ADVERTISEMENT

‘ಭ್ರಷ್ಟಾಚಾರದಲ್ಲಿ ತೊಡಗಿರುವ ಸಿ.ಎಂ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 4:23 IST
Last Updated 19 ನವೆಂಬರ್ 2017, 4:23 IST

ಸವದತ್ತಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಜನರಿಗೆ ಅನುಕೂಲವಿಲ್ಲದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಬಿಜೆಪಿ ಆಯೋಜಿಸಿದ್ದ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ನಿಮ್ಮ ಬೆಂಬಲದಿಂದ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗಳಿಸಿ, ಮತ್ತೆ ರಾಜ್ಯದಲ್ಲಿ ಸ್ವಚ್ಛ ಹಾಗೂ ಪ್ರಾಮಾಣಿಕ ಆಡಳಿತ ನಡೆಸಲಿದೆ’ ಎಂದರು.

ADVERTISEMENT

‘ನಮ್ಮ ಆಡಳಿತದಲ್ಲಿ ಜಾರಿಗೆ ತಂದ ಭಾಗ್ಯಲಕ್ಷ್ಮಿ, ಬೈಸಿಕಲ್‌ ವಿತರಣೆ, ಸುವರ್ಣಗ್ರಾಮ, ರೈತರಿಗೆ ಉಚಿತ ವಿದ್ಯುತ್‌, ಸಾಲ ಮನ್ನಾ, ದೇವಸ್ಥಾನಗಳ ಜೀರ್ಣೋದ್ಧಾರದಂತಹ ಜನಪರ ಯೋಜನೆಗಳನ್ನು ಸಿದ್ದರಾಮಯ್ಯ ಟೀಕಿಸುತ್ತಿದ್ದಾರೆ’ ಎಂದರು.

ಕೇಂದ್ರ ಸಚಿವ ಅನಂತಕುಮಾರ ಮಾತನಾಡಿ, ‘ನಾಲ್ಕೂವರೆ ವರ್ಷದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರವಾಗಿದ್ದಾರೆ. ತಮ್ಮ ಜತೆ ಇಡೀ ಸರ್ಕಾರ ನಿದ್ರಾವಸ್ಥೆಯಲ್ಲಿ ಇದೆ ಎಂದು ಅವರೇ ಹೇಳಿದ್ದಾರೆ. ಜನರ ಅಭಿವೃದ್ಧಿಗಾಗಿ ಈಗ ಕನಸು ಕಾಣುತ್ತಿದ್ದಾರೆ’ ಎಂದು ಟೀಕಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ‘ದೇಶದ ಸಮಗ್ರ ಅಭಿವೃದ್ಧಿಗೆ, ಸೈನಿಕರಿಗೆ ಬಲ ತುಂಬು ವುದಕ್ಕೆ ಪ್ರಧಾನಿ ಶ್ರಮಿಸುತ್ತಿದ್ದಾರೆ. ರಾಜ್ಯ ಸರ್ಕಾರವು ದೀನ ದಯಾಳ ಉಪಾಧ್ಯಾಯ ಯೋಜನೆ ಅನುಷ್ಠಾನ ಗೊಳಿಸದೆ ರೈತರಿಗೆ ಅನ್ಯಾಯ ಮಾಡಿದೆ’ ಎಂದು ಹೇಳಿದರು.

ಸಂಸದರಾದ ಸುರೇಶ ಅಂಗಡಿ, ಪ್ರಹ್ಲಾದ ಜೋಶಿ, ಶಾಸಕರಾದ ಆನಂದ ಮಾಮನಿ, ಉಮೇಶ ಕತ್ತಿ, ವಿ.ಐ. ಪಾಟೀಲ, ಮುಖಂಡರಾದ ಶಶಿಕಾಂತ ನಾಯಕ, ಜಗದೀಶ ಕವಟಗಿಮಠ, ಈರಣ್ಣ ಕದಾಡಿ, ರವಿಕುಮಾರ, ಮಹಾದೇವಪ್ಪ ಯಾದವಾಡ, ಪುರಸಭೆ ಅಧ್ಯಕ್ಷ ಶಿವಾನಂದ ಪಟ್ಟಣಶೆಟ್ಟಿ, ಜಗದೀಶ ಶಿಂತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.