ADVERTISEMENT

‘ತನಿಖೆಗೆ ಆಗ್ರಹಿಸಿ ಸತ್ಯಾಗ್ರಹ 6 ರಿಂದ’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 7:09 IST
Last Updated 4 ಮಾರ್ಚ್ 2017, 7:09 IST

ಬೆಳಗಾವಿ: ‘ಜಿಲ್ಲೆಯ ರಾಮದುರ್ಗ ತಾಲ್ಲೂಕು ಮುದೇನೂರ ಮತ್ತು ಓಬ­ಳಾಪುರ ಗ್ರಾಮ ಪಂಚಾಯ್ತಿಯಲ್ಲಿ ಲಕ್ಷಾಂತರ ರೂಪಾಯಿ ದುರ್ಬಳಕೆ ಮಾಡಿ­ಕೊಳ್ಳಲಾಗಿದ್ದು, ಈ ಕುರಿತು ತನಿಖೆಗೆ ಆಗ್ರಹಿಸಿ ಇದೇ 6ರಿಂದ ಓಬ­ಳಾಪುರ ಗ್ರಾಮ ಪಂಚಾಯ್ತಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸ­ಲಾಗುವುದು’ ಎಂದು ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಇಲ್ಲಿ ಶುಕ್ರವಾರ ತಿಳಿಸಿದರು.

‘ಮುದೇನೂರ ಗ್ರಾಮ ಪಂಚಾಯ್ತಿ­ಯಲ್ಲಿ ಹಲವು ವರ್ಷಗಳಿಂದಲೂ ಅವ್ಯವಹಾರ ನಡೆಯುತ್ತಿದೆ. 8 ತಿಂಗಳ ಹಿಂದೆ ನೂತನವಾಗಿ ರಚನೆಯಾಗಿರುವ ಓಬಳಾಪುರ ಪಂಚಾಯ್ತಿಯಲ್ಲೂ ಸರ್ಕಾ­ರದ ಅನುದಾನ ದುರ್ಬಳಕೆ ಮಾಡಿ­ಕೊಳ್ಳಲಾಗಿದೆ’ ಎಂದು ಪತ್ರಿಕಾಗೋಷ್ಠಿ­ಯಲ್ಲಿ ಅವರು ದೂರಿದರು.

‘ಈ ಪಂಚಾಯ್ತಿಗಳಲ್ಲಿ ನಡೆದಿರುವ ಅವ್ಯವಹಾರದ ವಿರುದ್ಧ ಪ್ರತಿಭಟನೆ, ಪಾದಯಾತ್ರೆ ನಡೆಸಲಾಗಿದೆ. ಆದರೆ, ಅಧಿಕಾರಿಗಳು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸತ್ತು, ಗ್ರಾಮಸ್ಥರ ಜೊತೆಗೂಡಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ಇಲ್ಲಿ ಗ್ರಾಮಸಭೆಗಳನ್ನು ನಡೆಸಿ ಗ್ರಾಮಸ್ಥರೊಂದಿಗೆ ಚರ್ಚಿಸುತ್ತಿಲ್ಲ. ಸತ್ತವರು, ಅಕ್ಷರಸ್ಥರು, ಸರ್ಕಾರಿ ನೌಕರರು, ಕೂಲಿಕಾರ್ಮಿಕರ ಹೆಬ್ಬೆಟ್ಟು ಸಹಿಯನ್ನು ಅಧಿಕಾರಿಗಳೇ ನಮೂದಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ಗುಳುಂ ಮಾಡಿದ್ದಾರೆ. ಕೆಲಸವನ್ನೇ ಮಾಡಿಸದೆ, ಬೋಗಸ್‌ ಬಿಲ್‌ಗಳನ್ನು ಸೃಷ್ಟಿಸಿ ಭ್ರಷ್ಟಾಚಾರ ಎಸಗಲಾಗಿದೆ.

ಗ್ರಾಮ ಪಂಚಾಯ್ತಿ ಸದಸ್ಯರ ಸೊಸೆ­ಯಂದಿರು, ಪತ್ನಿಯರು, ಸಂಬಂಧಿಕರು, ಸರ್ಕಾರಿ ನೌಕರರ ಕುಟುಂಬದವರಿಗೆ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಲಾಗಿದೆ. 10 ಸಾವಿರ ಲೀಟರ್‌ ಟ್ರ್ಯಾಕ್ಟರ್‌ ಎಂದು ನಮೂದಿಸಿ, ಟ್ರ್ಯಾಕ್ಟರ್‌ ಎಂಜಿನ್‌ ತೋರಿಸಿ ಬೋಗಲ್‌ ಬಿಲ್‌ ಸೃಷ್ಟಿಸಿ ಕಂದಾಯ ಇಲಾಖೆಯಲ್ಲಿ ₹ 17,66,566, ತಾಲ್ಲೂಕು ಪಂಚಾಯ್ತಿಯಲ್ಲಿ ₹ 5,85,100 ಹಣವನ್ನು ಸರ್ಕಾರಕ್ಕೆ ವಂಚಿಸಲಾಗಿದೆ’ ಎಂದು ದೂರಿದರು.

‘ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಿಂದ ಇವೆಲ್ಲವೂ ಬೆಳಕಿಗೆ ಬಂದಿವೆ’ ಎಂದು ತಿಳಿಸಿದರು. ‘ಈ ಅವ್ಯವಹಾರಗಳ ಕುರಿತು ಹಿರಿಯ ಅಧಿಕಾರಿಗಳು ಗಮನಿಸಿ, ಸಮರ್ಪಕ ತನಿಖೆ ನಡೆಸಬೇಕು. ಇಲ್ಲವಾದಲ್ಲಿ, ಕಾನೂನಾತ್ಮಕ ಹೋರಾಟ ನಡೆಸಲು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು’ ಎಂದು ಹೇಳಿದರು.

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.
ವೆಂಕಟೇಶಪ್ರಸಾದ,  ಕರ್ನಾಟಕ ಕೃಷಿಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಜಕಾತಿ, ಮುಖಂಡ ಶ್ರೀಧರ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT