ADVERTISEMENT

ದೂರುಗಳ ಸಂಖ್ಯೆ ಕ್ಷೀಣ: ಸಕ್ಸೇನಾ ಕಳವಳ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 6:38 IST
Last Updated 24 ಮಾರ್ಚ್ 2017, 6:38 IST

ಖಾನಾಪುರ: ಮಾನವ ಹಕ್ಕುಗಳ ಆಯೋಗಕ್ಕೆ ಪರಿಸರ ನಾಶ, ಮಕ್ಕಳ ಮೇಲಿನ ಅತ್ಯಾಚಾರ ಸೇರಿದಂತೆ  ಸಾರ್ವಜನಿಕರಿಂದ ಮಾನವ ಹಕ್ಕು ಉಲ್ಲಂಘನೆಯ ಬಗ್ಗೆ ಸ್ವಯಂಪ್ರೇರಿತ ದೂರುಗಳು ದಾಖಲಾಗುತ್ತಿಲ್ಲ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ರಾಜ್ಯ ಪೊಲೀಸ್ ತರಬೇತಿ ಶಾಲೆಯಲ್ಲಿ ಬುಧವಾರ ಮಾನವ ಹಕ್ಕುಗಳ ಆಯೋಗದ ನೇತೃತ್ವದಲ್ಲಿ ಗ್ಲೋಬಲ್ ಕನ್ಸರ್ನ್ ಇಂಡಿಯಾ, ವನಮಿತ್ರ ಜಸ್ಟೀಸ್ ಮತ್ತು ಕೇರ್, ಅಕಾಡೆಮಿ ಆಫ್ ಗಾಂಧಿಯಿಸಂ, ಸ್ಟಡೀಸ್ ಸಂಘಟನೆಗಳು ಏರ್ಪಡಿಸಿದ್ದ ಮಾನವ ಕಳ್ಳ ಸಾಗಾಣಿಕೆ ಮತ್ತು ಲಿಂಗ ಸಮಾನತೆ ಕಾರ್ಯಾಗಾರ ಸಮಾ ರೋಪದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯವರ ವಿರುದ್ಧ ಮೊದಲು ಬರುತ್ತಿದ್ದ ಮಾನವ ಹಕ್ಕುಗಳ ಉಲ್ಲಂಘನೆಯ ದೂರುಗಳು ಈಗ ಕ್ಷೀಣಿಸಿದ್ದು, ವಿಚಾರಣಾಧೀನ ಕೈದಿಗಳಿಗೆ ಕಾರಾಗೃಹಗಳಲ್ಲಿ ಮೂಲ ಸೌಲಭ್ಯ ನೀಡದಿರುವ ಬಗ್ಗೆ ದೂರುಗಳು ಹೆಚ್ಚಿವೆ ಎಂದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಲೈಂಗಿಕ ಶೋಷಣೆ, ಅತ್ಯಾಚಾರ ಮತ್ತು ದೌರ್ಜನ್ಯಗಳನ್ನು ಕುಗ್ಗಿಸಲು ವಿದ್ಯಾರ್ಥಿ ಗಳಿಗೆ ಪ್ರೌಢಶಾಲೆ ಮತ್ತು ಕಾಲೇಜು ಮಟ್ಟದಲ್ಲೇ ಲೈಂಗಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಪಠ್ಯಕ್ರಮಗಳನ್ನು ಅಳವಡಿಸಲು ಮಾನವ ಹಕ್ಕುಗಳ ಆಯೋಗದ ವತಿಯಿಂದ ಕ್ರಮ ಕೈಗೊಳ್ಳ ಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷ ದಿಂದಲೇ ಈ ಪಠ್ಯಕ್ರಮಗಳು ಪಠ್ಯಪುಸ್ತಕ ಗಳಲ್ಲಿ ಬರಲಿವೆ.

ಮಾನವ ಹಕ್ಕುಗಳ ಆಯೋಗಕ್ಕೆ ಬರುವ ಬಹುತೇಕ ಪ್ರಕರಣ ಗಳಲ್ಲಿ ಬಡತನ, ಅಜ್ಞಾನ ಮತ್ತು ಆರ್ಥಿಕ ಅಚರಣೆಯಿಂದಾಗಿ ಕಾನೂನು ಉಲ್ಲಂ ಘಿಸುತ್ತಿರುವುದು ಗಮನಾರ್ಹವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ತರಬೇತಿ ಶಾಲೆಯ ಪ್ರಾಚಾರ್ಯ ಎಸ್.ವಿ. ಯಾದವ ಅಧ್ಯಕ್ಷತೆ ವಹಿಸಿದ್ದರು. ಪ್ರಶಿಕ್ಷಣಾರ್ಥಿಗಳಾದ ಗುರುರಾಜ, ಮಹೇಶ ಮತ್ತು ವಿಶ್ವನಾಥ ಅನಿಸಿಕೆ ವ್ಯಕ್ತಪಡಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ವೃಂದಾ, ಮರಿಯಾ, ಮನೋಹರ ರಂಗನಾಥ, ಚಂದನ್, ಸುರೇಶಕುಮಾರ, ಪದ್ಮಾ ಹಾಜರಿದ್ದರು. ಸಿಪಿಐ ಕೆ.ವೈ. ಜುನ್ನೂರ ಸ್ವಾಗತಿಸಿದರು. ಗುರು ಮಲ್ಲಯ್ಯ ಮತ್ತು ಸ್ವಾಮಿ ಪ್ರಾರ್ಥಿಸಿದರು. ಕಾರ್ಯಾಗಾರದ ಸಂಯೋಜಕ ಮಲ್ಲಿಕಾರ್ಜುನ ವರದಿ ಮಂಡಿಸಿದರು. ಡಿ.ಬಿ. ಪಾಟೀಲ ನಿರೂಪಿಸಿದರು. ಡಿವೈಎಸ್ಪಿ ವೈ.ಡಿ. ಅಗಸಿಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.