ADVERTISEMENT

ಮಳೆಯ ಅಬ್ಬರ; ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 5:28 IST
Last Updated 14 ಅಕ್ಟೋಬರ್ 2017, 5:28 IST

ರಾಮದುರ್ಗ: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆಯ ಅಬ್ಬರಕ್ಕೆ ಹಲವು ಮನೆಗಳು ಹಾನಿಗೊಳಗಾಗಿವೆ. ನೊಂದ ಬಡ ಜನರಿಗೆ ತಲೆ ಮೇಲೆ ಸೂರು ನಿರ್ಮಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಆಗ್ರಹಿಸಿದರು. ತಾಲ್ಲೂಕಿನ ಹಳೇ ತೊರಗಲ್‌ ಗ್ರಾಮಕ್ಕೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ, ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿದರು.

ತೊರಗಲ್‌ ಗ್ರಾಮವೊಂದರಲ್ಲಿಯೇ ಶೇ 80ರಷ್ಟು ಮನೆಗಳು ಬಿದ್ದಿವೆ. ನೀರು ಹೊಕ್ಕು ಅನೇಕ ಮನೆಗಳು ಶಿಥಿಲಾವಸ್ಥೆಗೆ ತಲುಪಿವೆ. ಹಗಲುರಾತ್ರಿ ಎಡಬಿಡದೆ ಸುರಿದ ಮಳೆಯಿಂದ ಗ್ರಾಮದಲ್ಲಿ ನಿರ್ಮಿತ ಹೊಸ ರಸ್ತೆ ಕಿತ್ತು ಹೋಗಿದೆ. ಸೇತುವೆಯೊಂದು ಸಂಪೂರ್ಣ ಕುಸಿದಿದೆ. ಶೀಘ್ರವೇ ಪರಿಹಾರ ದೊರಕಿಸಿಕೊಡಬೇಕು ಎಂದು ಹೇಳಿದರು.

ಪಟ್ಟಣ ಪ್ರದೇಶದಲ್ಲಿಯೂ ನೂರಾರು ಮನೆಗಳು ನೆಲಸಮ ಗೊಂಡಿವೆ. ಬಡ ಜನರು ಮನೆ ಇಲ್ಲದೇ ಗೋಳಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಮಳೆ ಇದೇ ರೀತಿ ಮುಂದುವರೆದರೆ ಇನ್ನಷ್ಟು ಹಾನಿಯಾಗುವ ಸಂಭವವಿದೆ ಎಂದರು.

ADVERTISEMENT

ಪಟ್ಟಣದಲ್ಲಿಯ ಕೋಟೆ ಗೋಡೆ ಕುಸಿಯುತ್ತಿದೆ. ಅದರ ಅಕ್ಕಪಕ್ಕದಲ್ಲಿ ವಾಸಿಸುವ ಜನ ಭಯಭೀತರಾಗಿ ಬದುಕುತ್ತಿದ್ದಾರೆ, ಕೋಟೆ ಗೋಡೆಯ ಮುಖ್ಯ ದ್ವಾರದ ಪಕ್ಕ ಸಂಪೂರ್ಣ ಗೋಡೆ ಬೀಳುವ ಹಂತದಲ್ಲಿದೆ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮುಸ್ತಫಾ ದಾವಲಭಾಯಿ, ಗ್ರಾಮ ಪಂಚಾಯ್ತಿ ಸದಸ್ಯ ರಫೀಕ್ ಹಾಜಿ, ನೂರ್‌ ಅಹ್ಮದ್‌ ಖಾಜಿ, ಮಹಮ್ಮದಗೌಸ ಕಟಗೇರಿ, ಆಸಿಫ್ ಹಾಜಿ, ಕುತುಬ ದಾವಲಭಾಯಿ, ಮುರ್ತೋಜಿ ಪೆಂಡಾರಿ, ಖಾಜಾಮಿರ ಖಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.