ADVERTISEMENT

‘ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಮಾನ ನಿಲ್ದಾಣ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 6:17 IST
Last Updated 13 ಸೆಪ್ಟೆಂಬರ್ 2017, 6:17 IST
‘ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಮಾನ ನಿಲ್ದಾಣ ಸಹಕಾರಿ’
‘ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಮಾನ ನಿಲ್ದಾಣ ಸಹಕಾರಿ’   

ಬೆಳಗಾವಿ: ಜಿಲ್ಲೆಯ ಉದ್ಯಮಿಗಳಿಗೆ, ಕೃಷಿಕರಿಗೆ ಹಾಗೂ ಹೊರರಾಜ್ಯಗಳಿಂದ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ಬೆಳಗಾವಿ ವಿಮಾನ ನಿಲ್ದಾಣ ಸಹಕಾರಿ­ಯಾಗಲಿದೆ. ಜಿಲ್ಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು. ಇಲ್ಲಿಗೆ ಸಮೀಪದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಹೇಳಿದರು.

ವಿಮಾನ ನಿಲ್ದಾಣವನ್ನು ಸುಮಾರು ₹ 147 ಕೋಟಿ ವೆಚ್ಚದಲ್ಲಿ ಮೇಲ್ದ­ರ್ಜೆಗೇರಿಸಲಾಗಿದೆ. ಇದರ ಪ್ರಯೋಜನ ಇನ್ನಷ್ಟು ಜನರು ದೊರಕಲಿ. ಹೆಚ್ಚೆಚ್ಚು ಜನರು ಉಪಯೋಗಿಸಿದರೆ ವಿಮಾನಗಳ ಪ್ರಯಾಣ ದರ ಕಡಿಮೆಯಾಗಲಿದೆ ಎಂದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ವಿಮಾನ ನಿಲ್ದಾಣದ ಮೇಲ್ದರ್ಜೆಯಿಂದ ದೊಡ್ಡ ದೊಡ್ಡ ವಿಮಾನಗಳ ಹಾರಾಟಕ್ಕೆ ಅನುಕೂಲವಾ­ಗಲಿದೆ. ಮುಂಬರುವ ದಿನಗಳಲ್ಲಿ ಕಾರ್ಗೊ (ಸರಕು) ವಿಮಾನಗಳು ಕೂಡ ಬಂದಿಳಿಯುವ ಸಾಧ್ಯತೆ ಇದೆ ಎಂದು ಹೇಳಿದರು.

ADVERTISEMENT

ಪರಿಹಾರಕ್ಕೆ ಒತ್ತಾಯ: ‘ವಿಮಾನ ನಿಲ್ದಾಣದ ರನ್‌ವೇ ವಿಸ್ತರಿಸಲು 350 ಎಕರೆ  ಭೂಮಿಯನ್ನು 2008ರಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಇದರಲ್ಲಿ ಕೆಲವು ರೈತರಿಗೆ ಮಾತ್ರ ಪರಿಹಾರದ ಹಣ ಸಿಕ್ಕಿದೆ. ನಮಗೆ ಸಿಕ್ಕಿಲ್ಲ’ ಎಂದು ಜಮೀನು ಕಳೆದುಕೊಂಡ ರೈತ ದಿಲೀಪ ಚವಾಣ ಸಂಸದರ ಗಮನಕ್ಕೆ ತಂದರು.

‘ಪ್ರತಿ ಗುಂಟೆಗೆ ₹ 33,600 ದರ ನೀಡುವಂತೆ ಕಳೆದ ವರ್ಷ ನ್ಯಾಯಾಲಯವು ಆದೇಶ ನೀಡಿದೆ. ಅದರಂತೆ ನಮಗೆ ಪರಿಷ್ಕರ ದರ ನೀಡಬೇಕು’ ಎಂದು ಮತ್ತೊಬ್ಬ ರೈತ ಬಾಗಣ್ಣ ಸನದಿ ಒತ್ತಾಯಿಸಿದರು.

ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ, ಹೋಟೆಲ್‌ ಉದ್ಯಮಿ ವಿಠ್ಠಲ ಹೆಗಡೆ, ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ ಉಪಸ್ಥಿತರಿದ್ದರು.

147 ಕೋಟಿ ವಿಮಾನ ನಿಲ್ದಾಣ ಮೇಲ್ದರ್ಜೆಗೆ ತರಲು ತಗುಲಿದ ವೆಚ್ಚ.

