಬಿಡುಗಡೆ ಮಾಡಿದ್ದರೂ ಆಪರೇಟರ್‌ಗಳಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ನೀಡದಿರುವ ಬಗ್ಗೆ ಹಲವು ದೂರುಗಳು ಸಲ್ಲಿಕೆಯಾಗಿದ್ದವು. ಇವುಗಳನ್ನು ರಾಜ್ಯ ಸರ್ಕಾರ ಗಮನಕ್ಕೆ ತೆಗೆದುಕೊಂಡಿದೆ.
ಕೇಂದ್ರದ ಅನುದಾನ ಕಡಿಮೆ: ಆಧಾರ್‌ ನೋಂದಣಿಯು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಇದಕ್ಕಾಗಿ ಕೇಂದ್ರವು ಪ್ರತಿಯೊಂದು ನೋಂದಣಿಗೆ ₹ 50 ಅನುದಾನ ನೀಡುತ್ತಿದೆ.  ಇದಕ್ಕಿಂತ 4 ರಿಂದ 5ಪಟ್ಟು ಹೆಚ್ಚು ವೆಚ್ಚವಾಗುತ್ತಿತ್ತು.

ನೋಂದಣಿ ಇಳಿಮುಖ:  ಈ ಯೋಜನೆ ಆರಂಭವಾದಾಗ ಇದ್ದಷ್ಟು ಜನದಟ್ಟಣೆ ಈಗ ಇಲ್ಲ. ಬಹುತೇಕ ಎಲ್ಲ ನಾಗರಿಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ದಿನವೊಂದಕ್ಕೆ ಸರಾಸರಿಯಾಗಿ 5ರಿಂದ 6 ನೋಂದಣಿಗಳು ಮಾತ್ರ ಆಗುತ್ತಿವೆ. ಹೀಗಾಗಿ ಜಿಲ್ಲಾ ಕೇಂದ್ರದಲ್ಲಿ ಒಂದು ಆಧಾರ್‌ ಕೇಂದ್ರವಿದ್ದರೆ ಸಾಕು ಎನ್ನುವ ಅಭಿಪ್ರಾಯವನ್ನು ಇ– ಆಡಳಿತ ಕೇಂದ್ರವು ತನ್ನ ಆದೇಶ ಪತ್ರದಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.