ADVERTISEMENT

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಮೂರ್ತಿ ನಿಷೇಧ

ಕೊಣ್ಣೂರ ಪುರಸಭೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೆರೆಗೆ ನಡೆದ ಸಭೆಯಲ್ಲಿ ಕಾನೂನುಕ್ರಮಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 10:46 IST
Last Updated 18 ಫೆಬ್ರುವರಿ 2017, 10:46 IST
ಗೋಕಾಕ ತಾಲ್ಲೂಕಿನ ಕೊಣ್ಣೂರ ಪುರಸಭೆ ಕಾರ್ಯಾಲಯದ ಸಭಾ ಭವನದಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ನಡೆದ ಗಣಪತಿ ಮೂರ್ತಿ ತಯಾರಕರ ಸಭೆಯನ್ನು ಉದ್ದೇಶಿಸಿ ಮುಖ್ಯಾಧಿಕಾರಿ ಎಸ್.ಎಂ.ಹಿರೇಮಠ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಮಾಲಾ ಬೂದಿಗೊಪ್ಪ, ಮಂಜುನಾಥ ಗಜಾಕೋಶ ಇದ್ದರು
ಗೋಕಾಕ ತಾಲ್ಲೂಕಿನ ಕೊಣ್ಣೂರ ಪುರಸಭೆ ಕಾರ್ಯಾಲಯದ ಸಭಾ ಭವನದಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ನಡೆದ ಗಣಪತಿ ಮೂರ್ತಿ ತಯಾರಕರ ಸಭೆಯನ್ನು ಉದ್ದೇಶಿಸಿ ಮುಖ್ಯಾಧಿಕಾರಿ ಎಸ್.ಎಂ.ಹಿರೇಮಠ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಮಾಲಾ ಬೂದಿಗೊಪ್ಪ, ಮಂಜುನಾಥ ಗಜಾಕೋಶ ಇದ್ದರು   
ಗೋಕಾಕ: ‘ರಾಸಾಯನಿಕ ಮಿಶ್ರಿತ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್‌ ಗಣಪತಿಗಳನ್ನು ತಯಾರಿಸಬಾರದು. ಒಂದು ವೇಳೆ ನಿಯಮಬಾಹಿರವಾಗಿ ತಯಾರಿಸಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲಾಗುವುದು’ ಎಂದು ಪುರಸಭೆಯ ಮುಖ್ಯಾಧಿಕಾರಿ ಎಸ್.ಎಂ. ಹಿರೇಮಠ ಎಚ್ಚರಿಕೆ ನೀಡಿದರು.
 
ತಾಲ್ಲೂಕಿನ ಕೊಣ್ಣೂರ ಪುರಸಭೆ ಕಾರ್ಯಾಲಯದ ಸಭಾ ಭವನದಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕರೆಯಲಾಗಿದ್ದ ಗಣಪತಿ ಮೂರ್ತಿ ತಯಾರಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
 
‘ಸಾರ್ವಜನಿಕರಿಂದ ಪರಿಸರಕ್ಕೆ ಹಾನಿ ಆಗುವ ರೀತಿಯ ಗಣೇಶನ ಮೂರ್ತಿಗಳಿಗೆ ಬೇಡಿಕೆ ಬಂದಲ್ಲಿ ನೀವು ನಿರಾಕರಿಸಬೇಕು. ಆಗ ಸಾರ್ವಜನಿಕರು ಮಣ್ಣಿನ ಗಣಪತಿಯನ್ನೇ ತೆಗೆದುಕೊಳ್ಳುತ್ತಾರೆ. ಪರಿಸರ ಪ್ರೇಮಿಗಳಾದ ಗಣಪತಿ ಮೂರ್ತಿಕಾರರು ಕುಡಿಯುವ ನೀರಿನ ಸಮಸ್ಯೆಯನ್ನು ಅರಿತು ಪ್ಲಾಸ್ಟರ್ ಆಫ್ ಪ್ಯಾರಿಸ್‌ ಗಣಪತಿ ತಯಾರಿಸಬಾರದು. ಈ ವರ್ಷದಿಂದ ಗಣಪತಿ ಮೂರ್ತಿಗಳನ್ನು ವಿಸರ್ಜಿಸಲು ಸದಸ್ಯರ ಜೊತೆ ಚರ್ಚಿಸಿ ಕೆಲವು ಸ್ಥಳಗಳಲ್ಲಿ ಗಣಪತಿ ವಿಸರ್ಜನೆಗೆ ಹೊಂಡಗಳನ್ನು ನಿರ್ಮಿಸಲಾಗುತ್ತದೆ. ಇದರಿಂದ ಸಾರ್ವಜನಿಕರಿಗೂ ಅನುಕೂಲ’ ಎಂದು ಎಸ್.ಎಂ . ಹಿರೇಮಠ ಹೇಳಿದರು.
 
