ADVERTISEMENT

ನ್ಯಾಯಬೆಲೆ ಅಂಗಡಿಯವರ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:51 IST
Last Updated 20 ಮೇ 2017, 5:51 IST

ಬೆಳಗಾವಿ:ಕಮಿಷನ್‌ ನೀಡುವ ಬದಲಿಗೆ ಮಾಲೀಕರಿಗೆ ₹ 10,000 ಹಾಗೂ ಚಾಲಕರಿಗೆ ₹ 7,000 ಗೌರವಧನ ನಿಗದಿಪಡಿಸಬೇಕು ಎಂದು ಅಗ್ರಹಿಸಿ ಜಿಲ್ಲಾ ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

‘ಮಾಲೀಕರ ಮೇಲೆ ನಿತ್ಯವೂ ಒಂದಿಲ್ಲೊಂದು ಶೋಷಣೆ ನಡೆಯುತ್ತಿದೆ. ಸರ್ಕಾರ ಪದೇ ಪದೇ ನಿಯಮಗಳನ್ನು ಬದಲಿಸುತ್ತಿರುವುದು ಉರುಳಾಗಿ ಪರಿಣಮಿಸಿದೆ. ಬಡವರಿಗೆ ಉಚಿತವಾಗಿ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಸಮರ್ಪಕವಾಗಿ ಜಾರಿಗೊಳ್ಳಲು ಶ್ರಮಿಸುತ್ತಿದ್ದೇವೆ. ಆದರೆ, ದೂರು ಬಂದ ಕೂಡಲೇ ಪೂರ್ವಾಪರ ಪರಿಶೀಲಿಸದೆ ಕೂಡಲೇ ನೋಟಿಸ್‌ ಜಾರಿಗೊಳಿಸಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ.

ಪಡಿತರವಲ್ಲದೇ ಬೇರೆ ವಸ್ತುಗಳನ್ನು ಮಾರುವುದಕ್ಕೆ ಚೀಟಿದಾರರ ಮೇಲೆ ನಾವು ಒತ್ತಡ ಹೇರುತ್ತಿಲ್ಲ. ಆದರೂ ಆರೋಪ ಮಾಡಲಾಗುತ್ತಿದೆ’ ಎಂದು ಸಂಘದವರು ದೂರಿದರು. ‘ಕೆಲ ಸಂಘಟನೆಗಳವರು ನಮ್ಮ ಮೇಲೆ ಇಲ್ಲಸಲ್ಲದ ದೂರು ನೀಡಿ, ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ’ ಎಂದರು.

ADVERTISEMENT

‘ಹಿಂದಿನಂತೆ ಕ್ವಿಂಟಲ್‌ ಅಕ್ಕಿಗೆ ಒಂದು ಕೆ.ಜಿ.ಯನ್ನು ಹೆಚ್ಚುವರಿಯಾಗಿ ನೀಡುವುದನ್ನು ಪುನಾರಂಭಿಸಬೇಕು. ಕಂಪ್ಯೂಟರ್‌ ಹೊಂದಬೇಕು, ಅಂತರ್ಜಾಲ ಸಂಪರ್ಕ ಪಡೆಯಬೇಕು ಎನ್ನುವುದನ್ನು ಕಡ್ಡಾಯ ಮಾಡಬಾರದು. ಏಪ್ರಿಲ್‌ ಹಾಗೂ ಮೇ ತಿಂಗಳ ಕಮಿಷನ್ ಅನ್ನು ನ್ಯಾಯಬೆಲೆ ಅಂಗಡಿ ಮಾಲೀಕರ ಖಾತೆಗೆ ಕೂಡಲೇ ಜಮಾ ಮಾಡಬೇಕು.

ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ ಕೂಪನ್‌ ಪದ್ಧತಿಯನ್ನು ಕೈಬಿಡಬೇಕು. ಅಂಗಡಿ ಬಾಡಿಗೆ, ವಿದ್ಯುತ್‌ ಬಿಲ್‌ ಮೊದಲಾದ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಅಂಗಡಿಗಳಲ್ಲಿ ಕೆಲಸ ಮಾಡುವವರಿಗೆ ರಕ್ಷಣೆ ಒದಗಿಸಬೇಕು. ಪಡಿತರೇತರ ವಸ್ತುಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

‘ಬೇಡಿಕೆ ಈಡೇರಿಕೆಗೆ ಕೂಡಲೇ ಸ್ಪಂದಿಸಬೇಕು. ಇಲ್ಲವಾದಲ್ಲಿ ಜೂನ್‌ 1ರಿಂದ ಪಡಿತರ ಎತ್ತುವಳಿ ಮಾಡದೇ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.  ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ತಳವಾರ, ಪದಾಧಿಕಾರಿಗಳಾದ ದಿನೇಶ ಬಾಗಡೆ, ಮಾರುತಿರಾವ ಅಂಬೋಳಕರ, ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.