ADVERTISEMENT

ಬದನೆ ಸಸಿ ಕಳಪೆ: ಪರಿಹಾರಕ್ಕೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:54 IST
Last Updated 20 ಮೇ 2017, 5:54 IST

ಬೆಳಗಾವಿ: ಕಳಪೆ ಬದನೆ ಸಸಿಗಳನ್ನು ವಿತರಿಸಿ, ರೈತರಿಗೆ ನಷ್ಟ ಉಂಟು ಮಾಡಿರುವ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನರ್ಸರಿಯವರು ಮುಳ್ಳು ಬದನೆ ಎಂದು ಮಾಮೂಲಿ ಬದನೆ ಸಸಿ ಕೊಟ್ಟಿದ್ದಾರೆ. ಈ ಮೂಲಕ ರೈತರನ್ನು ವಂಚಿಸಿದ್ದಾರೆ. ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹುಲಿಕಟ್ಟಿ, ಯಡ್ರಾವಿ, ಮುನವಳ್ಳಿ ಗ್ರಾಮದ ರೈತರಿಗೆ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿಸಿದರು.

ಈ ಮೂರು ಗ್ರಾಮಗಳಲ್ಲಿ ಕಳಪೆ ಬೀಜದಿಂದ ₹ 20 ಲಕ್ಷದಷ್ಟು ನಷ್ಟ ಉಂಟಾಗಿದೆ. ಬದನೆ ಸಸಿ ಕೊಡುವಾಗ ಮುನವಳ್ಳಿ ಗ್ರಾಮದ ನರ್ಸರಿಯ ಮಾಲೀಕ, ಇದರಿಂದ ಉತ್ತಮ ಇಳುವರಿ ಬರುತ್ತದೆ; ಲಾಭವಶಗುತ್ತದೆ ಎಂದಿದ್ದರು. ಆದರೆ, ಸರಿಯಾಗಿ ಫಸಲು ಬಂದಿಲ್ಲ. ಸಣ್ಣ ಕಾಯಿಗಳೂ ಕೊಳೆತಂತೆ ಕಾಣುತ್ತಿವೆ. ಇಂತಹ ಸಸಿ ಹಾಗೂ ಕಾಯಿಗಳಿಂದ ಪ್ರಯೋಜನವಿಲ್ಲ ಎಂದು ದೂರಿದರು.

ADVERTISEMENT

ನರ್ಸರಿಯವರನ್ನು ಕೇಳಿದರೆ ಬೀಜ ಕಂಪೆನಿಯವರ ಮೇಲೆ ಹೇಳುತ್ತಿದ್ದಾರೆ. ಕಂಪೆನಿಯವರು ನರ್ಸರಿಯವರ ಕಡೆ ಕೈ ತೋರಿಸುತ್ತಿದ್ದಾರೆ. ಈ ಕುರಿತು ಸವದತ್ತಿ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ. 

ಜಿಲ್ಲಾಡಳಿತ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಂದ ಪಾರದರ್ಶಕವಾಗಿ ತನಿಖೆ ನಡೆಸಬೇಕು. ನರ್ಸರಿ ಹಾಗೂ ಕಂಪೆನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.

ರೈತರು ಸತತ ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಹೀಗಿರುವಾಗ ಕಳಪೆ ಸಸಿಗಳನ್ನು ನೀಡಿ ರೈತರ ಗಾಯದ ಮೇಲೆ ಬರೆ ಎಳೆಯಲಾಗಿದೆ ಎಂದು ಹೇಳಿದರು.
ಬೆಳೆ ಪರಿಹಾರವನ್ನು ಸಮರ್ಪಕವಾಗಿ ವಿತರಿಸಬೇಕು. ಉತ್ತಮ ಗುಣಮಟ್ಟದ ಬಿತ್ತನೆಬೀಜ ಹಾಗೂ ರಸಗೊಬ್ಬರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಮುಖಂಡರಾದ ಬಸವರಾಜ ಮಳಲಿ, ರಾಜೇಂದ್ರ ನಾಯಕ, ಶಿವನಪ್ಪ ಪೂಜಾರಿ, ಶ್ರೀಶೈಲ ಅಂಗಡಿ, ಬಸವರಾಜ ಬಿಜೂರು, ರೈತರಾದ ಫಕೀರಪ್ಪ ಮರವರಗಿ, ಅರ್ಜುನ ಮಾಸನವರ, ಲಕ್ಷ್ಮಣ ಕೊಪ್ಪದ, ಗಿರಿಜಾ ಕರಿಜಾಂವಕರ, ಸಿದ್ದವ್ವ ಪೂಜೇರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.