ADVERTISEMENT

‘ನಿಫಾ’ ವೈರಾಣು ಸೋಂಕು: ಕಟ್ಟೆಚ್ಚರ

ಖಾನಾಪುರದಲ್ಲಿ ಅತಿ ಹೆಚ್ಚು ಬಾವಲಿಗಳು ವಾಸ; ತಾಲ್ಲೂಕು ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ರಚನೆ

ಶ್ರೀಕಾಂತ ಕಲ್ಲಮ್ಮನವರ
Published 26 ಮೇ 2018, 9:02 IST
Last Updated 26 ಮೇ 2018, 9:02 IST

ಬೆಳಗಾವಿ: ಕೇರಳ ಹಾಗೂ ಮಂಗಳೂರಿನಲ್ಲಿ ‘ನಿಫಾ’ ವೈರಾಣು ಸೋಂಕು ಕಂಡುಬಂದಿದ್ದರಿಂದ ಜಿಲ್ಲೆಯಲ್ಲಿಯೂ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ವಿಶೇಷವಾಗಿ ಬಾವಲಿಗಳು ಹೆಚ್ಚಾಗಿ ವಾಸವಿರುವ ಖಾನಾಪುರದಲ್ಲಿ ಹೆಚ್ಚು ಜಾಗೃತಿ ವಹಿಸಲಾಗಿದೆ. ಅದಕ್ಕೆಂದೇ ಖಾನಾಪುರದ ತಾಲ್ಲೂಕು ಆಸ್ಪತ್ರೆಯಲ್ಲಿ ನಾಲ್ಕು ಹಾಸಿಗೆಯುಳ್ಳ ವಿಶೇಷ ವಾರ್ಡ್‌ ಕೂಡ ರಚಿಸಲಾಗಿದೆ.

ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಕ್ಕೆ ಖಾನಾಪುರ ಹೊಂದಿ ಕೊಂಡಿದೆ. ಸುತ್ತಮುತ್ತಲ ಅರಣ್ಯ ಪ್ರದೇಶವಿರುವುದರಿಂದ ವಿವಿಧ ಜಾತಿಯ ಬಾವಲಿ, ಪಕ್ಷಿಗಳು ಹೆಚ್ಚು ವಾಸವಾಗಿವೆ. ಖಾನಾಪುರ, ನಂದಗಡ, ತಳಿವಾಡಿ, ಕಕ್ಕೇರಿ, ಬಾಳಗುಂದಿ, ಜಾಂಬೋಟಿ, ಕಣಕುಂಬಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಸವಾಗಿವೆ.

ಸದ್ಯದ ಮಾಹಿತಿ ಪ್ರಕಾರ, ‘ನಿಫಾ’ ವೈರಾಣು ಸೋಂಕಿತ ಪಕ್ಷಿ ಅಥವಾ ಬಾವಲಿ ಕಚ್ಚಿದ ಹಣ್ಣುಗಳನ್ನು ತಿಂದರೆ ಸೋಂಕು ತಗಲುತ್ತದೆ. ಅದಕ್ಕಾಗಿ ಬಾವಲಿ ಅಥವಾ ಯಾವುದೇ ಪಕ್ಷಿಗಳು ಕಚ್ಚಿ, ಉಳಿಸಿದ ಹಣ್ಣುಗಳನ್ನು ತಿನ್ನಬಾರದು. ಗಿಡದಿಂದ ಕೆಳಗೆ ಬಿದ್ದ ಹಣ್ಣುಗಳನ್ನು ಚೆನ್ನಾಗಿ ಪರೀಕ್ಷಿಸಬೇಕು. ಯಾವುದೇ ಪಕ್ಷಿ ಕಚ್ಚಿಲ್ಲವೆನ್ನುವುದನ್ನು ಖಾತರಿ ಪಡಿಸಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.

ADVERTISEMENT

ಹಳ್ಳಿಹಳ್ಳಿಗಳಲ್ಲಿ ಜಾಗೃತಿ: ಖಾನಾಪುರ ತಾಲ್ಲೂಕಿನಲ್ಲಿ ಬಾವಲಿಗಳು ಹೆಚ್ಚಾಗಿರುವ ಸುಮಾರು 34 ಹಳ್ಳಿಗಳ ಪಟ್ಟಿ ಮಾಡಲಾಗಿದೆ. ಇಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಕಾರ್ಯಕರ್ತರು ಸೋಂಕಿನ ಗುಣಲಕ್ಷಣಗಳ ಬಗ್ಗೆ ತಿಳಿಹೇಳುತ್ತಿದ್ದಾರೆ. ವಿಪರೀತ ಜ್ವರ, ತಲೆನೋವು, ವಾಂತಿ ಭೇದಿ ಲಕ್ಷಣಗಳಿದ್ದರೆ ತಕ್ಷಣ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಹೇಳುತ್ತಿದ್ದಾರೆ. ಈ ಸೋಂಕಿಗೆ ಯಾವುದೇ ನಿವಾರಕ ಔಷಧಿ ಇಲ್ಲ. ಹೀಗಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದೇ ಉತ್ತಮ ಮಾರ್ಗ ಎನ್ನುತ್ತಾರೆ ವೈದ್ಯರು.

