ADVERTISEMENT

ನೋಟು ರದ್ದತಿ: ಕಾಂಗ್ರೆಸ್ಸಿನಿಂದ ಕರಾಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 5:13 IST
Last Updated 9 ನವೆಂಬರ್ 2017, 5:13 IST

ಚಿಕ್ಕೋಡಿ: ಕೇಂದ್ರ ಸರ್ಕಾರ ಕಳೆದ ವರ್ಷ ₹500 ಮತ್ತು ₹1000 ಮುಖಬೆಲೆಯ ಹಳೆಯ ನೋಟುಗಳನ್ನು ರದ್ದುಗೊಳಿಸಿ ಒಂದು ವರ್ಷವಾದ ಪ್ರಯುಕ್ತ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಕಮಿಟಿ ಬುಧವಾರ ಕರಾಳ ದಿನವನ್ನಾಗಿ ಆಚರಿಸಿ ನೋಟು ರದ್ದತಿಯಿಂದ ಉಂಟಾಗಿರುವ ದುಷ್ಪರಿಣಾಮಗಳ ಕುರಿತು ಬುಧವಾರ ಇಲ್ಲಿನ ಉಪ ವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಸಲ್ಲಿಸಿತು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಪ್ಪು ಹಣ ಪತ್ತೆ, ಭಯೋತ್ಪಾದನೆ ಹತ್ತಿಕ್ಕುವ ಉದ್ದೇಶದಿಂದ ಕಳೆದ ವರ್ಷ ನ.8ರಂದು ನೋಟು ರದ್ದತಿ ಮಾಡಿತು. ಆದರೆ, ಇದರಿಂದ ಮಧ್ಯಮ ಮತ್ತು ಬಡ ವರ್ಗದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಬ್ಯಾಂಕ್‌ನಲ್ಲಿದ್ದ ತಮ್ಮದೇ ಹಣವನ್ನು ಪಡೆದುಕೊಳ್ಳಲೂ ಪರದಾಡುವಂತಾಗಿದೆ. ನೋಟು ರದ್ದತಿ ಕ್ರಮದಿಂದ ಬೇಸತ್ತ 115 ಜನ ಮೃತಪಟ್ಟಿದ್ದಾರೆ’ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

‘ನೋಟು ರದ್ದತಿಯಿಂದಾಗಿ ದೇಶದ ಆರ್ಥಿಕ ಬೆಳವಣಿಗೆಯೂ ಕುಂಠಿತಗೊಂಡಿದೆ. ಕೈಗಾರಿಕೆ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಪ್ರಗತಿಯೂ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ಖಂಡಿಸಿ ಕಾಂಗ್ರೆಸ್‌ ಪಕ್ಷ ಕರಾಳ ದಿನವನ್ನಾಗಿ ಆಚರಿಸಿದೆ’ ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹೇಳಿದರು.

ADVERTISEMENT

ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ವೀರಕುಮಾರ ಪಾಟೀಲ, ಕಂದಾಯ ಇಲಾಖೆ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಯುವ ಮುಖಂಡ ಉತ್ತಮ್ ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ರಾಜೇಂದ್ರ ಪವಾರ, ಸತೀಶ ಕುಲಕರ್ಣಿ, ಪ್ರದೀಪ ಜಾಧವ, ಸಾಬಿರ್ ಜಮಾದಾರ, ಶಾಮ ರೇವಡೆ, ಮುದ್ದುಸರ್ ಜಮಾದಾರ್, ಎಚ್‌.ಎಸ್‌.ನಸಲಾಪುರೆ, ಮೆಹರೋಜ್ ಖಾನ್, ಅನಿಲ ಪಾಟೀಲ, ರಾಮಾ ಮಾನೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.