ADVERTISEMENT

ನಿರೀಕ್ಷೆಗೂ ಮೀರಿ ಆಸ್ತಿ ತೆರಿಗೆ; ಸಂಗ್ರಹ

ಶ್ರೀಕಾಂತ ಕಲ್ಲಮ್ಮನವರ
Published 22 ಮೇ 2017, 7:15 IST
Last Updated 22 ಮೇ 2017, 7:15 IST

ಬೆಳಗಾವಿ: ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಿಬ್ಬಂದಿಗಳು ಕೈಗೊಂಡ ಜನಾಂದೋಲನದ ಪರಿಣಾಮವಾಗಿ ಏಪ್ರಿಲ್‌ ಒಂದೇ ತಿಂಗಳಿನಲ್ಲಿ ₹14 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಒಂದೇ ತಿಂಗಳಿನಲ್ಲಿ ತೆರಿಗೆ ಸಂಗ್ರಹವಾಗಿರು ವುದು ಇದೇ ಮೊದಲು.

ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಬೆಳಗಾವಿಯು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹಲವು ಜನರು ಬಂದು ನೆಲೆಸುತ್ತಿದ್ದಾರೆ. ಇವರಿಗೆ ಮೂಲಸೌಕರ್ಯ ಕಲ್ಪಿಸಲು ಪಾಲಿಕೆಯು ಪ್ರತಿವರ್ಷ ಆಸ್ತಿ ತೆರಿಗೆ ಸಂಗ್ರಹಿಸುತ್ತಿದೆ. ಜನರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಪಾಲಿಕೆಯು ನಗರ ಅಭಿವೃದ್ಧಿಗಾಗಿ ವೆಚ್ಚ ಮಾಡಲಾಗುತ್ತದೆ.

ಪಾಲಿಕೆ ವ್ಯಾಪ್ತಿಯಲ್ಲಿ 58 ವಾರ್ಡ್‌ಗಳಿವೆ. ಅಂದಾಜು 5 ಲಕ್ಷ ಜನಸಂಖ್ಯೆ ಇದೆ. ಸುಮಾರು 1.21 ಲಕ್ಷ ಆಸ್ತಿಗಳು (ಪ್ರಾಪರ್ಟಿ) ಇವೆ. ಆಸ್ತಿಯ ವಿಸ್ತೀರ್ಣ ಹಾಗೂ ಆಯಾ ಪ್ರದೇಶವನ್ನು ಆಧರಿಸಿ ತೆರಿಗೆಯನ್ನು ವಿಧಿಸಲಾಗುತ್ತದೆ. ಪ್ರತಿ ವರ್ಷ ಆಸ್ತಿ ತೆರಿಗೆ ಸಂಗ್ರಹ ದಲ್ಲಿ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ವರ್ಷ ಆರಂಭದಿಂದಲೇ ಪಾಲಿಕೆ ಸಿಬ್ಬಂದಿಯು ಆಂದೋಲನ ರೂಪದಲ್ಲಿ ತೆರಿಗೆ ಸಂಗ್ರಹಿಸಲು ಮುಂದಾದರು.

ADVERTISEMENT

ಪ್ರಸಕ್ತ ಆರ್ಥಿಕ ವರ್ಷದ ಮೊದಲ ತಿಂಗಳು ಏಪ್ರಿಲ್‌ನಲ್ಲಿ ತೆರಿಗೆ ತುಂಬಿದರೆ ಶೇ 15ರಷ್ಟು ರಿಯಾಯ್ತಿ ಇರುತ್ತದೆ. ಈ ಅಂಶವನ್ನು ಹೆಚ್ಚು ಪ್ರಚಾರ ಪಡಿಸ ಲಾಯಿತು. ಎಂಟು ಆಟೊಗಳನ್ನು ಬಳಸಿ ಎಲ್ಲ ವಾರ್ಡ್‌ಗಳಲ್ಲಿ ಪ್ರಚಾರ ಪಡಿಸ ಲಾಯಿತು. ಅಲ್ಲದೇ, ಪ್ರಮುಖ ರಸ್ತೆಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲಾಯಿತು. ತೆರಿಗೆ ತುಂಬುವ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಿಬ್ಬಂದಿ ಆದ್ಯತೆ ಮೇರೆಗೆ ತೆಗೆದುಕೊಂಡರು. ರಜಾ ದಿನಗಳಲ್ಲೂ ಕಾರ್ಯನಿರ್ವಹಿಸಿದ್ದರು ಎನ್ನುವುದು ವಿಶೇಷ.

ಇದರ ಫಲ ಎನ್ನುವಂತೆ ಏಪ್ರಿಲ್‌ ನಲ್ಲಿ₹14 ಕೋಟಿ ಆಸ್ತಿ ತೆರಿಗೆ ಸಂಗ್ರಹ ವಾಯಿತು. ಇದು ಈ ವರ್ಷದ ಗುರಿಯಾದ ₹35 ಕೋಟಿ ತೆರಿಗೆಯ ಶೇ 40ರಷ್ಟು ಭಾಗವಾಗಿದೆ. ಮೊದಲ ತಿಂಗಳಲ್ಲಿ ಇಷ್ಟೊಂದು ಸಾಧನೆ ಮಾಡಲಾಗಿದ್ದು, ಇನ್ನುಳಿದ ಶೇ 60ರಷ್ಟು ಭಾಗವನ್ನು ಮುಂಬರುವ 11 ತಿಂಗಳಿನಲ್ಲಿ ಸಲೀಸಾಗಿ ಸಂಗ್ರಹಿಸ ಬಹುದು ಎನ್ನುವುದು ಸಿಬ್ಬಂದಿಯ ಲೆಕ್ಕಾಚಾರವಾಗಿದೆ.

‘ಈ ವರ್ಷ ನಿರ್ಧರಿಸಲಾಗಿರುವ ₹35 ಕೋಟಿ ಸಂಗ್ರಹಿಸಲು ಒತ್ತು ನೀಡಲಾಗುತ್ತಿದೆ. ಇದರ ಜೊತೆಗೆ ಹಿಂದಿನ ವರ್ಷಗಳ ಬಾಕಿ ಮೊತ್ತವನ್ನು ಕೂಡ ಸಂಗ್ರಹಿಸಲು ಕ್ರಮ ಕೈಗೊಳ್ಳ ಲಾಗುತ್ತಿದೆ. ತೆರಿಗೆ ಉಳಿಸಿ ಕೊಂಡಿರು ವವರಿಗೆ ನೋಟಿಸ್‌ ನೀಡಲಾಗುವುದು. ಅಲ್ಲದೇ, ದಂಡವನ್ನು ಕೂಡ ವಿಧಿಸ ಲಾಗುವುದು’ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ಹೇಳಿದರು.

ಆ್ಯಪ್‌ ತಯಾರಿಸಲು ಕ್ರಮ: ಬಹುತೇಕ ಈಗ ಎಲ್ಲರೂ ಮೊಬೈಲ್‌ ಬಳಸುತ್ತಿ ದ್ದಾರೆ. ಮೊಬೈಲ್‌ ಮೂಲಕ ಹಣ ಪಾವತಿ ಮಾಡುತ್ತಿದ್ದಾರೆ. ಇದನ್ನು ಬಳಸಿ, ತೆರಿಗೆ ಸಂಗ್ರಹಿಸಲು ಯೋಚಿಸ ಲಾಗಿದೆ. ಇದಕ್ಕಾಗಿ ಗ್ರಾಹಕರಿಗೆ ಸಲೀಸಾ ಗುವಂತಹ ಮೊಬೈಲ್‌ ಆ್ಯಪ್‌ ತಯಾರಿ ಸುವ ಬಗ್ಗೆ ಚಿಂತನೆಗಳು ನಡೆದಿವೆ.

ಪಾಲಿಕೆಯ ಬ್ಯಾಂಕ್‌ ಖಾತೆಯನ್ನು ಈ ಆ್ಯಪ್‌ಗೆ ಜೋಡಿಸಲಾಗುವುದು. ಗ್ರಾಹಕರು ಮೊಬೈಲ್‌ ಬಳಸಿ ತಮ್ಮ ಖಾತೆಯಿಂದ ಹಣ ಸಂದಾಯ (ಆರ್‌ಟಿಜಿಎಸ್‌ ಮೂಲಕ) ಮಾಡ ಬಹುದು. ಇದು ಗ್ರಾಹಕರಿಗೆ ಹಾಗೂ ಪಾಲಿಕೆ ಇಬ್ಬರಿಗೂ ಅನುಕೂಲ. ಆ್ಯಪ್‌ ತಯಾರಿಸುವ ಕೆಲವು ಕಂಪೆನಿಗಳನ್ನು ಸಂಪರ್ಕಿಸಲಾಗಿದೆ. ಸದ್ಯದಲ್ಲಿಯೇ ಇದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಯುಕ್ತರು ಹೇಳಿದರು.

* *

ಪಾಲಿಕೆ ಸಿಬ್ಬಂದಿಯವರ ಪ್ರಯತ್ನ ಹಾಗೂ ನಾಗರಿಕರ ಜಾಗೃತಿಯ ಫಲವಾಗಿ ಇದು ಸಾಧ್ಯವಾಗಿದೆ. ರಜಾ ದಿನಗಳಲ್ಲೂ ಸಿಬ್ಬಂದಿ ಕಾರ್ಯನಿರ್ವಹಿಸಿದ್ದರು
ಶಶಿಧರ ಕುರೇರ ಮಹಾನಗರ ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.