‘ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣ ಬಳಸಿ ಸಿದ್ಧಪಡಿಸಿದ ಗಣೇಶ ಹಾಗೂ ಇನ್ನಿತರ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜನೆ ಮಾಡಿದಲ್ಲಿ ಕುಡಿಯುವ ನೀರು ಕಲ್ಮಶಗೊಳ್ಳುತ್ತದೆ. ಅಂಥ ನೀರನ್ನು ಮತ್ತೊಂದು ಬಗೆಯ ರಸಾಯನಿಕ ಪದಾರ್ಥ ಬಳಸಿ ನೀರನ್ನು ಶುದ್ಧೀಕರಿಸಿ ಸಾರ್ವಜನಿಕರಿಗೆ ಪೂರೈಸಲಾಗುತ್ತದೆ. ಇಂತಹ ನೀರಿನ ಸೇವನೆಯಿಂದ ತ್ವಚೆ ಮತ್ತು ಕ್ಯಾನ್ಸರ್‌ನಂತಹ ವಾಸಿಯಾಗದ ಕಾಯಿಲೆಗಳಿಗೆ  ತುತ್ತಾಗುವ ಸಾಧ್ಯತೆ ಹೆಚ್ಚಿದೆ’ ಎಂದು ಪರಿಸರ ಎಂಜಿನಿಯರ್‌ ಮಂಜುನಾಥ ಗಜಾಕೋಶ ಹೇಳಿದರು.
 
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಲಾಗುತ್ತಿರುವ ಗಣೇಶ ಮೂರ್ತಿಗಳ ಬಗ್ಗೆ ಮತ್ತು ಇಲ್ಲಿ ಆಗುತ್ತಿರುವ ಪರಿಸರ ಮಾಲಿನ್ಯ ಬಗ್ಗೆ ಅರಿವು ಮೂಡಿಸಲು ಸಭೆ ಆಯೋಜಿಸಲಾಗಿದೆ ಎಂದರು.
 
ಕೊಣ್ಣೂರ ಪಟ್ಟಣದ ಗಣೇಶ ಮೂರ್ತಿ ತಯಾರಕರ ಸಂಘದ ಅಧ್ಯಕ್ಷ ಚನ್ನಬಸು ಅವರು ಮಾತನಾಡಿ, ‘ನಾವು ಖುದ್ದಾಗಿ ಯಾರೂ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮತ್ತು ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಬಳಸಿ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿಲ್ಲ. ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನಷ್ಟೇ ತಯಾರಿಸುತ್ತವೆ’ ಎಂದು ಸ್ಪಷ್ಟ ಪಡಿಸಿದರು. 
 
ಮೂರ್ತಿ ತಯಾರಕ ಮಲ್ಲಿಕಾರ್ಜುನ ಕುಂಬಾರ ಮಾತನಾಡಿ ‘ನಮಗೆ ಅರಿವು ಮೂಡಿಸಿದ ಹಾಗೆಯೇ ಸಾರ್ವಜನಿಕರಿಗೆ ಹಾಗೂ ಗಣೇಶ ಮಂಡಳಿಯವರಿಗೂ ಅರಿವು ಮೂಡಿಸಬೇಕು’ ಎಂದು ವಿನಂತಿಸಿಕೊಂಡರು. ಸಂಘ ಸಂಸ್ಥೆಗಳು, ಯುವಕ ಮಂಡಳ ಹಾಗೂ ಸಾರ್ವಜನಿಕರಿಗೂ ಸಹ ಈ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. 
 
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಮಾಲಾ ಬೂದಿಗೊಪ್ಪ, ಉಪಾಧ್ಯಕ್ಷ ಮಾರುತಿ ಪೂಜೇರಿ, ಸದಸ್ಯರಾದ ವಿನೋದ ಕರನಿಂಗ, ಸಿಬ್ಬಂದಿಗಳಾದ ಆರ್.ಕೆ. ಭವಾನಿ, ಬಿ.ಎಸ್.ದೊಡ್ಡಗೌಡರ ಹಾಗೂ ಗಣಪತಿ ಮೂರ್ತಿತಯಾರಕರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.