ರಾತ್ರಿ ವೇಳೆಯೂ ವಿಮಾನಗಳ ಹಾರಾಟಕ್ಕೆ ಸೌಲಭ್ಯ

ಸೆಪ್ಟೆಂಬರ್ 14 ಮಧ್ಯಾಹ್ನ 12.30ಕ್ಕೆ ಉದ್ಘಾಟನೆ

ನಿಲ್ದಾಣದ ವಿಶೇಷ
* ದೊಡ್ಡ ವಿಮಾನಗಳು ಇಳಿಯಲು ಹಾಗೂ ಆಕಾಶಕ್ಕೆ ನೆಗೆಯಲು ಸಹಾಯವಾಗುವಂತೆ ರನ್‌ವೇ ಉದ್ದವನ್ನು 2,300 ಮೀಟರ್‌ವರೆಗೆ ವಿಸ್ತರಿಸಲಾಗಿದೆ.
* ರಾತ್ರಿ ವೇಳೆಯೂ ವಿಮಾನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಇದುವರೆಗೆ ಹಗಲು ವೇಳೆ ಮಾತ್ರ ವಿಮಾನಗಳು ಹಾರಾಟ ನಡೆಸುತ್ತಿದ್ದವು.
* ಇದುವರೆಗೆ ಸಣ್ಣ ವಿಮಾನಗಳು (ಎಟಿಆರ್‌ 72/ ಬೊಂಬಾರ್ಡಿಯರ್‌ ಕ್ಯೂ 400 ಮಾದರಿ) ಮಾತ್ರ ಸಂಚರಿಸುತ್ತಿದ್ದವು. ಮುಂದಿನ ದಿನಗಳಲ್ಲಿ ಎ–321 ಮಾದರಿಯ ವಿಮಾನಗಳು ಕೂಡ ಸಂಚರಿಸಲಿವೆ.
* ಹೊಸ ಟರ್ಮಿನಲ್‌ 3,600 ಚದರ ಅಡಿ ವಿಸ್ತಾರವಿದೆ. ಒಂದೇ ಸಮಯದಲ್ಲಿ 300 ಜನರ ಸಾಮರ್ಥ್ಯ ಇದಕ್ಕಿದೆ. ಕೇಂದ್ರೀಕೃತ ಹವಾ ನಿಯಂತ್ರಣ, ಎರಡು ವೇಳಾಪಟ್ಟಿ ಫಲಕ, ಸಿಸಿಟಿವಿ, ಬ್ಯಾಗ್‌ಗಳ ಸ್ಕ್ಯಾನರ್‌ ಅಳವಡಿಕೆ.
* ಪ್ರತಿದಿನ 50,000 ಲೀಟರ್‌ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆ. ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ತೋಟಕ್ಕೆ ಸಂಸ್ಕರಿತ ನೀರನ್ನು ಬಳಸಲಾಗುವುದು.
*ಏರ್‌ ಟ್ರಾಫಿಕ್‌ ಕಂಟ್ರೋಲ್‌ ಗೋಪುರದ ಎತ್ತರ– 22.5 ಮೀಟರ್‌
* 160 ಕಾರ್‌ಗಳ ಪಾರ್ಕಿಂಗ್‌, 11 ವಿಐಪಿ ಕಾರ್‌ ಪಾರ್ಕಿಂಗ್‌, ಟ್ಯಾಕ್ಸಿ ಪಾರ್ಕಿಂಗ್‌ಗೆ 75 ಮೀಟರ್‌ ಉದ್ದ 3 ಲೇನ್‌ಗಳ ನಿರ್ಮಾಣ,
* ಮುಂಬರುವ ದಿನಗಳಲ್ಲಿ ಕಾರ್ಗೊ (ಸರಕು ಸಾಗಿಸುವ) ವಿಮಾನಗಳ ಸಂಚಾರಕ್ಕೂ ಬಳಕೆ.
* ಪ್ರಸ್ತುತ ಸ್ಪೈಸ್‌ಜೆಟ್‌ ಕಂಪೆನಿಯ ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿದ್ದು, ಮುಂದೆ ಏರ್‌ ಇಂಡಿಯಾ ಸಂಸ್ಥೆಗೂ ವಿಮಾನ ಹಾರಾಟ ನಡೆಸುವಂತೆ ಕೋರಿಕೆ: ಸಂಸದ ಸುರೇಶ ಅಂಗಡಿ ಹೇಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.