ADVERTISEMENT

‘ಪರಿಶ್ರಮದಿಂದ ಮಾತ್ರವೇ ಯಶಸ್ಸು’

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:30 IST
Last Updated 15 ಮೇ 2017, 7:30 IST

ಬೆಳಗಾವಿ: ‘ಯಶಸ್ಸು ಸಾಧಿಸಲು ಅಗತ್ಯವಾದ ಪರಿಶ್ರಮಕ್ಕೆ ಪರ್ಯಾಯವಿಲ್ಲ’ ಎಂದು ನಾಗನೂರ ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಹೇಳಿದರು. ಇಲ್ಲಿನ ಎಸ್‌ಜಿಬಿಐಟಿ ಕಾಲೇಜಿನಲ್ಲಿ ನಡೆದ ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ (‘ಅಂತರಿಕ್ಷ -2017’)  ಮಾತನಾಡಿದರು.

‘ಸತತ ಪರಿಶ್ರಮದಿಂದ ಮಾತ್ರ ವ್ಯಕ್ತಿಯು ಉನ್ನತಮಟ್ಟಕ್ಕೆ ಏರಲು ಸಾಧ್ಯ. ಪ್ರತಿಯೊಬ್ಬರೂ ಪರಿಶ್ರಮಿಗಳಾಗಿ ಕುಟುಂಬಕ್ಕೆ, ಕಲಿತ ವಿದ್ಯಾಸಂಸ್ಥೆಗಳಿಗೆ ಹಾಗೂ ದೇಶಕ್ಕೆ ಕೀರ್ತಿ ತರಬೇಕು’ ಎಂದರು.

ಬೆಂಗಳೂರಿನ ಬಿಎಚ್‌ಇಎಲ್‌ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ರಾಮಚಂದರ್ ಎನ್. ಬಗದಾಳಕರ, ‘ಉನ್ನತ ಶಿಕ್ಷಣ ಪಡೆಯುವುದರೊಂದಿಗೆ ವಿದ್ಯಾರ್ಥಿಗಳು ಕೌಶಲವನ್ನೂ ರೂಢಿಸಿಕೊಳ್ಳಬೇಕು. ಸತತ ಅಧ್ಯಯನ ಮತ್ತು ಸತ್ಯ ಸಂದತೆಗಳೆರಡು ಉತ್ತಮ ಕೆಲಸ ದೊರಕಿಸಿಕೊಳ್ಳಲು ಸಹಾಯಕ ವಾಗಬಲ್ಲವು. ಉತ್ತಮ ಸಂವಹನ ಮತ್ತು ತಾಂತ್ರಿಕ ಕೌಶಲದಿಂದ ಯಶಸ್ಸು ಸಾಧಿಸಬಹುದು. ಧನಾತ್ಮಕ ವಿಚಾರ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಸಂಪನ್ಮೂಲ ವ್ಯಕ್ತಿಯಾಗಿದ್ದ ಪಿ.ಬಿ. ಕೋಟೂರ ಮಾತನಾಡಿ, ‘ಕೌಶಲ ಕಲಿಸದ ಶಿಕ್ಷಣದಿಂದ ಏನೂ ಪ್ರಯೋಜನವಾಗದು. ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ಕೌಶಲ ರೂಢಿಸಿಕೊಳ್ಳಲು ಪ್ರಯತ್ನಿಸಬೇಕು. ಸಾಮಾಜಿಕ ಜಾಲತಾಣಗಳನ್ನು ವಿವೇಚನಾಯುಕ್ತವಾಗಿ ಬಳಸಬೇಕು’ ಎಂದು ತಿಳಿಸಿದರು.

ಕಾರ್ಯಕಾರಿ ಮಂಡಳಿ ಅಧ್ಯಕ್ಷ ಶಿವಕುಮಾರ ಸಂಬರಗಿಮಠ ಇದ್ದರು. ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಸಾಲಿಮಠ ಸ್ವಾಗತಿಸಿದರು. ಮೆಕಾನಿಕಲ್‌ ವಿಭಾಗದ ಮುಖ್ಯಸ್ಥ ಯು.ಸಿ. ಕಪಾಲೆ ವಾರ್ಷಿಕ ವರದಿ ಮಂಡಿಸಿದರು. ಡಿ.ಕೆ. ವೀರಣ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.