ಈ ಸೋಂಕು ಗಾಳಿ ಮೂಲಕ ಹರಡುವುದಿಲ್ಲ. ಇದು ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಅಥವಾ ಸೋಂಕಿತ ಪ್ರಾಣಿ– ಪಕ್ಷಿಗಳು ಕಚ್ಚಿದ ಹಣ್ಣಿನಿಂದ ಹರಡುತ್ತದೆ. ಹೀಗಾಗಿ ಹಣ್ಣುಗಳನ್ನು ತಿನ್ನುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು ಎಂದು ಖಾನಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಸಂಜಯ ಡುಮ್ಮಗೋಳ ಹೇಳಿದರು.

ಬಾವಲಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ವಾಸವಿರುವ ಜನರಿಗೆ ಜ್ವರ ಬಂದಿದ್ದರೆ ಅಂತಹವರಲ್ಲಿ ಆಯ್ದ ಜನರ ರಕ್ತದ ಮಾದರಿಯನ್ನು ‘ನಿಫಾ’ ವೈರಾಣು ಪರೀಕ್ಷೆಗಾಗಿ ಮಣಿಪಾಲ ಅಥವಾ ಪುಣೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ಇದುವರೆಗೆ ಯಾರ ರಕ್ತದಲ್ಲೂ ವೈರಾಣು ಕಂಡು
ಬಂದಿಲ್ಲ ಎಂದು ಅವರು ತಿಳಿಸಿದರು.

ಪ್ರವಾಸಕ್ಕೆ ಹೋಗಬೇಡಿ: ‘ಕೇರಳದಲ್ಲಿ ಈ ವೈರಾಣು ಕಂಡುಬಂದಿದೆ. ಬೇಸಿಗೆ ರಜೆ ಕಳೆಯಲು ಯಾರಾದರೂ ಅಲ್ಲಿಗೆ ಹೋಗಲು ಬಯಸಿದ್ದರೆ ತಮ್ಮ ಪ್ರವಾಸ ರದ್ದುಪಡಿಸುವುದು ಉತ್ತಮ. ಕೇರಳದಿಂದ ಇಲ್ಲಿಗೆ ಯಾರಾದರೂ ಬಂದಿದ್ದರೆ ಅಂತಹವರು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಪ್ಪಾಸಾಹೇಬ ನರಹಟ್ಟಿ ತಿಳಿಸಿದರು.

‘ಕೇವಲ ಬಾವಲಿ ಅಲ್ಲ, ಯಾವುದೇ ಪಕ್ಷಿ ತಿಂದು ಬಿಟ್ಟ ಹಣ್ಣನ್ನು ತಿನ್ನಬಾರದು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪಕ್ಷಿಗಳು ತಿಂದು ಬಿಟ್ಟ ಹಣ್ಣಿಗೆ ಭಾರಿ ಡಿಮ್ಯಾಂಡು ಇರುತ್ತದೆ. ಗಿಣಿ ತಿಂದ ಹಣ್ಣು ಎಂದು ಮುಗಿಬಿದ್ದು ತಿನ್ನುತ್ತಾರೆ. ಹೀಗೆ ಮಾಡುವುದನ್ನು ನಿಲ್ಲಿಸಬೇಕು’ ಎಂದು ನುಡಿದರು.

ಹಣ್ಣಿನ ವ್ಯಾಪಾರ ಕುಸಿತ: ಅರಣ್ಯ ಪ್ರದೇಶವನ್ನು ಹೊಂದಿರುವ ಖಾನಾಪುರ ತಾಲ್ಲೂಕಿನ ತುಂಬ ಹಲವು ವಿಧದ ಹಣ್ಣಿನ ಮರಗಳಿವೆ. ಕವಳಿ ಹಣ್ಣು, ನೇರಲ ಹಣ್ಣು, ಮಾವಿನ ಹಣ್ಣು ಸೇರಿದಂತೆ ವಿವಿಧ ಬಗೆಯ ಮರಗಳಿವೆ. ಈ ಹಣ್ಣುಗಳು ಜಿಲ್ಲೆಯ ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತವೆ. ‘ನಿಫಾ’ ಭಯದಿಂದಾಗಿ ಹಲವು ಕಡೆ ಹಣ್ಣುಗಳನ್ನು ಖರೀದಿಸಲು ಗ್ರಾಹಕರು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಬೆಳಗಾವಿಯ ವ್ಯಾಪಾರಿ ಮಲ್ಲಿಕಾರ್ಜುನ ಅಂಗಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.