ADVERTISEMENT

ಬಹುಕೋಟಿ ವಂಚನೆ ಪ್ರಕರಣ: ಸಿಐಡಿಗೆ?

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 5:13 IST
Last Updated 22 ಸೆಪ್ಟೆಂಬರ್ 2017, 5:13 IST
ಪೊಲೀಸರು ಆನಂದ ಅಪ್ಪುಗೋಳ (ಗಡ್ಡದಾರಿ) ಅವರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಸ್‌ ಕರೆದೊಯ್ದರು
ಪೊಲೀಸರು ಆನಂದ ಅಪ್ಪುಗೋಳ (ಗಡ್ಡದಾರಿ) ಅವರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಸ್‌ ಕರೆದೊಯ್ದರು   

ಬೆಳಗಾವಿ: ‘ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಅಧ್ಯಕ್ಷರಾಗಿರುವ ಇಲ್ಲಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅರ್ಬನ್‌ ಕೋ–ಆಪ್‌ ಕ್ರೆಡಿಟ್‌ ಸೊಸೈಟಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ವಂಚನೆ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಸಿಐಡಿಗೆ ವಹಿಸಲು ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಡಿಸಿಪಿ ಅಮರನಾಥರೆಡ್ಡಿ ತಿಳಿಸಿದರು.

‘ಪ್ರಜಾವಾಣಿ’ ಜತೆ ಗುರುವಾರ ಮಾತನಾಡಿದ ಅವರು, ‘ಬಹುಕೋಟಿ ವಂಚನೆಯ ಪ್ರಕರಣ ಇದಾಗಿದೆ. ಸೊಸೈಟಿ ಅಧ್ಯಕ್ಷರು ಹಣವನ್ನು ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನುವುದಕ್ಕೆ ಸಂಬಂಧಿಸಿದಂತೆ ನೈಜ ದಾಖಲೆಗಳು ಬೇಕಾಗುತ್ತವೆ. ಹೀಗಾಗಿ, ಮತ್ತೆ 4 ದಿನಗಳವರೆಗೆ ಅವರನ್ನು ಪೊಲೀಸರ ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದರು.

‘ಸೊಸೈಟಿಯವರು ಗ್ರಾಹಕರಿಗೆ ₹ 232 ಕೋಟಿ ವಂಚಿಸಿದ್ದಾರೆ ಎನ್ನುವ ದೂರು ದಾಖಲಾಗಿದೆ. 16 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಅಧ್ಯಕ್ಷರನ್ನು ಬಂಧಿಸಲಾಗಿದೆ. ಒಬ್ಬ ನಿರ್ದೇಶಕರು ಶರಣಾಗಿದ್ದಾರೆ. ಉಳಿದ 14 ಮಂದಿ ತಲೆಮರೆಸಿಕೊಂಡಿದ್ದಾರೆ. ಅವರನ್ನು ಶೀಘ್ರವೇ ಬಂಧಿಸಲಾಗುವುದು. ಇವರಷ್ಟೇ ಅಲ್ಲದೇ, ಇತರರನ್ನೂ ಬಂಧಿಸುವ ಸಾಧ್ಯತೆ ಇದೆ’ ಎಂದರು.

ADVERTISEMENT

‘ನಾಲ್ಕು ದಿನಗಳವರೆಗೆ ಅಪ್ಪುಗೋಳ ಅವರನ್ನು ಪೊಲೀಸ್‌ ವಶಕ್ಕೆ ಪಡೆಯಲಾಗಿತ್ತು. ಅವರು ತನಿಖೆಗೆ ಸಹಕಾರ ನೀಡುತ್ತಿಲ್ಲ. ಹೀಗಾಗಿ, ಸಿಐಡಿಯತ್ತ ಯೋಚಿಸುತ್ತಿದ್ದೇವೆ’ ಎನ್ನುತ್ತಾರೆ ಅವರು. ಆದರೆ, ಇದನ್ನು ಆಯುಕ್ತ ಟಿ.ಜಿ. ಕೃಷ್ಣಭಟ್‌ ನಿರಾಕರಿಸಿದರು. ‘ಇನ್ನೂ ತನಿಖೆ ನಡೆಯುತ್ತಿದೆ.

ಮುಖ್ಯ ಆರೋಪಿಯನ್ನು ಮತ್ತೆ 4 ದಿನಗಳವರೆಗೆ ವಶಕ್ಕೆ ಪಡೆದಿದ್ದೇವೆ. ಪ್ರಕರಣವನ್ನು ಸಿಐಡಿಗೆ ವಹಿಸುವ ವಿಚಾರ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಮುಂದೆ ಇಲ್ಲ; ಮುಂದೆ ಏನಾಗುತ್ತದೆಯೋ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.

ನ್ಯಾಯಾಲಯಕ್ಕೆ ಹಾಜರು: ನಾಲ್ಕು ದಿನಗಳಿಂದ ಪೊಲೀಸ್‌ ವಶದಲ್ಲಿದ್ದ ಅಪ್ಪುಗೋಳ ಅವರನ್ನು 3ನೇ ಜೆಎಂಎಫ್ ನ್ಯಾಯಾಲಯದ ಮುಂದೆ ಗುರುವಾರ ಹಾಜರುಪಡಿಸಲಾಯಿತು. ವಿಚಾರಣೆಗಾಗಿ ಮತ್ತೆ 4 ದಿನ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ.

ಗ್ರಾಹಕರು ಠೇವಣಿ ಇಟ್ಟಿದ್ದ ಹಣವನ್ನು ಅಪ್ಪುಗೋಳ ಭೂವ್ಯವಹಾರದಲ್ಲಿ ತೊಡಗಿಸಿದ್ದಾರೆ ಎನ್ನಲಾಗಿದೆ. ಗ್ರಾಹಕರ ಹಣವನ್ನು ಹೀಗೆ ಭೂ ವ್ಯವಹಾರದಲ್ಲಿ ತೊಡಗಿಸಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂಬ ಬಗ್ಗೆ ಸಹಕಾರ ಇಲಾಖೆ ಉಪನಿಬಂಧಕರಿಂದ ಪೊಲೀಸರು ಮಾಹಿತಿ ಕೇಳಿದ್ದಾರೆ ಎಂದು ತಿಳಿದುಬಂದಿದೆ. ಅಪರಾಧ ವಿಭಾಗದ ಎಸಿಪಿ ಕಲ್ಯಾಣಶೆಟ್ಟಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಈ ವೇಳೆ ಗ್ರಾಹಕರು ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಅಪ್ಪುಗೋಳ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿದಂತೆ ಹಣ ಕಳೆದುಕೊಂಡು ಕಂಗಾಲಾಗಿರುವ ಗ್ರಾಹಕರು ಅವರನ್ನು ಮುತ್ತಿಗೆ ಹಾಕಲು ಯತ್ನಿಸಿದರು. ನ್ಯಾಯಾಲಯ ಆವರಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಸಿಸಿಬಿ ಇನ್‌ಸ್ಪೆಕ್ಟರ್‌ ಬಿ.ಆರ್. ಗಡ್ಡೇಕರ, ಎಪಿಎಂಸಿ ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ಇದ್ದರು. ಸೊಸೈಟಿಯ ಮುಖ್ಯ ಶಾಖೆಯಲ್ಲಿ ಪಡೆದಿದ್ದ ಕೆಲವು ದಾಖಲೆಗಳನ್ನು ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.